ADVERTISEMENT

ನೈತಿಕ ಹೊಣೆ ಹೊತ್ತು ಪ್ರಧಾನಿ ರಾಜೀನಾಮೆ ನೀಡಲಿ: ಜಿಗ್ನೇಶ್‌ ಮೇವಾನಿ

​ಪ್ರಜಾವಾಣಿ ವಾರ್ತೆ
Published 1 ಮೇ 2024, 15:30 IST
Last Updated 1 ಮೇ 2024, 15:30 IST
ಜಿಗ್ನೇಶ್‌ ಮೇವಾನಿ
ಜಿಗ್ನೇಶ್‌ ಮೇವಾನಿ   

ವಿಜಯಪುರ: ‘ಸಂಸದ ಪ್ರಜ್ವಲ್‌ ರೇವಣ್ಣ ಅತ್ಯಾಚಾರಿ ಎಂಬುದು ಮೊದಲೇ ಗೊತ್ತಿದ್ದೂ ಆತನಿಗೆ ಲೋಕಸಭೆ ಟಿಕೆಟ್ ಕೊಟ್ಟು, ಚುನಾವಣೆ ಪ್ರಚಾರ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು’ ಎಂದು ಗುಜರಾತ್‌ ಶಾಸಕ, ಸಾಮಾಜಿಕ ಹೋರಾಟಗಾರ ಜಿಗ್ನೇಶ್‌ ಮೇವಾನಿ ಆಗ್ರಹಿಸಿದರು.

‘ಬೆಳಿಗ್ಗೆಯಿಂದ ಸಂಜೆವರೆಗೆ ಯಾರು ಭಾರತ ಮಾತಾಕೀ ಜೈ ಎನ್ನುತ್ತಿದ್ದಾರೋ, ಅವರ ಬೆಂಬಲಿಗರು ಮಾಡಿರುವ ಅಸಹ್ಯ ಕೃತ್ಯ ಇದು. ಕರ್ನಾಟಕ ಮಾತ್ರವಲ್ಲದೇ ಇಡೀ ಭಾರತದ ಇತಿಹಾಸದಲ್ಲೇ ಇದೊಂದು ಕಂಡು ಕೇಳರಿಯದ ಕಳಂಕಿತ ಅಧ್ಯಾಯವಾಗಿದೆ’ ಎಂದು ಅವರು ಬುಧವಾರ ಸುದ್ದಿಗಾರರಿಗೆ ತಿಳಿಸಿದರು.

‘ಪ್ರಜ್ವಲ್‌ ರೇವಣ್ಣ ಮಾಡಿರುವ ಹೇಯ ಕೃತ್ಯ ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವ ವಿಚಾರ. ಇಂತಹ ಕಾಮುಕನಿಗೆ ಬಿಜೆಪಿ ಬೆಂಬಲ ನೀಡಿದ್ದು ನಾಚಿಕೆಗೇಡಿನ ಸಂಗತಿ. ಬಿಜೆಪಿಯ ನಿಜವಾದ ಮುಖ ಇದು. ಪ್ರಧಾನಿ ಮೋದಿ, ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಮಹಿಳೆಯರ ಬಗ್ಗೆ ಕನಿಷ್ಠ ಗೌರವ ಇಲ್ಲ ಎಂಬುದು ಮತ್ತೊಮ್ಮೆ ಈ ಘಟನೆಯಿಂದ ಸಾಬೀತಾಗಿದೆ. ಇದು ಭಾರತದ ಎಲ್ಲ ಮಹಿಳೆಯರ ಮೇಲೆ ನಡೆದ ಬಲತ್ಕಾರವಾಗಿದೆ’ ಎಂದು ಆರೋಪಿಸಿದರು.

ADVERTISEMENT

‘ದೆಹಲಿಯಲ್ಲಿ ಲೈಂಗಿಕ ದೌರ್ಜನ್ಯ ಖಂಡಿಸಿ ಮಹಿಳಾ ಕುಸ್ತಿಪಟುಗಳು ಪ್ರತಿಭಟನೆ ಮಾಡಿದರೂ ಪ್ರಧಾನಿ ಸ್ಪಂದಿಸಲಿಲ್ಲ.‌

ಮಣಿಪುರದಲ್ಲಿ ಮಹಿಳೆಯನ್ನು ಬೆತ್ತಲೆ ಮೆರವಣಿಗೆ ಮಾಡಿದರೂ ಪ್ರಧಾನಿ ಸ್ಪಂದಿಸಲಿಲ್ಲ, ಗುಜರಾತ್‌ನಲ್ಲಿ ಬಿಲ್ಕಿಸ್ ಬಾನು ಮೇಲೆ ಅತ್ಯಾಚಾರ ಎಸಗಿದ ಅಪರಾಧಿಗಳನ್ನು ಜೈಲಿನಿಂದ ಕರೆತರುವಾಗ ಸಂಭ್ರಮದಿಂದ ಸ್ವಾಗತಿಸಿದರೂ ಪ್ರಧಾನಿ ಕಣ್ತೆರೆಯಲಿಲ್ಲ. ಇದುವೇ ಪ್ರಧಾನಿ ಮೋದಿ ಹಾಗೂ ಬಿಜೆಪಿ, ಆರ್‌ಎಸ್‌ಎಸ್‌ನ ನಿಜವಾದ ಮುಖ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.