ಬಸವನಬಾಗೇವಾಡಿ: ಸಮಾಜದಲ್ಲಿರುವ ಅಸೂಹೆ, ಅಂಧಕಾರ ಕಿತ್ತೊಗೆಯಲು ಹಾಗೂ ಧರ್ಮ, ಸಂಸ್ಕೃತಿ, ಸಂಪ್ರದಾಯ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ತಾಲ್ಲೂಕಿನ ಹಳ್ಳಿಗಳಲ್ಲಿ ನಡೆಯುತ್ತಿರುವ ಜನಜಾಗೃತಿ ಸೇವಾಯಾತ್ರೆಗೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.
ಮಾ.27ರಂದು ಹುಣಶ್ಯಾಳ ಪಿ.ಬಿ ಗ್ರಾಮದ ಆನಂದ ದೇವರ ನೇತೃತ್ವದಲ್ಲಿ ನಾಗೂರ ಗ್ರಾಮದಿಂದ ಆರಂಭಗೊಂಡಿರುವ ಜನಜಾಗೃತಿ ಸೇವಾ ಯಾತ್ರೆಯು ಈಗಾಗಲೇ ನಾಗೂರ, ಇವಣಗಿ, ಟಕ್ಕಳಕಿ, ಬೂದಿಹಾಳ, ಸಾತಿಹಾಳ, ಹಂಗರಗಿ, ಕೋಡಗಾನೂರ, ಅಂಬಳನೂರು, ಕಾನ್ನಾಳ, ರಬಿನಾಳ, ಬಿಸನಾಳ ಗ್ರಾಮಗಳಲ್ಲಿ ಯಶಸ್ವಿಗೊಂಡು ಹೂವಿನಹಿಪ್ಪರಗಿಯಲ್ಲಿ ಪ್ರಾರಂಭವಾಗಿದೆ. 6 ತಿಂಗಳ ವರೆಗೆ ಒಟ್ಟು 30 ಗ್ರಾಮಗಳಲ್ಲಿ ಶ್ರೀಗಳ ನೇತೃತ್ವದಲ್ಲಿ ಜನಜಾಗೃತಿ ಸೇವಾ ನಡೆಯಲಿದೆ.
ಪ್ರತಿ ಗ್ರಾಮದಲ್ಲಿಯೂ ಐದು ದಿನಗಳ ಕಾಲ ವಾಸ್ತವ್ಯ ಮಾಡಲಿರುವ ಶ್ರೀಗಳು ‘ನಮ್ಮ ನಡೆ ಭಕ್ತರ ಮನೆ ಕಡೆ’, ‘ದುಶ್ಚಟಗಳ ಬಿಕ್ಷೆ ಸದ್ಗುರುಗಳ ದೀಕ್ಷೆ’ ಸಂದೇಶದೊಂದಿಗೆ ಬೆಳಿಗ್ಗೆ ಗ್ರಾಮದ ಮನೆಗಳಿಗೆ ತೆರಳಿ ಕುಟುಂಬ ಸದಸ್ಯರಿಗೆ ಉಚಿತ ರುದ್ರಾಕ್ಷಿ ಧಾರಣೆ ಮಾಡಿ ಸದ್ಬಾವನಾ ಪಾದಯಾತ್ರೆ ಮಾಡುತ್ತಿದ್ದಾರೆ. ವಾಸ್ತವ್ಯದ ಕೊನೆಯ ದಿನ ಆರೋಗ್ಯ ತಪಾಸಣೆ ಶಿಬಿರದಿಂದ ಆರೋಗ್ಯದ ಮಹತ್ವ ತಿಳಿಸಿ ಕೊಡುತ್ತಿದ್ದಾರೆ. ಅಲ್ಲದೇ, ಪರಿಸರದ ಮಹತ್ವ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.
ಪ್ರತಿದಿನ ಸಂಜೆ 7 ರಿಂದ 7.30 ಗಂಟೆ ವರೆಗೆ ವೀರೇಶ್ವರ ಪುಣ್ಯಾಶ್ರಮದ ಸಂಗೀತಗಾರರಿಂದ ಸಂಗೀತದ ಮೂಲಕ ರಸದೌಣ ನೀಡಿದರೆ, ರಾತ್ರಿ 7.30 ರಿಂದ 8.30ರ ವರೆಗೆ ಅಂಬಳನೂರಿನ ಸಂಗಮನಾಥ ದೇವರು ಶರಣರ ಜೀವನ ದರ್ಶನ ಪ್ರವಚನದ ಮೂಲಕ ಗ್ರಾಮಸ್ಥರಿಗೆ ಶರಣರ ಜೀವನ ಆದರ್ಶಗಳನ್ನು ತಿಳಿಸುವುದರೊಂದಿಗೆ ಬದುಕಿನಲ್ಲಿ ಸನ್ಮಾರ್ಗದತ್ತ ಸಾಗಲು, ಉನ್ನತ ಮೌಲ್ಯ ಅಳವಡಿಸಿಕೊಳ್ಳುವುದು ಸೇರಿದಂತೆ ವಿವಿಧ ವಿಷಯಗಳನ್ನು ತಿಳಿಸಿಕೊಡುತ್ತಿದ್ದಾರೆ.
ಕಾರ್ಯಕ್ರಮಕ್ಕೆ ಅಗತ್ಯವಿರುವ ವೇದಿಕೆ, ಮೈಕ್ ಸೆಟ್, ದೀಪದ ವ್ಯವಸ್ಥೆ, ಬ್ಯಾನರ್, ಸಂಗೀತಗಾರರು, ತಬಲಾ ವಾದಕ ಹಾಗೂ ನಾಲ್ಕೈದು ಜನ ಸೇವಕರೊಂದಿಗೆ ಸ್ವಂತ ಖರ್ಚಿನಲ್ಲೇ ಹುಣಶ್ಯಾಳ (ಪಿ.ಬಿ) ಗ್ರಾಮದ ಆನಂದ ದೇವರು ನಡೆಸುತ್ತಿರುವ ಸಮಾಜ ಸುಧಾರಣೆ ಕಾರ್ಯಕ್ಕೆ ಪ್ರತಿ ಗ್ರಾಮಗಳಲ್ಲಿ ಶ್ಲಾಘನೆ ವ್ಯಕ್ತವಾಗುತ್ತಿದೆ.
ಶಾಸ್ತ್ರ, ಪ್ರವಚನ, ಪುರಾಣಗಳಿಂದ ದೂರವಾಗುತ್ತಿರುವ ಇಂದಿನ ಕಾಲದಲ್ಲಿ ಜನಜಾಗೃತಿ ಸೇವಾಯಾತ್ರೆ ಅಂಗವಾಗಿ ನಮ್ಮೂರಿನಲ್ಲಿ ನಡೆಯುತ್ತಿರುವ ಪ್ರವಚನ ಕಾರ್ಯಕ್ರಮದಲ್ಲಿ ನಿರೀಕ್ಷೆ ಮೀರಿ ಮಹಿಳೆಯರು, ಮಕ್ಕಳು, ಯುವಕರು ವೃದ್ಧರಾದಿಯಾಗಿ ನೂರಾರು ಜನರು ಭಾಗವಹಿಸಿ ಹಿತ ನುಡಿಗಳನ್ನು ಆಲಿಸುತ್ತಿದ್ದಾರೆ ಎಂದು ಬೂದಿಹಾಳ ಗ್ರಾಮದ ಸಾಯಿ ಸೇವಾ ಸಂಘದ ಪದಾಧಿಕಾರಿಗಳಾದ ಸಿದ್ದನಗೌಡ ಬಿರಾದಾರ, ಪ್ರಶಾಂತ ಬಿರಾದಾರ, ಆನಂದ ತಾಳಿಕೋಟಿ, ಪ್ರಹ್ಲಾದ ತಳವಾರ ತಿಳಿಸಿದರು.
ಪ್ರತಿ ಗ್ರಾಮದಲ್ಲಿ ಜನಜಾಗೃತಿ ಸೇವಾ ಯಾತ್ರೆಗೆ ಗ್ರಾಮಸ್ಥರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ದುಶ್ಚಟಗಳ ಬಿಕ್ಷೆಯಿಂದಾಗಿ ಚಟಗಳಿಗೆ ದಾಸರಾದ ಕೆಲ ಯುವಕರಲ್ಲಿ ಪರಿವರ್ತನೆ ತರುತ್ತಿದೆ. ನಿರಂತರವಾಗಿ ಇಂತಹ ಕಾರ್ಯಕ್ರಮಗಳು ನಡೆಯುತ್ತಿರಬೇಕು .-ಆನಂದ ದೇವರು, ಗ್ರಾಮಸ್ಥರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.