ADVERTISEMENT

ವಿಜಯಪುರ | ಬೆಳೆ ವಿಮೆ: ನೋಂದಣಿಗೆ ಸೂಚನೆ

ಜುಲೈ 31 ಕೊನೆಯ ದಿನ; ಬೆಳೆಗಳ ವಿವರ ದಾಖಲಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 19 ಜುಲೈ 2024, 15:41 IST
Last Updated 19 ಜುಲೈ 2024, 15:41 IST
ಟಿ.ಭೂಬಾಲನ್
ಟಿ.ಭೂಬಾಲನ್   

ವಿಜಯಪುರ: ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ ಬಿಮಾ ಯೋಜನೆಯಡಿ ಮುಂಗಾರು ಹಂಗಾಮಿನ ಕೃಷಿ ಬೆಳೆಗಳಿಗೆ ರೈತರು ತಮ್ಮ ಹೆಸರು ನೋಂ ದಾಯಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಮನವಿ ಮಾಡಿದ್ದಾರೆ.

ಗ್ರಾಮ ಪಂಚಾಯ್ತಿ ಮಟ್ಟಕ್ಕೆ ಅಧಿಸೂಚಿಸಲಾದ ಮಳೆಯಾಶ್ರಿತ ಬೆಳೆಗಳಾದ ತೊಗರಿ, ಸಜ್ಜೆ ಹಾಗೂ ನೀರಾವರಿ ಮುಸುಕಿನ ಜೋಳ ಮತ್ತು ತೊಗರಿ ಬೆಳೆಗಳಿಗೆ ವಿಮಾ ನೋಂದಣಿಗೆ ಜುಲೈ 31 ಕೊನೆಯ ದಿನವಾಗಿದೆ.

ಹೋಬಳಿ ಮಟ್ಟಕ್ಕೆ ಅಧಿಸೂಚಿತ ಬೆಳೆಗಳಾದ ನೀರಾವರಿ ಈರುಳ್ಳಿ ಹಾಗೂ ಕೆಂಪು ಮೆಣಸಿನಕಾಯಿ ಮತ್ತು ಮಳೆಯಾಶ್ರಿತ ಹತ್ತಿ ಬೆಳೆಗೆ ಆಗಸ್ಟ್‌ 16 ಕೊನೆಯ ದಿನವಾಗಿದೆ. ನೀರಾವರಿ ಶೇಂಗಾ ಹಾಗೂ ಇನ್ನುಳಿದ ಹೋಬಳಿ ಮಟ್ಟದ ಬೆಳೆಗಳಿಗೆ ಜುಲೈ 31 ಕೊನೆಯ ದಿನವಾಗಿದೆ.

ADVERTISEMENT

ರೈತರು ನೋಂದಣಿಗಾಗಿ ಫ್ರೂಟ್ಸ್ ತಂತ್ರಾಂಶದಲ್ಲಿ ಹೊಂದಿದ ಎಫ್‍ಐಡಿ ಸಂಖ್ಯೆಯನ್ನು ಹಾಗೂ ತಮ್ಮ ಬ್ಯಾಂಕ್ ಖಾತೆಯನ್ನು ಆಧಾರ್‌ ಜೊತೆಗೆ ಎನ್‍ಪಿಸಿಐ ಸೀಡಿಂಗ್ ಮಾಡಿಸಿರಬೇಕು. ಆಧಾರ್‌ ಕಾರ್ಡ್‌ ಝರಾಕ್ಸ್‌ ಪ್ರತಿ, ಪಹಣಿ ಪತ್ರಿಕೆ ಹಾಗೂ ಬ್ಯಾಂಕ್ ಪಾಸ್ ಬುಕ್ ಪ್ರತಿ ದಾಖಲೆಗಳೊಂದಿಗೆ ಹತ್ತಿರದ ಬ್ಯಾಂಕ್ ಶಾಖೆಗಳಲ್ಲಿ ಅಥವಾ ಗ್ರಾಮ ಒನ್ ಕೇಂದ್ರ ಅಥವಾ ಸಿಎಸ್‍ಸಿ ಕೇಂದ್ರದಲ್ಲಿ ಬೆಳೆ ವಿಮೆ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಓರಿಯೆಂಟೆಲ್ ಜನರಲ್ ಇನ್‌ಶ್ಯೂರೆನ್ಸ್‌ ಕಂಪನಿಯ ಪ್ರತಿನಿಧಿ ಅಥವಾ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಳೆಗಳ ವಿವರ ದಾಖಲಿಸಲು ಮನವಿ: ಜಿಲ್ಲೆಯ ರೈತರು ಮುಂಗಾರು ಹಂಗಾಮಿನಲ್ಲಿ ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ವಿವರಗಳನ್ನು ಮುಂಗಾರು ರೈತರ ಬೆಳೆ ಸಮೀಕ್ಷೆ ಮೊಬೈಲ್ ಆಪ್‍ನಲ್ಲಿ ದಾಖಲಿಸುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್  ಮನವಿ ಮಾಡಿದ್ದಾರೆ.

ರೈತರು ಗೂಗಲ್ ಪ್ಲೇ ಸ್ಟೋರ್ ಅಥವಾ ಕ್ಯೂ ಆರ್ ಕೋಡ್‍ನಿಂದ ಮುಂಗಾರು ಬೆಳೆ ಸಮೀಕ್ಷೆ ಆ್ಯಪ್ ಡೌನ್‍ಲೋಡ್ ಮಾಡಿಕೊಂಡು, ಸ್ವತ: ತಾವೇ ಬೆಳೆ ಸಮೀಕ್ಷೆ ಮಾಡಿ, ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ವಿವರಗಳನ್ನು ದಾಖಲಿಸಬಹುದಾಗಿದೆ.

ಬೆಳೆ ಸಮೀಕ್ಷೆ ಮಾಡಿಕೊಳ್ಳಲು ಆ.31 ರವರೆಗೆ ಅವಕಾಶ ಕಲ್ಪಿಸಲಾಗಿದೆ. ಒಂದು ವೇಳೆ ರೈತರು ತಮ್ಮ ಜಮೀನಿನ ಬೆಳೆ ಸಮೀಕ್ಷೆಯನ್ನು ತಾವೇ ಕೈಗೊಳ್ಳಲು ಸಾಧ್ಯವಾಗದಿದ್ದಲ್ಲಿ ತಮ್ಮ ಜಮೀನಿನಲ್ಲಿ ಬೆಳೆದ ವಿವಿಧ ಬೆಳೆಗಳ ಮಾಹಿತಿಯನ್ನು ಖಾಸಗಿ ನಿವಾಸಿಗಳ ಮೂಲಕ ಖುದ್ದಾಗಿ ಕ್ಷೇತ್ರದಲ್ಲಿದ್ದು, ಆಗಸ್ಟ್‌ 15 ರಿಂದ 30- ರೊಳಗಾಗಿ ನಿಖರವಾಗಿ ದಾಖಲಿಸಿಕೊಳ್ಳುವಂತೆ ಮನವಿ ಮಾಡಲಾಗಿದೆ.

ಬೆಳೆ ಸಮೀಕ್ಷೆ ಆ್ಯಪ್‍ನಲ್ಲಿ ದಾಖಲಾಗುವ ಮಾಹಿತಿಯನ್ನು ಬೆಳೆ ಸಾಲ, ಬೆಳೆ ವಿಮೆ, ಬೆಂಬಲ ಬೆಲೆ ಖರೀದಿ, ಬೆಳೆ ಪರಿಹಾರ, ಪಹಣಿಯಲ್ಲಿ ಬೆಳೆ ವಿವರಗಳನ್ನು ದಾಖಲಿಸಲು ಮತ್ತು ವಿವಿಧ ಇಲಾಖೆಗಳ ಸವಲತ್ತುಗಳನ್ನು ಪಡೆಯಲು ಉಪಯೋಗಿಸಲಾಗುವುದು. ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಂಡು ಜಮೀನಿನಲ್ಲಿ ಬೆಳೆದ ಬೆಳೆ ವಿವರಗಳನ್ನು ನಿಗದಿತ ಸಮಯದೊಳಗೆ ದಾಖಲಿಸಬೇಕು.

ಮಾಹಿತಿಗಾಗಿ ತಮ್ಮ ಗ್ರಾಮಕ್ಕೆ ನಿಯೋಜಿಸಲಾದ ಖಾಸಗಿ ನಿವಾಸಿ (ಪಿಆರ್)ಗಳನ್ನು ಅಥವಾ ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.