ಸಿಂದಗಿ: ಕಾನೂನು ಬಾಹಿರವಾಗಿ ನಡೆದುಕೊಂಡಿರುವ ತಾಲ್ಲೂಕಿನ ಓತಿಹಾಳ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ(ಪಿಕೆಪಿಎಸ್)ದ ಅಧ್ಯಕ್ಷ ಶರಣಪ್ಪ ಗಿಡದಮನಿ ಅವರನ್ನು ಕೂಡಲೇ ವಜಾಗೊಳಿಸಬೇಕು ಎಂದು ಆಗ್ರಹಿಸಿ ತಳವಾರ ಮಹಾಸಭಾದ ನೇತೃತ್ವದಲ್ಲಿ ತಳವಾರ ಸಮುದಾಯದ ಮುಖಂಡರು ಮಂಗಳವಾರ ಇಲ್ಲಿಯ ತಾಲ್ಲೂಕು ಆಡಳಿತ ಸೌಧದ ಎದುರು ಪ್ರತಿಭಟನೆ ನಡೆಸಿದರು.
ತಳವಾರ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ಶಿವಾಜಿ ಮೆಟಗಾರ ಮಾತನಾಡಿ, ‘ಓತಿಹಾಳ ಪಿಕೆಪಿಎಸ್ ನ 2024ನೇ ಸಾಲಿನ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಪರಿಶಿಷ್ಟ ಪಂಗಡ ಮೀಸಲಾತಿಯಿಂದ ಸಂಗಮ್ಮ ಕೊರಬು ಅವರು ಆಯ್ಕೆಯಾಗಿದ್ದರೂ ಈಚೆಗೆ ನಡೆಸಿದ ತುರ್ತು ಸಭೆಯ ಠರಾವಿನಲ್ಲಿ ಅವರ ಹೆಸರು ಕೈಬಿಟ್ಟು ನಾಮನಿರ್ದೇಶನಗೊಂಡ ವ್ಯಕ್ತಿಯ ಹೆಸರನ್ನು ಸೇರ್ಪಡೆ ಮಾಡಿಕೊಂಡಿದ್ದಾರೆ. ಇದು ಕಾನೂನುಬಾಹಿರ ಕಾರ್ಯವಾಗಿದೆ’ ಎಂದು ಆರೋಪಿಸಿದರು.
‘ಸಂಘದ ಅಧ್ಯಕ್ಷರನ್ನೊಳಗೊಂಡು ನಿರ್ದೇಶಕರು ಹಣದ ದುರುಪಯೋಗ ಆರೋಪದ ಮೇಲೆ ವಜಾಗೊಂಡಿದ್ದ ಅಂಬಣ್ಣ ಹೂಗಾರ ಅವರನ್ನು ಸಂಘದ ಕಾರ್ಯದರ್ಶಿಯನ್ನಾಗಿ ಮರು ನೇಮಕ ಮಾಡಿಕೊಳ್ಳುವ ಠರಾವು ತುರ್ತು ಸಭೆಯಲ್ಲಿ ಕೈಗೊಂಡಿರುವುದು ಅನ್ಯಾಯದ ಪರಮಾವಧಿಯಾಗಿದೆ. ಕೂಡಲೇ ಸಂಘದ ಅಧ್ಯಕ್ಷ ಗಿಡದಮನಿ ಮತ್ತು ವಜಾಗೊಂಡು ಮರುನೇಮಕಗೊಂಡ ಹೂಗಾರ ಅವರನ್ನು ವಜಾಗೊಳಿಸಬೇಕು. ತಕ್ಷಣದಿಂದಲೇ ಅವರನ್ನು ವಜಾಗೊಳಿಸದಿದ್ದರೆ ಓತಿಹಾಳ ಪಿಕೆಪಿಎಸ್ ಕಾರ್ಯಾಲಯ ಮತ್ತು ಸಂಬಂಧಿಸಿದ ಇಲಾಖೆ ಕಾರ್ಯಾಲಯಗಳಿಗೆ ಬೀಗ ಹಾಕಿ ಉಗ್ರ ಪ್ರತಿಭಟನೆ ಮುಂದುವರೆಸಲಾಗುವುದು’ ಎಂದು ಅವರು ಎಚ್ಚರಿಕೆ ನೀಡಿದರು.
ಪ್ರತಿಭಟನಕಾರರು ತಹಶೀಲ್ದಾರ್ ಗ್ರೇಡ್-2 ಇಂದಿರಾಬಾಯಿ ಬಳಗಾನೂರ ಅವರಿಗೆ ಮನವಿ ಸಲ್ಲಿಸಿದರು.
ತಳವಾರ ಸಮುದಾಯದ ಮುಖಂಡರಾದ ಹಣಮಂತ ಸುಣಗಾರ, ಬಾಬು ನಾಟೀಕಾರ, ಈರಣ್ಣ ಕುರಿ, ಯಲ್ಲಪ್ಪ ಬಳೂಂಡಗಿ, ಪೀರೂ ಕೆರೂರ, ಕಂಟೆಪ್ಪ ಡಪ್ಪಿನ, ಜಟ್ಟೆಪ್ಪ ಹರನಾಳ, ಶಾಂತಪ್ಪ ಇಂಗಳಗಿ, ಸಂಗಮೇಶ ಬಿರಾದಾರ, ಹವಳಪ್ಪ ನಾಟೀಕಾರ, ಸುನೀಲ ನಾಟೀಕಾರ, ಯಲ್ಲಪ್ಪ ಗುಡ್ಡಳ್ಳಿ, ಸಾಯಬಣ್ಣ ಗೋಲಗೇರಿ ಪ್ರತಿಭಟನೆ ನೇತೃತ್ವ ವಹಿಸಿದ್ದರು.
ತಕ್ಷಣದಿಂದಲೇ ಶರಣಪ್ಪ ಗಿಡದಮನಿ ಅವರನ್ನು ವಜಾಗೊಳಿಸದಿದ್ದರೆ ಓತಿಹಾಳ ಪಿಕೆಪಿಎಸ್ ಕಾರ್ಯಾಲಯ ಮತ್ತು ಸಂಬಂಧಿಸಿದ ಇಲಾಖೆ ಕಾರ್ಯಾಲಯಗಳಿಗೆ ಬೀಗ ಹಾಕಲಾಗುವುದುಶಿವಾಜಿ ಮೆಟಗಾರ ತಳವಾರ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.