ADVERTISEMENT

ನಾಲತವಾಡ | ಭಾವೈಕ್ಯದ ಕೇಂದ್ರ ಕಂಬಾರರ ಕುಟೀರ

ಮೊಹರಂನಲ್ಲಿ ಅಲಾಯಿ ದೇವರ ಪ್ರತಿಷ್ಠಾಪಿಸುವ ಸಂಗಪ್ಪ ಕಂಬಾರ

ಮಹಾಂತೇಶ ವೀ.ನೂಲಿನವರ
Published 16 ಜುಲೈ 2024, 6:35 IST
Last Updated 16 ಜುಲೈ 2024, 6:35 IST
ನಾಲತವಾಡದ ರಸ್ತೆಯ ಪಕ್ಕದಲ್ಲಿರುವ ಶೆಡ್‌ನಲ್ಲಿ ಅಲಾಯಿ ದೇವರನ್ನು ಪ್ರತಿಷ್ಠಾಪಿಸಿದ ಸಂಗಪ್ಪ ಕಂಬಾರ
ನಾಲತವಾಡದ ರಸ್ತೆಯ ಪಕ್ಕದಲ್ಲಿರುವ ಶೆಡ್‌ನಲ್ಲಿ ಅಲಾಯಿ ದೇವರನ್ನು ಪ್ರತಿಷ್ಠಾಪಿಸಿದ ಸಂಗಪ್ಪ ಕಂಬಾರ   

ನಾಲತವಾಡ: ಬಸವಾದಿ ಶರಣರ ನಾಡಾಗಿರುವ ನಾಲತವಾಡದಲ್ಲಿ ಸಂಗಪ್ಪ ನರಸಪ್ಪ ಕಂಬಾರ ಎಂಬವರ ಧರ್ಮಾತೀತ ಆಚರಣೆ ಗಮನ ಸೆಳೆಯುತ್ತಿದ್ದು, ಭಾವೈಕ್ಯ, ಸಾಮರಸ್ಯಕ್ಕೆ ಸಾಕ್ಷಿಯಾಗಿದೆ.

ಸಂಗಪ್ಪ ನರಸಪ್ಪ ಕಂಬಾರ ಇವರು ವೈದಿಕ ಹಿಂದೂ ಸಮುದಾಯಕ್ಕೆ ಸೇರಿದ ವ್ಯಕ್ತಿ. ಮೂಲತಃ ಮುರಾಳ ಗ್ರಾಮದವರು. ತಮ್ಮ ತಂದೆಯ ಕಾಲದಲ್ಲಿ ಅಲ್ಲಿರುವ ತಮ್ಮದೇ ಸ್ವಂತದ ಮಸೀದಿ ಬಿಟ್ಟು, ಕೇಸಾಪೂರಕ್ಕೆ ಬಂದು ನೆಲೆಸಿದರು. ಕಳೆದ ಐದು ವರ್ಷಗಳಿಂದ ನಾಲತವಾಡ ರಸ್ತೆ ಪಕ್ಕದಲ್ಲಿ ಶೆಡ್ ನಿರ್ಮಿಸಿಕೊಂಡು ವಾಸವಾಗಿದ್ದಾರೆ.

ತಮ್ಮ ವಾಸದ ಶೆಡ್ ಜಾಗದಲ್ಲೇ ಪುಟ್ಟದಾದ ಮಸೀದಿಯನ್ನು ನಿರ್ಮಿಸಿಕೊಂಡು, ಕಳೆದ ಹಲವು ವರ್ಷಗಳಿಂದ ಮೊಹರಂ ವೇಳೆ ಮೌಲಾಲಿ ಅಲಾಯಿ ದೇವರನ್ನು ಪ್ರತಿಷ್ಠಾಪಿಸುತ್ತ ಬಂದಿದ್ದಾರೆ. ತಮ್ಮ ಮನೆಯ ದೇವರ ಜಗುಲಿ ಮೇಲೆ ಬಸವಾದಿ ಶರಣರ ಭಾವಚಿತ್ರ ಇಟ್ಟು ಆರಾಧಿಸುತ್ತಾರೆ.

ADVERTISEMENT

ರೈತರ ಕೊಡಲಿ, ಬೆಡಗ, ಕುರುಪೆ, ಕುಡಗೋಲು ಸೇರಿದಂತೆ ಶ್ರಮಿಕ ವರ್ಗದ ಕಬ್ಬಿಣದ ಕೆಲಸ ಮಾಡುವ ಕಮ್ಮಾರಿಕೆ ಇವರ ವೃತ್ತಿ. ಇನ್ನು ಭಕ್ತಿಯಲ್ಲಿ ಸೂಫಿ ಸಂತರಂತೆ ಬದುಕುವ ಸಂಗಪ್ಪ ಮೊಹರಂನಲ್ಲಿ ಅಲಾಯಿ ದೇವರನ್ನು ಹೊರುತ್ತಾರೆ. ನಿತ್ಯ ಮೌಲಾಲಿ ದೇವರ ಪೂಜೆ ಮಾಡುತ್ತಾರೆ. ಮೌಲಾಲಿ ದೇವರನ್ನು ಮನೆ ದೇವರಾಗಿ ಸ್ವೀಕರಿಸಿ, ನಿತ್ಯ ಪೂಜೆ ಮಾಡದೆ ಅವರು ತಮ್ಮ ಊಟ, ಉಪಹಾರ, ವೃತ್ತಿ ಆರಂಭಿಸುವುದಿಲ್ಲ.

ಮಸೀದಿ ಹಿಂಬದಿಯಲ್ಲಿ ಕತೃ ಗದ್ದುಗೆಯ ಜತೆಗೆ ಅಲಾಯಿ ದೇವರುಗಳ ಪಂಜಾಗಳನ್ನು ಪೂಜಿಸುವ ಪರಿಪಾಠವಿದೆ. ಮೊಹರಂ ಸಂದರ್ಭದಲ್ಲಿ ಕತೃ ಗದ್ದುಗೆಗೆ ಲಾಡಿಯನ್ನು (ಮೊಹರಂ ಸಂದರ್ಭದಲ್ಲಿ ಫಕೀರರಾಗುವವರು ಕೈಗೆ ಧರಿಸುವ ಕೆಂಪು ಬಣ್ಣದ ದಾರ) ಅರ್ಪಿಸಿ ಪೂಜಿಸಲಾಗುತ್ತದೆ. ಮನೆಯ ಮುಂದೆ ಅಲಾಯಿ ದೇವರ ಕುಣಿಯೂ ಇದೆ. ಮೊಹರಂ ಸಂದರ್ಭದಲ್ಲಿ ಸಂಗಪ್ಪ ಕಂಬಾರ ಉಪವಾಸವಿದ್ದು, ಕತ್ತಲ್‌ ರಾತ್ರಿಯ ದಿನದಂದು ಮನೆಯ ಮುಂದಿನ ಆವರಣದಲ್ಲಿರುವ ಅಲಾಯಿ ಕುಣಿಯಲ್ಲಿ ಬೆಂಕಿ ಹೊತ್ತಿಸಿ ಅಲಾಯಿ ಹಬ್ಬದ ಸಂಪ್ರದಾಯಗಳನ್ನು ಆಚರಣೆ ಮಾಡುತ್ತಾರೆ.

ಸಂಗಪ್ಪ ಕಂಬಾರರ ಕುಟುಂಬ ಈ ಹಿಂದಿನಿಂದಲೂ ಸೌಹಾರ್ದ ಸಾರುವ, ಭಾವೈಕ್ಯ ಬಿತ್ತುವ ಕೆಲಸಗಳನ್ನು ಮಾಡುತ್ತ ಬರುತ್ತಿದೆ. ಅಂತಹ ಭಾವೈಕ್ಯ ಪರಂಪರೆ ಈಗಲೂ ಮುಂದುವರಿಯುತ್ತ ಬಂದಿರುವುದು ವಿಶೇಷ ಹಾಗೂ ಮಾದರಿ.

ನಾಲತವಾಡದಲ್ಲಿ ಜರುಗಿದ ಮೊಹರಮ್ ಸಂಭ್ರಮದ ದೃಷ್ಯ.
ಹಿಂದೂ ಸಂಪ್ರದಾಯದ ಇವರ ಮನೆಯ ಜಗುಲಿಯ ಮೇಲೆ ಲಿಂಗಾಯತ ಧರ್ಮದ ಕುರುಹುಗಳನ್ನು ಕಾಣುತ್ತೇವೆ. ಮೌಲಾಲಿ ಅಲಾಯಿ ದೇವರ ಪೂಜೆ ನಿರಂತರವಾಗಿದ್ದು ಕೋಮು ಸೌಹಾರ್ದಕ್ಕೆ ಮಾದರಿಯಾಗಿದೆ
–ಅಮರಯ್ಯ ಸ್ವಾಮಿ ಅಸಂತಪುರಮಠ
ಸಂಗಪ್ಪ ಅವರ ಮನೆಯ ಪರಿಸರ ಕುಟುಂಬವನ್ನು ನೋಡಿದರೆ ಪುಟ್ಟದಾದ ಭಾರತವೇ ಕಾಣುತ್ತದೆ
-ಮಲ್ಲಿಕಾರ್ಜುನ ಹುಣಸಗಿ ಬಸವ ಕೇಂದ್ರದ ಸದಸ್ಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.