ADVERTISEMENT

ಹೋರಾಟ ಬಗ್ಗು ಬಡಿಯುವ ಕುತಂತ್ರ: ಶಿವಾನಂದ ವಾಲಿ

​ಪ್ರಜಾವಾಣಿ ವಾರ್ತೆ
Published 9 ಜೂನ್ 2024, 7:11 IST
Last Updated 9 ಜೂನ್ 2024, 7:11 IST
ನಾಲತವಾಡ ಸಮೀಪದ ಅಮರೇಶ್ವರ ದೇವಸ್ಥಾನದ ಮುಂದೆ ಯುವ ಜನ ಸಂಘಟನೆ ರಾಜ್ಯಾಧ್ಯಕ್ಷ ಶಿವಾನಂದ ವಾಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದರು
ನಾಲತವಾಡ ಸಮೀಪದ ಅಮರೇಶ್ವರ ದೇವಸ್ಥಾನದ ಮುಂದೆ ಯುವ ಜನ ಸಂಘಟನೆ ರಾಜ್ಯಾಧ್ಯಕ್ಷ ಶಿವಾನಂದ ವಾಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದರು   

ನಾಲತವಾಡ: ಚಿಮ್ಮಲಗಿ ಹಾಗೂ ನಾಗರಬೆಟ್ಟ ಏತ ನೀರಾವರಿ ಕಾಲುವೆಯ ಬಾಕಿ ಕಾಮಗಾರಿ ಶೀಘ್ರದಲ್ಲೇ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ಯುವ ಜನ ಸಂಘಟನೆ ರಾಜ್ಯಾಧ್ಯಕ್ಷ ಶಿವಾನಂದ ವಾಲಿ ಶನಿವಾರ ವೀರೇಶ್ವರ ವೃತ್ತದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದರು.

‘ನನ್ನ ಹೋರಾಟ ಪಕ್ಷಾತೀತ ಮತ್ತು ಜಾತ್ಯತೀತವಾಗಿದೆ. ಅಪ ಪ್ರಚಾರ ಮಾಡಿ ಹೋರಾಟವನ್ನು ಬಗ್ಗು ಬಡಿಯುವ ಕೆಲಸವನ್ನು ಕೆಲವು ಕುತಂತ್ರಿಗಳು ಮಾಡುತ್ತಿದ್ದಾರೆ. ಆದರೆ ನನ್ನ ಹೋರಾಟ ತಡೆಯಲು ಸಾಧ್ಯವಿಲ್ಲ’ ಎಂದು
ಹೇಳಿದರು.

‘ಅಧಿಕಾರಿಗಳು ಕಳೆದ 10 ವರ್ಷಗಳಿಂದ ನಿದ್ದೆ ಮಾಡುತ್ತಿದ್ದರು. ರೈತರು ಹೋರಾಟ ಮಾಡುತ್ತೇವೆ ಎಂದು ತಿಳಿಸಿದಾಗ ಸ್ಥಳಕ್ಕೆ ಬಂದು ಟೆಂಡರ್ ಆಗಿದೆ ಎಂದು ತಪ್ಪು ಮಾಹಿತಿ ನೀಡಿ ಹೋರಾಟದ ದಿಕ್ಕು ತಪ್ಪಿಸುವರ ಕೆಲಸ ಮಾಡಿದ್ದಾರೆ’ ಎಂದು ದೂರಿದರು.

ADVERTISEMENT

ಜಿಲ್ಲಾ ಪಂಚಾಯಿತಿ ಮಾಜಿ
ಸದಸ್ಯ ಗಂಗಾಧರ ನಾಡಗೌಡ ಮಾತನಾಡಿ, ‘ಅಮರೇಶ್ವರ ದೇವಸ್ಥಾನದ ಹತ್ತಿರ ರಸ್ತೆ ಅಗೆದು ಸೇತುವೆ ನಿರ್ಮಾಣ ಮಾಡಿದರೆ ಎಡಭಾಗದ ಎಲ್ಲ ರೈತರ ಜಮೀನುಗಳಿಗೆ ನೀರು ಹರಿಯುತ್ತದೆ. ಅಷ್ಟು ಮಾಡಲು ಇವರಿಗೆ 10 ವರ್ಷ ಸಾಕಾಗಲಿಲ್ಲ. ರೈತರು ಇನ್ನೂ ಎಷ್ಟು ದಿನ ಕಾಯಬೇಕು? ಕೂಡಲೆ ಕೆಬಿಜೆಎನ್‌ಎಲ್ ಅಧಿಕಾರಿಗಳು ಕಾಮಗಾರಿ ಆರಂಭ ಮಾಡದಿದ್ದರೆ ಹೋರಾಟ ಇನ್ನಷ್ಟು ತೀವ್ರತೆ ಪಡೆಯುತ್ತದೆ’
ಎಂದರು.

ಮುಖಂಡರಾದ ಮುತ್ತು ಅಂಗಡಿ, ಕೆಂಚಪ್ಪಣ್ಣ ಬಿರಾದಾರ, ಅಮರೇಶ ದೇಶಮುಖ, ಗಿರೀಶಗೌಡ ಪಾಟೀಲ, ಸಂಗಣ್ಣ ಮೇಟಿ, ಮಹಾತಯ್ಯ ಮೆನೆದಾಳಮಠ, ಮೌನೇಶ ಮಾದರ, ಮಲ್ಲು ಗಂಗನಗೌಡರ ಹಾಗೂ ರೈತ ಮುಖಂಡರು ಮಾತನಾಡಿದರು. ನಂತರ ವೀರೇಶ್ವರ ವೃತ್ತದಿಂದ 3 ಕಿ.ಮೀವರಗೆ ಪಾದಯಾತ್ರೆ ನಡೆಸಲಾಯಿತು.

ಹೋರಾಟಕ್ಕೆ ರೈತರು, ಕನ್ನಡ ಪರಸಂಘಟಕರು, ದಲಿತ ಸಂಘಟಕರು, ರೈತ ಪರ ಸಂಘಟಕರು ಬೆಂಬಲ ವ್ಯಕ್ತ ಪಡಿಸಿದ್ದಾರೆ. ನೂರಕ್ಕು ಹೆಚ್ಚು ರೈತರು ಭಾಗಿಯಾಗಿದ್ದರು.

ಅಪ್ಪುಧಣಿ ದೇಶಮುಖ, ಮುದಕಪ್ಪ ಗಂಗನಗೌಡರ, ಅಕ್ಷಯ ನಾಡಗೌಡ, ಬಾಬು ಹಾದಿಮನಿ, ಸಂಗಣ್ಣ ಕುಳಗೇರಿ, ಜಿ.ಮಹಾಂತೇಶ ಗಂಗನಗೌಡರ, ಶರಣಪ್ಪ ಗಂಗನಗೌಡರ, ವೀರೇಶ ಅವೋಜಿ, ಸುನಿಲ ಕ್ಷತ್ರಿ, ಅಂಬ್ರೇಶ ಹಟ್ಟಿ, ಚನ್ನಪ್ಪಗೌಡಹಂಪನಗೌಡರ, ರಫೀಕ ತೆಗ್ಗಿನಮನಿ, ಗುಂಡಪ್ಪ ಚಲವಾದಿ, ಯಲ್ಲಪ್ಪ ಚಲವಾದಿ, ವೀರೇಶ ಕಂದಗಲ್ಲ ಇದ್ದರು.

ನಾಲತವಾಡದಿಂದ ಸತ್ಯಾಗ್ರಹ ನಡೆಯುವ ಸ್ಥಳದವರೆಗೆ ಪಾದಯಾತ್ರೆ
ಶ್ರೀ ಶರಣ ವೀರೇಶ್ವರ ವೃತ್ತದಲ್ಲಿ ಉಪವಾಸ ಸತ್ಯಾಗ್ರಹಕ್ಕೆ ಚಾಲನೆ ನೀಡಿ ಮಾತನಾಡಿದ ಶಿವಾನಂದ ವಾಲಿ

‘ಸ್ವಲ್ಪ ಕಾಲಾವಕಾಶ ನೀಡಿ’

‘ನೀತಿ ಸಂಹಿತೆಯಿಂದಾಗಿ ಕಾಮಗಾರಿ ಆರಂಭ ವಿಳಂಬವಾಗಿದೆ. ಕೆಬಿಜೆಎನ್‌ಎಲ್ ಅಧಿಕಾರಿಗಳು ನನೆಗುದಿಗೆ ಬಿದ್ದ ಕಾಮಗಾರಿ ವೀಕ್ಷಿಸಿದ್ದಾರೆ. ಅಧಿಕಾರಿಗಳು ನೀಡಿದ ಕಾಲಾವಕಾಶದ ಒಳಗೆ ಕೆಲಸ ಮಾಡದಿದ್ದರೆ ನಾವೂ ಹೋರಾಟಕ್ಕೆ ಬೆಂಬಲ ನೀಡುತ್ತೇವೆ’ ಎಂದು ಪಟ್ಟಣ ಪಂಚಾಯಿತಿ ಹಾಲಿ ಸದಸ್ಯ ಪೃಥ್ವಿರಾಜ ನಾಡಗೌಡ ಹೇಳಿದರು. ‘ಶಾಸಕ ಸಿ.ಎಸ್.ನಾಡಗೌಡ  ಅವರು ಅಧಿಕಾರಕ್ಕೆ ಬಂದ ನಂತರ ತಕ್ಷಣ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದ್ದರು. ಟೆಂಡರ್ ಕೂಡ ಆಗಿತ್ತು. ಇಲಾಖೆಯ ನಿಯಮದ ಪ್ರಕಾರ ಅದು ರದ್ದಾಗಿದೆ. ಕೂಡಲೇ ಕಾಮಗಾರಿಯನ್ನು ಮರು ಟೆಂಡರ್ ಮಾಡಲು ಸೂಚಿಸಿದ್ದಾರೆ. ಹೀಗಾಗಿ ಸ್ವಲ್ಪ ಕಾಲಾವಕಾಶ ನೀಡಬೇಕು. ಅಧಿಕಾರಿಗಳು ನಿಗದಿತ ಅವಧಿ ಒಳಗೆ ಕಾಮಗಾರಿ ಪೂರ್ಣಗೊಳಿಸದಿದ್ದರೆ ನಾವೆಲ್ಲರೂ ಸೇರಿ ಮತ್ತೆ ಹೋರಾಟ ಮಾಡೋಣ’ ಎಂದರು. ಮುಖಂಡರಾದ ಹಣಮಂತ ಕುರಿ ಮಲ್ಲು ತಳವಾರ ರಸೂಲ ಮಕಾಂದಾರ ಸಂಗು ಗಂಗನಗೌಡರ ಗನಿ ಅವಟಿ ಮಂಜುನಾಥ ಕಟ್ಟಿಮನಿ ಮೌನೇಶ ಮಾದರ ಅಲ್ಲಾಭಕ್ಷ ಮೂಲಿಮನಿ ಇದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.