ವಿಜಯಪುರ:ನಗರದಲ್ಲಿರುವ ಆದಿಲ್‌ಶಾಹಿ ಅರಸರ ಐತಿಹಾಸಿಕ ಸ್ಮಾರಕಗಳಾದ ಗೋಳಗುಮ್ಮಟ, ಇಬ್ರಾಹಿಂ ರೋಜಾ ಪ್ರವೇಶ ಶುಲ್ಕದಲ್ಲಿ ಭಾರಿ ಏರಿಕೆಯಾಗಿದ್ದು, ಪ್ರವಾಸಿಗರ ಜೇಬಿಗೆ ಹೊರೆಯಾದರೆ, ಸ್ಥಳೀಯರಿಗೆ ಬರೆ ಹಾಕಿದಂತಾಗಿದೆ.
ಭಾರತೀಯ ಪುರಾತತ್ವ ಇಲಾಖೆ ಏಕಾಏಕಿ, ಐತಿಹಾಸಿಕ ಸ್ಮಾರಕಗಳ ಪ್ರವೇಶ ಟಿಕೆಟ್ ದರವನ್ನು ಭಾರಿ ಹೆಚ್ಚಳ ಮಾಡಿದ್ದರಿಂದ ಸ್ಥಳೀಯರು ಸೇರಿದಂತೆ, ಹೊರಗಡೆಯಿಂದ ಬರುವ ಪ್ರವಾಸಿಗರಿಗೆ ಇದು ದುಬಾರಿಯಾಗಿದೆ. ಶಾಲಾ–ಕಾಲೇಜು ವಿದ್ಯಾರ್ಥಿಗಳು ₹ 25 ಕೊಟ್ಟು ಟಿಕೆಟ್ ಪಡೆಯುವುದು ಕಷ್ಟ. ಮನೆಗೆ ಬಂದ ಬೀಗರನ್ನು ಕರೆದೊಯ್ಯಲು ಯೋಚನೆ ಮಾಡುವಂತಾಗಿದೆ ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿವೆ.
‘ಗೋಳಗುಮ್ಮಟ ನೋಡಾಕ ಟಿಕೆಟ್ ದರ ಬಹಳ ಹೆಚ್ಚು ಆಗ್ಯಾದ. ಈ ಹಿಂದೆ ಬಂದಾಗ ಬರೀ ₹ 10 ಇತ್ತು. ಈಗ ಕೇಳಿದ್ರ ₹ 25 ಆಗ್ಯಾದ ಅಂಥ ಹೇಳಿದ್ರು. ಏಳು ಜನ ಬಂದೀವಿ. ₹ 70ರಲ್ಲೇ ಮುಗಿತಾದ ಅನ್ಕೊಂಡಿದ್ವಿ. ಬರೋಬ್ಬರಿ ₹ 175 ಕೊಟ್ಟು ಒಳಗ ಹೊಂಟೇವಿ ನೋಡ್ರಿ...
ಇದರ ಜತೆಗೆ ರಾಜರ ಕಾಲದ ವಸ್ತುಗಳಿರುವ ಕಟ್ಟಡದಾಗ ಹೋಗಾಕ ಬ್ಯಾರೆ ₹ 5 ಕೊಡಬೇಕು. ರೊಕ್ಕ ಹೆಚ್ಚಿಗಿ ಮಾಡಿದ್ದು ನಮ್ಮಂತಹ ಬಡವರಿಗೆ ಬಹಳ ತೊಂದ್ರೆ ಆಗ್ತಾದ’ ಎಂದು ಬಸವನಬಾಗೇವಾಡಿ ತಾಲ್ಲೂಕು ಆಲಮಟ್ಟಿಯ ಅಕ್ಕಮ್ಮ ಬಿಜಾಪುರ ತಿಳಿಸಿದರು.
‘ಟಿಕೆಟ್ ದರ ಹೆಚ್ಚಳ ಮಾಡಿರುವುದು ನಮ್ಮಂತವರಿಗೆ ಏನು ತೊಂದರೆ ಆಗೋದಿಲ್ಲ. ಆದರೆ, ಬಡವರು, ಮಧ್ಯಮ ವರ್ಗದ ಜನರಿಗೆ ಬಹಳ ತೊಂದರೆ ಆಗುತ್ತದೆ. ಶಾಲಾ–ಕಾಲೇಜು ವಿದ್ಯಾರ್ಥಿಗಳಿಗಾದರೂ ವಿನಾಯಿತಿ ನೀಡಬೇಕಿತ್ತು. ಸರ್ಕಾರ ಪ್ರವಾಸೋದ್ಯಮ ಇಲಾಖೆಗಳಿಂದ ಲಾಭದ ನಿರೀಕ್ಷೆಯಿಂದ ಹಿಂದೆ ಸರಿದು ಟಿಕೆಟ್ ದರದಲ್ಲಿ ಸ್ವಲ್ಪ ಇಳಿಕೆ ಮಾಡಿದರೆ ಒಳ್ಳೆಯದು’ ಎನ್ನುತ್ತಾರೆ ಹುಬ್ಬಳ್ಳಿಯ ಚಿದಾನಂದ ಗಂಗಾವತಿ.
‘ಭಾರತೀಯ ಪುರಾತತ್ವ ಇಲಾಖೆಯಿಂದ ದೇಶಾದ್ಯಂತ ಇರುವ ಪ್ರಮುಖ ಐತಿಹಾಸಿಕ ಸ್ಮಾರಕಗಳ ಟಿಕೆಟ್ ದರ ಏರಿಕೆ ಮಾಡಿದಂತೆ, ನಗರದ ಗೋಳಗುಮ್ಮಟ ಹಾಗೂ ಇಬ್ರಾಹಿಂ ರೋಜಾ ಸ್ಮಾರಕಗಳ ಟಿಕೆಟ್ ದರ ಭಾರತೀಯರಿಗೆ ₹ 15ರಿಂದ ₹ 25 ಹಾಗೂ ವಿದೇಶಿಗರಿಗೆ ₹ 200ರಿಂದ ₹ 300ಕ್ಕೆ ಹೆಚ್ಚಿಸಲಾಗಿದೆ. ಈ ಕುರಿತು ಟಿಕೆಟ್ ಕೌಂಟರ್ ಎದುರು ನೋಟಿಫಿಕೇಷನ್ ಹಾಕಲಾಗಿದೆ.
ಸಾಮಾನ್ಯ ದಿನಗಳಲ್ಲಿ ಗೋಳಗುಮ್ಮಟ ವೀಕ್ಷಿಸುವರ ಸಂಖ್ಯೆ 1500ರಿಂದ 2000, ಪ್ರವಾಸೋದ್ಯಮ ಸಮಯ 3500ರಿಂದ 4000. ಇಬ್ರಾಹಿಂ ರೋಜಾವನ್ನು ಸಾಮಾನ್ಯ ದಿನಗಳಲ್ಲಿ 400ರಿಂದ 500, ಪ್ರವಾಸೋದ್ಯಮ ಸಮಯದಲ್ಲಿ 1000 ಜನರು ವೀಕ್ಷಿಸುತ್ತಾರೆ. ಆದರೆ ಈಗಿನ ದರ ಹೆಚ್ಚಳದಿಂದ ಪ್ರವಾಸಿಗರ ಸಂಖ್ಯೆಯಲ್ಲಿ ಯಾವುದೇ ರೀತಿಯ ವ್ಯತ್ಯಾಸವಾಗಿಲ್ಲ’ ಎಂದು ಪ್ರಾಚ್ಯ ವಸ್ತು ಇಲಾಖೆ ಅಧಿಕಾರಿ ಮೌನೇಶ ಕುರವತ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.