ತಿಕೋಟಾ: ತಾಲ್ಲೂಕಿನ ಕಳ್ಳಕವಟಗಿ ಗ್ರಾಮದ ಗದ್ಯಾಳ ತೋಟದ ವಸ್ತಿಯ 60 ಅಡಿ ಆಳದ ಬಾವಿಗೆ, ಶುಕ್ರವಾರ ಬೆಳಿಗ್ಗೆ ಆಯತಪ್ಪಿ ಬಿದ್ದ ತಂಗೆವ್ವ ಗದ್ಯಾಳ (85) ಎಂಬುವರನ್ನು ಸ್ಥಳೀಯರೇ ರಕ್ಷಿಸಿದ್ದಾರೆ.
60 ಅಡಿ ಆಳದ ಬಾವಿಯಲ್ಲಿ ಎಂಟು ಅಡಿ ನೀರಿತ್ತು. ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಿ, ಬಾವಿಯಲ್ಲಿ ಸಂಗ್ರಹಿಸಲಾಗಿತ್ತು.
ಅಜ್ಜಿ ಆಯತಪ್ಪಿ ಬಾವಿಯೊಳಗೆ ಬಿದ್ದಿದ್ದಾರೆ. ಬಾವಿಗೆ ಅಳವಡಿಸಿದ್ದ ನೀರಿನ ಪಂಪ್‌ಸೆಟ್‌ನ ಪೈಪ್ ಹಿಡಿದುಕೊಂಡೇ ಒಂದು ತಾಸು ಬಾವಿಯೊಳಗೆ ನಿಂತಿದ್ದಾರೆ.
ಮನೆಯವರೆಲ್ಲರೂ ಅಜ್ಜಿಗಾಗಿ ಪಕ್ಕದ ತೋಟದ ವಸ್ತಿಯ ಎಲ್ಲ ಮನೆಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಎಲ್ಲೂ ಕಾಣದಿದ್ದಾಗ ಕೊನೆಗೆ ಬಾವಿಯೊಳಗೆ ಇಣುಕಿ ನೋಡಿದಾಗ; ಅಜ್ಜಿ ಪೈಪ್ ಹಿಡಿದುಕೊಂಡು ನಿಂತಿದ್ದು ಗೋಚರಿಸಿದೆ.
ವಸ್ತಿಯ ಜನರು, ಊರಿನ ಗ್ರಾಮಸ್ಥರು ಸೇರಿ, ಮಂಚಕ್ಕೆ ಹಗ್ಗವನ್ನು ಕಟ್ಟಿ, ಅದನ್ನು ಬಾವಿಯೊಳಗೆ ಬಿಟ್ಟು ಅಜ್ಜಿಯನ್ನು ಮೇಲೆತ್ತಿ ರಕ್ಷಿಸಿದರು ಎಂದು ಪ್ರತ್ಯಕ್ಷದರ್ಶಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.