ADVERTISEMENT

ಮಳೆಗಾಲ; ಎಚ್ಚೆತ್ತುಕೊಳ್ಳದ ಪಾಲಿಕೆ

ಮನೆಯೊಳಗೆ ನುಗ್ಗುವ ನೀರು; ಪಾಲಿಕೆ ವಿರುದ್ಧ ಜನಾಕ್ರೋಶ

​ಪ್ರಜಾವಾಣಿ ವಾರ್ತೆ
Published 11 ಜೂನ್ 2024, 6:50 IST
Last Updated 11 ಜೂನ್ 2024, 6:50 IST
<div class="paragraphs"><p>ವಿಜಯಪುರದ ಜಮಖಂಡಿ ರಸ್ತೆಯ ಬಾಗವಾನ ಕಾಲೊನಿಯಲ್ಲಿ ನಿಂತಿದ್ದ ಮಳೆ ನೀರಲ್ಲೇ ವೃದ್ಧ ದಂಪತಿ ಹರಸಾಹಸ ಪಟ್ಟು ತೆರಳಿದರು</p></div>

ವಿಜಯಪುರದ ಜಮಖಂಡಿ ರಸ್ತೆಯ ಬಾಗವಾನ ಕಾಲೊನಿಯಲ್ಲಿ ನಿಂತಿದ್ದ ಮಳೆ ನೀರಲ್ಲೇ ವೃದ್ಧ ದಂಪತಿ ಹರಸಾಹಸ ಪಟ್ಟು ತೆರಳಿದರು

   

–ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ

ವಿಜಯಪುರ: ಸಾರ್ವಜನಿಕರಿಗೆ ಮಳೆಗಾಲದ ಬಾಧೆ ತಟ್ಟದಿರಲು ಮುಂಗಾರು ಆರಂಭಕ್ಕೂ ಮುನ್ನ ಸ್ಥಳೀಯ ಆಡಳಿತ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳುವುದು ಸಾಮಾನ್ಯ. ಆದರೆ ಮುಂಗಾರು ಚುರುಕುಗೊಂಡರೂ, ನಗರದ ಅನೇಕ ಬಡಾವಣೆಗಳು ಮುಂಗಾರಿನ ಅನಾಹುತಗಳನ್ನು ಎದುರಿಸುತ್ತಿದ್ದರೂ, ಮಹಾನಗರ ಪಾಲಿಕೆ ಇನ್ನು ಎಚ್ಚೆತ್ತುಕೊಂಡಿಲ್ಲ.

ADVERTISEMENT

ಜಿಲ್ಲೆಯಲ್ಲಿ ಕೆಲ ದಿನಗಳಿಂದ ವರ್ಷಧಾರೆ ಸುರಿಯಲು ಆರಂಭಿಸಿದೆ. ಹಲವೆಡೆ ವಿದ್ಯುತ್ ಕಂಬಗಳು, ಗಿಡಮರಗಳು ಧರೆಗೆ ಉರುಳಿವೆ, ನಗರ ಹಾಗೂ ಪಟ್ಟಣದಲ್ಲಿ ಚರಂಡಿಯ ನೀರು ರಸ್ತೆಗಳ ಮೇಲೆ ಹರಿಯುತ್ತಿದೆ.

ಮಳೆಗೆ ನಗರದ ಬಡಾವಣೆಗಳ ರಸ್ತೆಗಳಲ್ಲಿ ಅಪಾರ ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತಿದೆ. ಅನೇಕ ಬಡಾವಣೆಗಳ ತಗ್ಗು ಪ್ರದೇಶದಲ್ಲಿನ ಮನೆಗಳಿಗೆ ನೀರು ನುಗ್ಗಿ‌, ಬಡಾವಣೆಗಳ ಜನರು ಮನೆಯಿಂದ ನೀರನ್ನು ಹೊರಗೆ ಹಾಕುವುದರಲ್ಲಿಯೇ ರಾತ್ರಿ ಕಳೆಯುವಂತಾಗಿದೆ.

ಗುರುವಾರ ರಾತ್ರಿ ಸುರಿದ ಮಳೆಗೆ ನಗರದ ಸೊಲ್ಲಾಪುರ ರಸ್ತೆಯಲ್ಲಿರುವ ಪೊಲೀಸ್ ಕ್ವಾರ್ಟರ್ಸ್‌, ಜಮಖಂಡಿ ರಸ್ತೆಯ ಬಾಗವಾನ ಕಾಲೊನಿ ಮತ್ತು ಇಬ್ರಾಹಿಂ ನಗರದ ಬಡಾವಣೆಯ ಸುಮಾರು 20ಕ್ಕೂ ಹೆಚ್ಚು ಮನೆಗಳಲ್ಲಿ ಮಳೆ ನೀರು ನುಗ್ಗಿದ ಪರಿಣಾಮವಾಗಿ ಜನರು ನಿದ್ಧೆಯಿಲ್ಲದೇ ಕಾಲ ಕಳೆಯುವಂತಾಗಿದೆ. ದವಸ, ಧಾನ್ಯ, ಬಟ್ಟೆ ಮತ್ತಿತರ ವಸ್ತುಗಳು ನೀರಿನಲ್ಲಿ ತೋಯ್ದ ಹಾನಿಯಾಗಿದೆ.

ಇಲ್ಲಿನ ವಜ್ರ ಹನುಮಾನ ನಗರ, ಇಬ್ರಾಹಿಂಪುರ ರೈಲ್ವೆ ನಿಲ್ದಾಣ ಸೇರಿದಂತೆ ವಿವಿಧ ಕಾಲೊನಿಗಳಲ್ಲಿ ಚರಂಡಿ ನೀರು ರಸ್ತೆ ಮೇಲೆ ನಿಲ್ಲುತ್ತಿದೆ. ಅಲ್ಪ ಮಳೆಗೆ ಬಡಾವಣೆಗಳ ರಸ್ತೆಗಳು ಕೆರೆಗಳಾಗಿ ಮಾರ್ಪಾಡು ಹೊಂದುತ್ತಿವೆ. ಇದು ನಗರದ ಭಾಹಶಃ ಬಡಾವಣೆಗಳಲ್ಲಿ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ.

ಇನ್ನು ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನೀರು ನಿಲ್ಲುತ್ತಿದ್ದು, ಸೊಳ್ಳೆಗಳು ಅಧಿಕ ಪ್ರಮಾಣದಲ್ಲಿ ಉತ್ಪತ್ತಿಯಾಗಿ ಮಲೇರಿಯಾ, ಡೆಂಗಿ ರೋಗ ಹರಡುವ ಆತಂಕ ಜನರಲ್ಲಿ ಮನೆ ಮಾಡಿದೆ. ಸಂಜೆಯಾಗುತ್ತಿದ್ದಂತೆ ಕಿಟಕಿ ಬಾಗಿಲುಗಳನ್ನು ಮುಚ್ಚಿ, ಸೊಳ್ಳೆ ಔಷಧಿಗಳು ಬಳಸಲೇಬೇಕಾದ ಅನಿವಾರ್ಯತೆ ನಗರದಲ್ಲಿ ಸೃಷ್ಟಿಯಾಗಿದೆ.

ಮಳೆಗಾಲ ಆರಂಭವಾದರೂ ಮಹಾನಗರ ಪಾಲಿಕೆ ಮುಂಜಾಗ್ರತಾ ಕ್ರಮ ಕೈಗೊಳ್ಳದ ಕಾರಣ ಜನರು ಸಂಕಷ್ಟ ಎದುರಿಸುವಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪ್ರತಿ ಬಾರಿ ಅಲ್ಪ ಮಳೆಗೆ ನಗರದ ಮೀನಾಕ್ಷಿ ಚೌಕ್‌ನಲ್ಲಿ ಭಾರಿ ನೀರು ಸಂಗ್ರಹವಾಗುತ್ತದೆ. ನೀರು ಸರಾಗವಾಗಿ ಹರಿದು ಹೋಗಲು ಪಾಲಿಕೆ ಕ್ರಮ ಕೈಗೊಳ್ಳಬೇಕು.
–ಸಂತೋಷ ಬಡಿಗೇರ, ಮೀನಾಕ್ಷಿ ಚೌಕ್‌ ನಿವಾಸಿ
ನಗರದಲ್ಲಿ ಗುರುವಾರ ರಾತ್ರಿ ಸುರಿದ ಮಳೆಗೆ ಮನೆಗೆ ನೀರು ನುಗ್ಗಿ ನೆಲದ ಮೇಲೆ ಇಡಲಾದ ದವಸ ಧಾನ್ಯ ಹಾಳಾಗಿದೆ. ಚರಂಡಿಗಳಲ್ಲಿನ ಹೂಳು ತೆಗೆಯದೆ ಇರುವುದು ಇದಕ್ಕೆ ಕಾರಣ.
–ಗೌರಿ, ಇಬ್ರಾಹಿಂನಗರ ನಿವಾಸಿ
ಲೋಕಸಭೆ ಚುನಾವಣಾ ಹಿನ್ನೆಲೆ ಯಾವ ಸಭೆ ಮಾಡಲಾಗಿಲ್ಲ ಮುಂಗಾರು ಕ್ರಮಕ್ಕೆ ಸಂಬಂಧಿಸಿದಂತೆ ಸೋಮವಾರ ಪಾಲಿಕೆಯ ಅಧಿಕಾರಿಗಳ ಸಭೆ ಮಾಡಲಾಗಿದೆ. ಮತ್ತೆ ಮಂಗಳವಾರ ಇನ್ನೊಂದು ಸಭೆ ಕರೆಯಲಾಗುವುದು.
–ದಿನೇಶ ಹಳ್ಳಿ ಉಪಮೇಯರ್‌ ಮಹಾನಗರ ಪಾಲಿಕೆ

ಜಿಲ್ಲಾಧಿಕಾರಿ ಸೂಚನೆ; ಪಾಲಿಕೆ ನಿರ್ಲಕ್ಷ್ಯ

ಮಳೆಗಾಲ ನಿರ್ವಹಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಟಿ. ಭೂಬಾಲನ್‌ ಅವರು ಕೆಲವು ದಿನಗಳ ಹಿಂದೆ ವಿವಿಧ ಇಲಾಖೆ ಅಧಿಕಾರಿಗಳ ಸಭೆ ಕರೆದು ಕಾಲುವೆ ರಾಜಕಾಲುವೆಗಳ ಸ್ವಚ್ಛತೆ ಕೈಗೊಳ್ಳಲು ಸೂಚಿಸಿದ್ದರು. ರಸ್ತೆ ಹಾಗೂ ಮನೆಗಳ ಒಳಗೆ ಮಳೆ ನೀರು ನುಗ್ಗದಂತೆ ನೋಡಿಕೊಳ್ಳಲು ತಿಳಿಸಿದ್ದರೂ ಆದರೇ ಪಾಲಿಕೆ ಇನ್ನೂ ಬಡಾವಣೆಗಳ ಚರಂಡಿಗಳ ಸ್ವಚ್ಛತೆ ಕ್ರಮ ಕೈಗೊಂಡಿಲ್ಲ. ಚರಂಡಿಗಳಲ್ಲಿ ಸಂಪೂರ್ಣ ತ್ಯಾಜ್ಯ ಹಾಗೂ ಹೂಳು ತುಂಬಿಕೊಂಡ ಪರಿಣಾಮ ನೀರು ಸರಾಗವಾಗಿ ಹರಿಯದೆ ರಸ್ತೆಗಳ ಮೇಲೆ ಹರಿಯುತ್ತಿದೆ. ಮಳೆಯಿಂದ ಚರಂಡಿಯಲ್ಲಿನ ಹೂಳು ರಸ್ತೆ ಮೇಲೆ ಸಂಗ್ರಹವಾಗುತ್ತಿದೆ ಎನ್ನುತ್ತಾರೆ ನಗರ ನಿವಾಸಿ ರೋಹಿತ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.