ವಿಜಯಪುರ: ಗ್ರಾಮೀಣ ಅಂಚೆ ನೌಕರರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ, ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ಕರೆ ಹಿನ್ನೆಲೆಯಲ್ಲಿ ದೇಶಾದ್ಯಂತ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಬೆಂಬಲಿಸಿ, ಜಿಲ್ಲಾ ಘಟಕದ ವತಿಯಿಂದ ನಗರದ ಮುಖ್ಯ ಅಂಚೆ ಕಚೇರಿ ಎದುರು ಮಂಗಳವಾರ ಮುಷ್ಕರ ಆರಂಭಿಸಲಾಯಿತು.
ಸಂಘದ ಸಹ ಕಾರ್ಯದರ್ಶಿ ಕೆ.ಎಸ್.ಓಂಕಾರ ಮಾತನಾಡಿ, ಕಮಲೇಶ ಚಂದ್ರ ವರದಿ ಜಾರಿಗೆ ಆಗ್ರಹಿಸಿ ನಡೆಸಿದ ಮುಷ್ಕರದ ಸಂದರ್ಭ ಆದಷ್ಟು ಶೀಘ್ರ ವರದಿ ಜಾರಿಗೆ ತರುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿತ್ತು. ಆದರೆ ಈವರೆಗೂ ಸಮರ್ಪಕವಾಗಿ ವರದಿ ಜಾರಿಗೆ ತಂದಿಲ್ಲ. 40 ವರ್ಷಗಳಿಂದ ಸೇವೆ ಸಲ್ಲಿಸಿದವರಿಗೂ, ಹೊಸದಾಗಿ ನೇಮಕಗೊಳ್ಳುವವರಿಗೂಒಂದೇ ವೇತನವಿದೆ. ಇದು ಸರಿಯಾದ ನ್ಯಾಯವಲ್ಲ. ಕೂಡಲೇ ಬದಲಾಗಬೇಕು ಎಂದರು.
12 ರಿಂದ 36 ವರ್ಷ ಸೇವೆ ಸಲ್ಲಿಸಿದವರಿಗೆ ಎರಡು ವಾರ್ಷಿಕ ಇಂಕ್ರಿಮೆಂಟ್ಕೊಡಬೇಕು. 30 ದಿನದ ರಜೆ ಕೊಡಬೇಕು. 7ನೇ ವೇತನ ವರದಿ ಸಂಪೂರ್ಣ ಜಾರಿಗೆ ತರಬೇಕು. 8 ಗಂಟೆ ಕೆಲಸ ನೀಡಿ ನೌಕರರನ್ನು ಕಾಯಂಗೊಳಿಸಬೇಕು. ಈ ಎಲ್ಲಾ ಬೇಡಿಕೆಗಳು ಈಡೇರುವವರೆಗೂ ಮುಷ್ಕರದಿಂದ ಹಿಂದೆ ಸರಿಯುವುದಿಲ್ಲ ಎಂದು ಎಚ್ಚರಿಸಿದರು.
ಸಂಘದ ಅಧ್ಯಕ್ಷ ಎಸ್.ವೈ.ತೋರತ, ಖಜಾಂಚಿ ವಿ.ವೈ.ರಜಪೂತ, ಸಂಘಟನಾ ಕಾರ್ಯದರ್ಶಿ ಜಿ.ಎಸ್.ಬೆಳ್ಳುಬ್ಬಿ, ಲೆಕ್ಕ ಪರಿಶೋಧಕ ಎಸ್.ಆರ್.ನರಳೆ, ಬಿ.ಎನ್.ಬಿರಾದಾರ, ಜಿ.ಎಸ್.ಪಾಟೀಲ, ಬಿ.ಎನ್.ಕುಲಕರ್ಣಿ, ಎ.ಎಚ್.ಕುಲಕರ್ಣಿ, ದೀಪಾ ಪೂಜಾರಿ, ಎ.ಎಸ್.ಬಿಸೆ, ಎಸ್.ಆರ್.ಭಜಂತ್ರಿ ಸೇರಿದಂತೆ ಇತರರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.