ಸಿಂದಗಿ: ಬಯಲು ಬಹಿರ್ದೆಸೆಗೆ ಹೋಗಲು ರಸ್ತೆ ಮಾಡಿ ಕೊಡಿ ಎಂದು ಆಗ್ರಹಿಸಿ ಸಿಂದಗಿ ತಾಲ್ಲೂಕಿನ ಬೋರಗಿ ಗ್ರಾಮದ ಮಹಿಳೆಯರು ಮಂಗಳವಾರ ಬೀದಿಗಿಳಿದು ಪ್ರತಿಭಟನೆ ಮಾಡಿದ್ದಾರೆ.
ಗ್ರಾಮದಲ್ಲಿ ಸಾರ್ವಜನಿಕ ಶೌಚಾಲಯವಿಲ್ಲದ ಕಾರಣ ಬಯಲಿಗೆ ಹೋಗಬೇಕಾಗಿದ್ದರಿಂದ ರಸ್ತೆಗಳೆಲ್ಲ ಹದಗೆಟ್ಟು ಮಳೆಗಾಲದಲ್ಲಿ ಸಂಪೂರ್ಣ ರೊಜ್ಜುಮಯವಾಗಿ ತಿರುಗಾಡಲು ಸಾಧ್ಯವಾಗದಷ್ಟು ಹದಗೆಟ್ಟು ಹೋಗಿವೆ. ಹೀಗಾಗಿ ಮಹಿಯರು ಬಯಲು ಬಹುರ್ದೆಸೆಗೆ ಹೋಗುವ ಸಂದರ್ಭದಲ್ಲಿ ಏಳು-ಬೀಳುಗಳು ಸಾಮಾನ್ಯವಾಗಿದೆ. ನಮ್ಮ ಅಳಲು ಕೇಳುವವರೇ ಇಲ್ಲ. ಈ ಮೊದಲು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಗಮನಕ್ಕೆ ಸಾಕಷ್ಟು ಸಲ ತಂದಿದ್ದರೂ ಯಾವುದೇ ಕೆಲಸ ಆಗಿಲ್ಲ ಎಂದು ಪ್ರತಿಭಟನಕಾರ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.
ಇನ್ನಾದರೂ ರಸ್ತೆಗಳು, ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಗ್ರಾಮ ಪಂಚಾಯ್ತಿ ಸದಸ್ಯರಾದಿಯಾಗಿ ಅಧ್ಯಕ್ಷರು, ಕಾರ್ಯಾಲಯದ ಅಧಿಕಾರಿ ವರ್ಗ ಮುಂದಾಗಬೇಕು ಎಂದು ಕೈ ಮುಗಿದು ಕೇಳುತ್ತೇವೆ. ಒಂದು ಸಲವಾದರೂ ಅಧಿಕಾರಿ ವರ್ಗ ಗ್ರಾಮದ ದುಃಸ್ಥಿತಿ ಬಂದಾದರೂ ನೋಡಿ ಎಂದು ಅಳಲು ತೋಡಿಕೊಂಡಿದ್ದಾರೆ.
ಗ್ರಾಮದಲ್ಲಿ ರಸ್ತೆ, ಚರಂಡಿ ಕೆಲಸ ಮಾಡಲು ಕ್ರಿಯಾಯೋಜನೆ ಮಾಡಿದ್ದರೂ ಗ್ರಾಮ ಪಂಚಾಯ್ತಿ ಅಧಿಕಾರಿ ವರ್ಗ ಅದಕ್ಕೆ ಸ್ಪಂದಿಸುತ್ತಿಲ್ಲ. ಚರಂಡಿ ಇಲ್ಲದ ಕಾರಣ ಕೊಳಚೆ ನೀರೆಲ್ಲ ಸಂಗ್ರಹಗೊಂಡು ರೋಗಗಳಿಗೆ ಎಡೆ ಮಾಡಿ ಕೊಡುತ್ತಲಿದೆ. ಚಿಕ್ಕಮಕ್ಕಳಲ್ಲಿ ಡೆಂಗಿ ಜ್ವರ ಲಕ್ಷಣಗಳು ಕೂಡ ಕಂಡು ಬರುತ್ತಲಿವೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಮಹಿಳೆಯರಿಗಾಗಿ ಸಾರ್ವಜನಿಕ ಶೌಚಾಲಯ ಇಲ್ಲದ ಕಾರಣ ಬಯಲು ಬಹಿರ್ದೆಸೆಗೆ ಹೋಗಬೇಕಾಗಿದೆ. ರಸ್ತೆಗಳು ಸಂಪೂರ್ಣ ರೊಜ್ಜುಮಯವಾಗಿದ್ದು 3-4 ಮಹಿಳೆಯರು ಕಾಲು ಜಾರಿಬಿದ್ದು ಸೊಂಟ ಮುರಿದುಕೊಂಡಿದ್ದಾರೆ. ಈ ಕುರಿತು ಸಾಕಷ್ಟು ಬಾರಿ ಗ್ರಾಮ ಪಂಚಾಯ್ತಿ ಕಾರ್ಯಾಲಯ, ಜಿಲ್ಲಾ ಪಂಚಾಯ್ತಿ ಕಾರ್ಯಾಲಯದ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೋರಗಿ ಗ್ರಾಮಸ್ಥೆ ಕಸ್ತೂರಿಬಾಯಿ ಬಳಬಟ್ಟಿ ಆರೋಪಿಸಿದರು
‘ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ 4-5 ಗ್ರಾಮಗಳಲ್ಲಿ ಕುಡಿಯುವ ನೀರಿನ ಮೋಟಾರುಗಳು ಸುಟ್ಟಿದ್ದರಿಂದ ನೀರಿನ ಸಮಸ್ಯೆ ತಲೆದೋರಿದೆ. ಉದ್ಯೋಗಖಾತ್ರಿ ಕಾಮಗಾರಿಗೆ ಸಂಬಂಧಿಸಿದಂತೆ ಎನ್.ಎಂ.ಆರ್ ಹಾಕದೇ ಅಡ್ಡಿಪಡಿಸುತ್ತಿದ್ದಾರೆ. ಈ ಬಗ್ಗೆ ಮೇಲಧಿಕಾರಿಗಳಿಗೆ ತಿಳಿಸಿದ್ದರೂ ಯಾವುದೇ ಕ್ರಮ ಜರುಗಿಲ್ಲ’ ಎಂದು ಗುಬ್ಬೇವಾಡ ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಎ.ಟಿ.ಅಂಗಡಿಯವರ ವಿರುದ್ಧ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸೀತಮ್ಮ ಕಟ್ಟಿಮನಿ ದೂರಿದರು.
‘ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಎ.ಟಿ.ಅಂಗಡಿ ಆಗಸ್ಟ್‌ನಲ್ಲಿ ಒಂದು ತಿಂಗಳು ಮತ್ತು ಸೆಪ್ಟೆಂಬರ್‌ನ ಈವರೆಗೂ ಕಾರ್ಯಾಲಯಕ್ಕೆ ಬಂದಿಲ್ಲ. ಹೀಗಾಗಿ ಈ ಬಗ್ಗೆ ಮತಕ್ಷೇತ್ರದ ಶಾಸಕ ಅಶೋಕ ಮನಗೂಳಿ ಗಮನಕ್ಕೆ ತಂದಿದ್ದರಿಂದ ಅವರು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯನ್ನು ಬದಲಾಯಿಸಲು ಜಿಲ್ಲಾ ಪಂಚಾಯ್ತಿ ಸಿಇಒ ಅವರಿಗೆ ಲಿಖಿತವಾಗಿ ಸೂಚಿಸಿದ್ದಾರೆ’ ಎಂದು ಕಟ್ಟಿಮನಿ 'ಪ್ರಜಾವಾಣಿ'ಗೆ ತಿಳಿಸಿದರು.
ರಸ್ತೆ ಇಲ್ಲದ ಕಾರಣ ಹೊರಗಡೆ ಬಯಲು ಬಹಿರ್ದೆಸೆಗೆ ಹೋಗಲಾರದ್ದಕ್ಕೆ ಮನೆಯಲ್ಲಿಯೇ ಹೇಡಿಗೆಯಲ್ಲಿ ಕಕ್ಕಸ ಮಾಡಿ ಹೊರಗೆ ಚೆಲ್ಲುವ ಕೆಟ್ಟ ಪರಿಸ್ಥಿತಿ ಉಂಟಾಗಿದೆಚಂದ್ರಭಾಗವ್ವ ಕೋಳಾರಿ ಬೋರಗಿ ಗ್ರಾಮಸ್ಥೆ
ಬೋರಗಿ ಗ್ರಾಮದಲ್ಲಿ ಮಹಿಳೆಯರಿಗೆ ಸಾರ್ವಜನಿಕ ಶೌಚಾಲಯ ಮತ್ತು ರಸ್ತೆ ದುರಸ್ತಿಗಾಗಿ ಗುಬ್ಬೇವಾಡ ಪಿಡಿಒ ಎ.ಟಿ.ಅಂಗಡಿ ಅಭಿವೃದ್ದಿಗೆ ಎಳ್ಳಷ್ಠು ಸಹಕಾರ ನೀಡುತ್ತಿಲ್ಲಸೀತಮ್ಮ ಕಟ್ಟಿಮನಿ ಗುಬ್ಬೇವಾಡ ಗ್ರಾಮ ಪಂಚಾಯ್ತಿ ಅಧ್ಯಕ್ಷೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.