ADVERTISEMENT

ತಾಳಿಕೋಟೆ | ಹರ್ಷ ತಂದ ಮಳೆ: ಒಡೆದ ಒಡ್ಡುವಾರಿ

ಉತ್ತಮ ಮುಂಗಾರಿನ ಸೂಚನೆ; ಫಸಲಿನ ನಿರೀಕ್ಷೆಯಲ್ಲಿ ರೈತವರ್ಗ

ಶರಣಬಸಪ್ಪ ಎಸ್‌.ಗಡೇದ
Published 30 ಮೇ 2024, 4:21 IST
Last Updated 30 ಮೇ 2024, 4:21 IST
ತಾಳಿಕೋಟೆ ತಾಲ್ಲೂಕಿನ ಅಸ್ಕಿ ಗ್ರಾಮದ ಜಮೀನೊಂದರಲ್ಲಿ ಮಳೆಯಿಂದ ಒಡೆದ ಒಡ್ಡನ್ನು ರೈತರು  ದುರಸ್ತಿ ಮಾಡಿದರು
ತಾಳಿಕೋಟೆ ತಾಲ್ಲೂಕಿನ ಅಸ್ಕಿ ಗ್ರಾಮದ ಜಮೀನೊಂದರಲ್ಲಿ ಮಳೆಯಿಂದ ಒಡೆದ ಒಡ್ಡನ್ನು ರೈತರು  ದುರಸ್ತಿ ಮಾಡಿದರು   

ತಾಳಿಕೋಟೆ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಈಚೆಗೆ ಉತ್ತಮ ಮಳೆಯಾಗಿದೆ. ಪಟ್ಟಣದಲ್ಲಿ 31 ಮಿಲಿಮೀಟರ್ ಮಳೆಯಾಗಿದೆ. ತಾಲ್ಲೂಕಿನಾದ್ಯಂತ ಹೆಚ್ಚಿನ ಕಡೆಗಳಲ್ಲಿ ಒಡ್ಡುವಾರಿಗಳು ಒಡೆದುಹೋಗಿದ್ದು, ಒಡ್ಡುವಾರಿಗಳಲ್ಲಿ ನೀರು ತುಂಬಿಕೊಂಡು ಕೆರೆಗಳಂತೆ ಗೋಚರಿಸಿದವು.

ಮೇ 24ರಿಂದ ಆರಂಭವಾಗಿರುವ ರೋಹಿಣಿ ಮಳೆ ಉತ್ತಮ ಮುಂಗಾರಿನ ಸೂಚನೆ ನೀಡಿದ್ದು, ರೈತರ ಮೊಗದಲ್ಲಿ ಸಂತೋಷಕ್ಕೆ ಕಾರಣವಾಗಿದೆ. ವಾತಾವರಣವೂ ತಂಪಾಗಿದೆ. ಜಮೀನುಗಳ ಬದಿಯಲ್ಲಿ ಹಸಿರು ಚಿಗುರೊಡೆದಿದ್ದು, ದನಕರುಗಳಿಗೆ ಆಡು -ಕುರಿ ಮೇಯಿಸಲು ಮೇವು ದೊರೆಯುವಂತಾಗಿದೆ. ಅಲ್ಲಲ್ಲಿ ನೀರು ನಿಂತಿದ್ದು, ಜಾನುವಾರಗಳಿಗೂ ಅನುಕೂಲವಾಗಿದೆ.

ರೈತಾಪಿ ಜನರು ತಮ್ಮ ಜಮೀನನ್ನು ಬಿತ್ತನೆಗೆ ಹದಗೊಳಿಸುತ್ತಿದ್ದು, ಜಮೀನಿನೊಳಗಡೆ ಇರುವ ಕಸ ಕಡ್ಡಿ ಆಯ್ದು ಒಪ್ಪವಾಗಿಸುವ, ಹರಗುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಹಲವೆಡೆ ಕೆರೆಗಳಿಂದ ಜಮೀನುಗಳಿಗೆ ಫಲವತ್ತಾದ ಮಣ್ಣನ್ನು ಕೂಡ ಸಾಗಿಸುತ್ತಿದ್ದಾರೆ.

ADVERTISEMENT

ಕಳೆದ ವರ್ಷ ಅನಿಶ್ಚಿತ ಮಳೆಯಿಂದ ಕಂಗೆಟ್ಟಿದ್ದ ರೈತಾಪಿ ವರ್ಗ ಈ ವರ್ಷ ಉತ್ತಮ ಮಳೆ ಮತ್ತು ಫಸಲಿನ ನಿರೀಕ್ಷೆಯಲ್ಲಿದ್ದಾರೆ.

‘ಮರಮಳಿಯಾಗ್ಯದರಿ, ನಾಲ್ಕಬಟ್ಟು ಭೂಮಿ ಹಸಿಯಾಗ್ಯದರಿ. ಮಳಿ ಆರಿ ಆಗಿ ಆರಿಕಿ ಆಗಿ ಬಂದ್ರ ಒಂದಿಷ್ಟ ಹಸಿಯಾಗತದ. ಬಿತ್ತೂದಕ ಅನುಕೂಲ ಆಗತದ’ ಎನ್ನುತ್ತಾರೆ ಗೋಟಖಿಂಡ್ಕಿ ಗ್ರಾಮದ ಹಣಮಗೌಡ ಬಿರಾದಾರ.

ಈ ಮಳಿಲಿಂದ ಹತ್ತಿ ಬಿತ್ತೋರಿಗೆ ಅನುಕೂಲರಿ, ತೊಗರಿ ಬಿತ್ತುವಷ್ಟು ನೆಲ ಹಸಿ ಇಲ್ಲ ಎಂದು ರಾತ್ರಿ ಮಳೆಯಿಂದಾಗಿ ಒಡೆದುಹೋಗಿದ್ದ ತಮ್ಮ ಜಮೀನಿನಲ್ಲಿ ಒಡ್ಡು ಹಾಕಿಸುತ್ತಿದ್ದ ಅಸ್ಕಿ ಗ್ರಾಮದ ಸಂಗನಗೌಡ ನಾಗರೆಡ್ಡಿ ತಿಳಿಸಿದರು. ಮಳಿಬೆಳಿ ಚೆನ್ನಾಗಿ ಆದ್ರ ರೈತರು ಸಂತೋಷ ಪಡತಾರಿ ಎಲ್ಲಾರಿಗೂ ಅನುಕೂಲವೇ ಆಗತ್ತದರಿ ಎಂದು ಅಸ್ಕಿ ಗ್ರಾಮದ ಪ್ರಮುಖರಾದ ಎಸ್.ಎಸ್.ಪಾಟೀಲ ದನಿಗೂಡಿಸಿದರು.

ಒಟ್ಟಾರೆ ಮಳೆ ಸುರಿಸಿ, ಬಿಸಿಲತಾಪ ತಣಿಸಿ ಇಳೆಯನ್ನು ತಂಪು ಮಾಡುವ ಕಾರ್ಯದಲ್ಲಿ ತೊಡಗಿರುವ ಮಳೆರಾಯ ರೈತರಿಗೆ ದನಕರುಗಳಿಗೆ ಆಸರೆಯಾಗಲಿ ಎಂಬುದೇ ಜನರ ಪ್ರಾರ್ಥನೆಯಾಗಿದೆ.

ಬಿತ್ತನೆಗೆ ಹದವಾದ ಮಳೆಯಾಗಿಲ್ಲ. ನಮ್ಮಲ್ಲಿ ಎರಡು ಕ್ವಿಂಟಲ್ ಹೆಸರು ಮತ್ತು 72 ಕ್ವಿಂಟಲ್ ತೊಗರಿ ದಾಸ್ತಾನು ಇದೆ. ರೈತರಿಗೆ ಗುರುವಾರದಿಂದ ನಿಯಮಾನುಸಾರ ವಿತರಣೆ ಆರಂಭಿಸಿದ್ದೇವೆ

–ಮಹೇಶ ಜೋಶಿ ಸ್ಥಳೀಯ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ

ಮರಮಳಿಯಾದ್ರ ಭೂಮಿ ನೀರು ಹಿಡಿಯೂದಿಲ್ಲರಿ ಭೂಮಿ ಬಿರಸ ಆಗಿ ನೀರು ಹರದುಹೋಗತಾವು. ಒಡ್ಡುವಾರಿ ಒಡದ ಹೋಗತಾವು

–ಹಣಮಗೌಡ ಬಿರಾದಾರ ಗೋಟಖಿಂಡ್ಕಿ ಗ್ರಾಮದ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.