ADVERTISEMENT

ಇಂಡಿಯಲ್ಲಿ ಕೈಗಾರಿಕೆ ಸ್ಥಾಪನೆಗೆ ಆದ್ಯತೆ: ಶಾಸಕ ಯಶವಂತರಾಯಗೌಡ ಪಾಟೀಲ ಭರವಸೆ

ಶಾಸಕ ಯಶವಂತರಾಯಗೌಡ ಪಾಟೀಲ ಭರವಸೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2023, 12:33 IST
Last Updated 20 ಏಪ್ರಿಲ್ 2023, 12:33 IST
ಯಶವಂತರಾಯಗೌಡ ಪಾಟೀಲ
ಯಶವಂತರಾಯಗೌಡ ಪಾಟೀಲ   

ವಿಜಯಪುರ: ಇಂಡಿ ಮತಕ್ಷೇತ್ರ ಅಭಿವೃದ್ಧಿಯಾಗಬೇಕಿದ್ದರೆ ಕೈಗಾರಿಕೆ ಬೆಳವಣಿಗೆಯಾಗಬೇಕು. ಈ ನಿಟ್ಟಿನಲ್ಲಿ ಪಟ್ಟಣದ ರೈಲ್ವೆ ಸ್ಟೇಶನ್ ಬಳಿ ಕೈಗಾರಿಕೆಗಾಗಿ ಸ್ಥಳಾವಕಾಶದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇಲ್ಲಿ ಸಣ್ಣ, ಮಧ್ಯಮ ಕೈಗಾರಿಕೆಗಳನ್ನು ಮಾಡುವುದರಿಂದ ಯವಕರಿಗೆ ಉದ್ಯೋಗದ ಅವಕಾಶ ಸಿಗುತ್ತದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಇಂಡಿ ವಿಧಾನಸಭಾ ಕ್ಷೇತ್ರದ ವಿವಿಧ ಹಳ್ಳಿಗಳಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಬರುವುದು ಶತಸಿದ್ದ. ನಮ್ಮ ಪಾಲಿನ ಕೃಷ್ಣಾ ಮೇಲ್ದಂಡೆ ಯೋಜನೆಯ 80 ಟಿಎಂಸಿ ನೀರನ್ನು ಸದ್ಭಳಕೆ ಮಾಡಿಕೊಳ್ಳವ ಮೂಲಕ ಇಂಡಿ ತಾಲ್ಲೂಕು ಸಮೃದ್ದ ಹಸಿರು ನಾಡನ್ನಾಗಿ ಮಾಡುತ್ತೇನೆ. ನಾವು ಮಾಡಿರುವ ಕಾರ್ಯಗಳು ನಮ್ಮನ್ನು ಗುರುತಿಸಿ, ಸ್ಮರಿಸುವಂತಾಗಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ADVERTISEMENT

ನಮ್ಮ ಭಾಗ ನೀರಾವರಿಯಿಂದ ವಂಚಿತವಾಗಲೂ ಈ ಹಿಂದೆ ನಮ್ಮನ್ನಾಳಿದ ಜನ ಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ ಕಾರಣ. ಕುಡಿಯುವ ನೀರಿಗೂ ಕಷ್ಟ ಪಡಬೇಕಾಗಿತ್ತು. ಆದರೆ, ಇದೀಗ ಕುಡಿಯುವ ನೀರಿನ ತೊಂದರೆ ಪರಿಹಾರವಾಗಿದೆ ಎಂದರು.

ನಮ್ಮ ಭಾಗ ನೀರಾವರಿಯಾಗಿ ಹಸಿರಿನಿಂದ ಕಂಗೊಳಿಸಿದಾಗ ಮಾತ್ರ ತೃಪ್ತಿಯಾಗುತ್ತದೆಯೋ ಅಲ್ಲಿವರೆಗೆ ವಿಶ್ರಮಿಸುವುದಿಲ್ಲ. ಅದಕ್ಕಾಗಿ ನೀವು ನನ್ನ ಮೇಲೆ ಪ್ರೀತಿ ವಿಶ್ವಾಸ ಇಟ್ಟಿದ್ದಿರಿ. ಇದನ್ನು ಉಳಿಸಿ ಇಂಡಿ ಮತಕ್ಷೇತ್ರದತ್ತ ರಾಜ್ಯದ ಜನ ತಿರುಗಿ ನೋಡುವಂತಾಗಬೇಕು ಎಂಬುದೆ ನನ್ನ ಸದಾಶಯವಾಗಿದೆ ಎಂದರು.

ಹೃದಯ ವೈಶಾಲತೆವುಳ್ಳ ನೀವುಗಳು ಮತ್ತೊಮ್ಮೆ ನನಗೆ ಕೂಲಿ ರೂಪದಲ್ಲಿ ಮತ ನೀಡಿ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.

ಇಂಡಿ ಪಟ್ಟಣವನ್ನು ಜಿಲ್ಲಾ ಕೇಂದ್ರಕ್ಕೆ ಅರ್ಹತೆಗೆ ಅನುಗುಣವಾಗಿ ಮಿನಿವಿಧಾನ ಸೌಧ ನಿರ್ಮಾಣ, ಕೃಷಿ ವಿಜ್ಞಾನ ಕೇಂದ್ರ, ರಸ್ತೆ ಅಗಲೀಕರಣ, ಬಸ್ ಡೀಫೊ ಸೇರಿದಂತೆ ಮುಂತಾದ ಮೂಲ ಸೌಲಭ್ಯಗಳನ್ನು ಒದಗಿಸಿ ಅಭಿವೃದ್ಧಿ ಪಡಿಸಿ, ಒಂದೇ ಸೂರಿನಡಿಯಲ್ಲಿ ಎಲ್ಲಾ ಸರ್ಕಾರಿ ಕಚೇರಿಗಳು ಈಗ ಕಾರ್ಯನಿರ್ವಹಿಸುತ್ತಿವೆ ಎಂದರು.

ಇಂಡಿ ಜಿಲ್ಲಾ ಕೇಂದ್ರವನ್ನಾಗಿಸಲೂ ಹಾಗೂ ಸಂಪೂರ್ಣ ನೀರಾವರಿ ಮತ್ತು ಇನ್ನಷ್ಟು ಅಭಿವೃದ್ಧಿಗೆ ಬರುವ ಮೇ 10 ರಂದು ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ನನಗೆ ತಮ್ಮ ಅಮೂಲ್ಯವಾದ ಮತವನ್ನು ನೀಡಿ, ಅಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿಕೊಂಡರು.

***

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ತಕ್ಷಣ ಪ್ರತಿ ಮನೆಗೆ 200 ಯುನಿಟ್‌ ಉಚಿತ ವಿದ್ಯುತ್‌, ನಿರುದ್ಯೋಗಿಗಳಿಗೆ ಭತ್ಯೆ, ಮನೆಯ ಹಿರಿಯ ಮಹಿಳೆಗೆ ₹2 ಸಾವಿರ ಮಾಸಾಶನ, 10 ಕೆ.ಜಿ ಉಚಿತ ಅಕ್ಕಿ ನೀಡಲಾಗುವುದು

– ಯಶವಂತರಾಯಗೌಡ ಪಾಟೀಲ, ಕಾಂಗ್ರೆಸ್‌ ಅಭ್ಯರ್ಥಿ, ಇಂಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.