ನಾಲತವಾಡ: ಪಟ್ಟಣದ 5ನೇ ವಾರ್ಡ್‌ನ ಅಂಬೇಡ್ಕರ್ ನಗರದಲ್ಲಿರುವ ಸಾರ್ವಜನಿಕ ಶೌಚಾಲಯದ ಸೆಫ್ಟಿಕ್ ಟ್ಯಾಂಕ್ ತುಂಬಿ ತ್ಯಾಜ್ಯ ನೀರು ಹೊರ ಬರುತ್ತಿದ್ದು, ಕೆಟ್ಟ ದುರ್ನಾತ ಬರುತ್ತಿದೆ ಎಂಬುದು ಅಂಬೇಡ್ಕರ್ ನಗರ ನಿವಾಸಿಗಳ ಅಳಲು.
ಸಾರ್ವಜನಿಕ ಶೌಚಾಲಯ ನಿರ್ಮಾಣಗೊಂಡು ಕೆಲವೇ ತಿಂಳಾಗಿವೆ. ಇಷ್ಟು ಬೇಗ ತ್ಯಾಜ್ಯ ಟ್ಯಾಂಕ್ ತುಂಬಿರುವುದೇ ಆಶ್ಚರ್ಯ ತಂದಿದೆ ಎನ್ನುತ್ತಾರೆ ಡಿಎಸ್ಎಸ್ ರಾಜ್ಯ ಪದಾಧಿಕಾರಿ ಮಾರುತಿ ಸಿದ್ದಾಪೂರ.
6, 7, ಹಾಗೂ 8ನೇ ವಾರ್ಡನ ಮಹಿಳೆಯರಿಗೆಂದು ಶೌಚಾಲಯ ನಿರ್ಮಿಸಿ 2–3 ವರ್ಷಗಳು ಕಳೆದಿದ್ದರೂ, ಸಾರ್ವಜನಿಕರ ಬಳಕೆಗೆ ಅವಕಾಶ ಕಲ್ಪಿಸಿರಲಿಲ್ಲ. ಈಚೆಗಷ್ಟೇ ಸಾರ್ವಜನಿಕರು ಬಳಕೆ ಮಾಡಲು ಆರಂಭಿಸಿದ್ದರು. ಬಳಕೆ ಮಾಡಲು ಶುರು ಮಾಡಿದ ಎರಡು ದಿನದೊಳಗೆ ಶೌಚಾಲಯದ ಸೆಫ್ಟಿಕ್ ಟ್ಯಾಂಕ್ ತುಂಬಿ ಹರಿಯುತ್ತಿರುವುದು ಕಾಮಗಾರಿ ಬಗೆಗೆ ಸಂಶಯ ಹುಟ್ಟಿಸಿದೆ.
ಕಾಮಗಾರಿ ಯಾವ ಯೋಜನೆಯಲ್ಲಿ ನಡೆದಿದೆ, ಗುತ್ತಿಗೆದಾರರ ಹೆಸರು, ತಗು ಲಿದ ವೆಚ್ಚ ಈ ಕುರಿತಂತೆ ಯಾವುದೇ ಫಲಕವನ್ನೂ ಹಾಕದೇ ಇರುವುದು ಸಂಶಯವನ್ನು ಹೆಚ್ಚಿಸಿದೆ ಎನ್ನುತ್ತಾರೆ ಅವರು. ‘ಶೌಚಾಲಯದ ಸಮೀಪದಲ್ಲಿ ತಿಪ್ಪೆಗುಂಡಿಯೂ ಇದ್ದು, ಬೇರೆ ಓಣಿಯ ಜನರು ಇಲ್ಲಿ ಕಸ ತಂದು ಸುರಿಯುತ್ತಾರೆ. ಅಂಬೇಡ್ಕರ್ ನಗರ ಎಂದರೆ ಕಸ ಸ್ವೀಕರಿಸುವ ತಾಣವಾಗಿದೆ, ಕಸದಲ್ಲಿರುವ ಪ್ಲಾಸ್ಟಿಕ್ ಹಾಳೆಗಳು, ತಿಪ್ಪೆಯ ದೂಳು ಗಾಳಿಯ ಮೂಲಕ ಶಾಲಾ ಆವರಣ, ಮನೆ ಸೇರುತ್ತಿದೆ ಎಂದು ಅಂಬೇಡ್ಕರ್ ನಿವಾಸಿಗಳಾದ ರಾಘವೇಂದ್ರ ಮಾದರ, ಶಿವಪ್ಪ, ಲಕ್ಷ್ಮವ್ವ ಮಾದರ, ಯಲ್ಲವ್ವ ಗುಂಡಪ್ಪ ಚಲವಾದಿ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಶುಚಿತ್ವಕ್ಕೆ ಪೌರ ಕಾರ್ಮಿಕರಿರುವ ಓಣಿಯ ಸ್ಥಿತಿ ಹೀಗಾಗಲು ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಪರಿಶಿಷ್ಟರ ಓಣಿಗಳ ಬಗೆಗೆ ತಾತ್ಸಾರ ಸಲ್ಲದು.-ಮಾರುತಿ ಸಿದ್ದಾಪೂರ, ರಾಜ್ಯ ದಲಿತ ಸಂಘರ್ಷ ಸಮಿತಿ ಪದಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.