ADVERTISEMENT

ವಕ್ಫ್‌ ಕಾಯ್ದೆಯ ಅಪರಿಮಿತ ಅಧಿಕಾರ ಶೀಘ್ರ ರದ್ದು: ಕೇಂದ್ರ ಸಚಿವ ಪ್ರಹ್ಲಾದ ಜೋಶಿ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2024, 13:23 IST
Last Updated 30 ಅಕ್ಟೋಬರ್ 2024, 13:23 IST
<div class="paragraphs"><p>ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿದರು</p></div>

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿದರು

   

ವಿಜಯಪುರ: ‘ದೇಶದಲ್ಲಿ ವಕ್ಫ್‌ ಕಾಯ್ದೆಗೆ ಇರುವ ನಿರಂಕುಶ, ಅಪರಿಮಿತ ಅಧಿಕಾರವನ್ನು ಕೇಂದ್ರ ಸರ್ಕಾರ ಶೀಘ್ರವೇ ರದ್ದು ಮಾಡಲಿದೆ’ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ವಕ್ಪ್‌ ಆಸ್ತಿ ವಿವಾದ ಸಂಬಂಧಿಸಿದಂತೆ ಜಿಲ್ಲೆಯ ರೈತರು ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಸ್ಥಳಕ್ಕೆ ಬುಧವಾರ ಭೇಟಿ ನೀಡಿ, ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು.

ADVERTISEMENT

‘ಮುಂದಿನ ಅಧಿವೇಶನದಲ್ಲಿ ವಕ್ಪ್‌ ಕಾಯ್ದೆಗೆ ತಿದ್ದುಪಡಿ ತರುಲು ಕೇಂದ್ರ ಸರ್ಕಾರ ಮುಂದಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರ ವಕ್ಫ್ ಮಂಡಳಿ ಮೂಲಕ ರೈತರ ಭೂಮಿ ವಶಪಡಿಸಿಕೊಳ್ಳಲು ಷಡ್ಯಂತ್ರ ರೂಪಿಸಿದೆ’ ಎಂದು ಆಪಾದಿಸಿದರು.

‘ಕೇಂದ್ರ ಸರ್ಕಾರದ ವಕ್ಫ್‌ ತಿದ್ದುಪಡಿ ಕಾಯ್ದೆ ಜಾರಿಗೆ ಬರುವವರೆಗೂ ರಾಜ್ಯ ಸರ್ಕಾರ ವಕ್ಫ್‌ ಅದಾಲತ್ ನಡೆಸಬಾರದು. ವಕ್ಫ್‌ ಹೆಸರಿನಲ್ಲಿ ರೈತರ ಆರ್‌ಟಿಸಿಯಲ್ಲಿ ನಮೂದಾಗಿರುವ ಮತ್ತು ಮ್ಯೂಟೇಶನ್‌ ಮಾಡಿರುವ ಎಲ್ಲ ಪ್ರಕರಣವನ್ನು ತಕ್ಷಣ ಹಿಂತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.

‘ರೈತರ ಜಮೀನಿನ ಆರ್‌ಟಿಸಿಯ ಕಾಲಂ 9 ಮತ್ತು 11ರಲ್ಲಿ ವಕ್ಫ್‌ ಎಂದು ನಮೂದು ಮಾಡಿರುವುದನ್ನು ತೆಗೆದು ಹಾಕಬೇಕು. ರೈತರಿಗೆ ನೋಟಿಸ್‌ ನೀಡದೇ ವಕ್ಫ್‌ ಹೆಸರಿನಲ್ಲಿ ಆಸ್ತಿಯನ್ನು ಮ್ಯೂಟೇಶನ್‌ ಮಾಡಿರುವ ಇಂಡಿ, ಸಿಂದಗಿ ತಹಶೀಲ್ದಾರ್‌ ಅವರನ್ನು ತಕ್ಷಣ ಅಮಾನತು ಮಾಡಬೇಕು’ ಎಂದು ಒತ್ತಾಯಿಸಿದರು.

‘ಸಚಿವ ಜಮೀರ್‌ ಅಹಮದ್‌ ಅವರು ಮುಖ್ಯಮಂತ್ರಿ ಸೂಚನೆ ಮೇರೆಗೆ ವಕ್ಫ್‌ ಅದಾಲತ್‌ ಮಾಡಿದ್ದೇನೆ ಎಂದು ಹೇಳುತ್ತಿದ್ದಾರೆ. ವಕ್ಫ್‌ ಆದಾಲತ್‌ ಮಾಡಲು ಸಿದ್ದರಾಮಯ್ಯ ಅವರ ಕುಮ್ಮಕ್ಕು, ಸೂಚನೆ ಇದೆಯಾ ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದರು.

‘ರಾಜ್ಯದಲ್ಲಿ ಕ್ಷೋಬೆ ಉಂಟುಮಾಡಲು ಯತ್ನಿಸಿರುವ ಸಮಾಜದ್ರೋಹಿ ಸಚಿವ ಜಮೀರ್ ಅಹಮದ್‌ ಅವರನ್ನು ತಕ್ಷಣದಿಂದಲೇ ಸಚಿವ ಸಂಪುಟದಿಂದ ವಜಾ ಮಾಡಬೇಕು’ ಎಂದು ಒತ್ತಾಯಿಸಿದರು.

‘ರಾಜ್ಯದ ರೈತರು ತಮ್ಮ ಆಸ್ತಿಯ ಆರ್‌ಟಿಸಿಯನ್ನು ಪರಿಶೀಲಿಸಿಕೊಳ್ಳಬೇಕು. ವಕ್ಫ್‌ ವಿವಾದವನ್ನು ಬಿಜೆಪಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಿದೆ’ ಎಂದು ಹೇಳಿದರು.

‘ರೈತರು ತಮ್ಮ ಆರ್‌ಟಿಸಿಯನ್ನು ಪರಿಶೀಲಿಸಬಾರದು ಎಂಬ ಕಾರಣಕ್ಕೆ ಕಳೆದ ಎರಡು ದಿನಗಳಿಂದ ‘ಭೂಮಿ’ ತಂತ್ರಾಂಶವನ್ನು ರಾಜ್ಯ ಸರ್ಕಾರ ಬಂದ್‌ ಮಾಡಿದೆ’ ಎಂದು ಆರೋಪಿಸಿದರು.

ಸಂಸದರಾದ ರಮೇಶ ಜಿಗಜಿಣಗಿ, ಗೋವಿಂದ ಕಾರಜೋಳ, ಶಾಸಕ ಬಸನಗೌಡ ಪಾಟೀಲ ಯತ್ನಾಳ, ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಎಸ್‌.ಪಾಟೀಲ ಕೂಚಬಾಳ, ಮಾಜಿ ಶಾಸಕ ಎಸ್‌.ಕೆ.ಬೆಳ್ಳುಬ್ಬಿ, ರಮೇಶ ಭೂಸನೂರ, ಬಿಜೆಪಿ ಮುಖಂಡ ಉಮೇಶ ಕಾರಜೋಳ, ವಿಜುಗೌಡ ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.