ADVERTISEMENT

ಚಳಿಗಾಲದ ಅಧಿವೇಶನದಲ್ಲಿ ಒಳಮೀಸಲಿಗೆ ಧ್ವನಿ ಎತ್ತಿ: ಬಸವರಾಜ ಪೂಜಾರಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2024, 16:13 IST
Last Updated 24 ನವೆಂಬರ್ 2024, 16:13 IST
ಮಾದಿಗ ಸಮುದಾಯಕ್ಕೆ ಒಳಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ಕೂಡಲಸಂಗಮದಿಂದ ಮುದ್ದೇಬಿಹಾಳದವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆ ಶನಿವಾರ ನಿಡಗುಂದಿಗೆ ಬಂದಾಗ ಅಲ್ಲಿನ ಸಮಾಜದದವರು ಭವ್ಯ ಸ್ವಾಗತ ನೀಡಿದರು
ಮಾದಿಗ ಸಮುದಾಯಕ್ಕೆ ಒಳಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ಕೂಡಲಸಂಗಮದಿಂದ ಮುದ್ದೇಬಿಹಾಳದವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆ ಶನಿವಾರ ನಿಡಗುಂದಿಗೆ ಬಂದಾಗ ಅಲ್ಲಿನ ಸಮಾಜದದವರು ಭವ್ಯ ಸ್ವಾಗತ ನೀಡಿದರು   

ನಿಡಗುಂದಿ: ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಮಾದಿಗ ಸಮುದಾಯದ ಒಳಮೀಸಲು ಜಾರಿಗೊಳಿಸಬೇಕು. ಈ ಬಗ್ಗೆ ಮುದ್ದೇಬಿಹಾಳ ಕ್ಷೇತ್ರದ ಶಾಸಕ ಸಿ.ಎಸ್. ನಾಡಗೌಡ ಅವರು ಸಿಎಂ ಸಿದ್ದರಾಮಯ್ಯ ಮೇಲೆ ಒತ್ತಡ ತರಬೇಕು ಎಂದು ಜಿಲ್ಲಾ ದೌರ್ಜನ್ಯ ತಡೆ ಸಮಿತಿ ಮಾಜಿ ಸದಸ್ಯ ಬಸವರಾಜ ಪೂಜಾರಿ (ಸಿದ್ಧಾಪುರ) ಆಗ್ರಹಿಸಿದರು.

ಮುದ್ದೇಬಿಹಾಳ ತಾಲ್ಲೂಕು ಮಾದಿಗ ಒಳಮೀಸಲಾತಿ ಹೋರಾಟ ಸಮಿತಿ ಹಾಗೂ ವಿವಿಧ ದಲಿತಪರ ಸಂಘಟನೆಗಳ ಒಕ್ಕೂಟದಿಂದ ಕೂಡಲಸಂಗಮದಿಂದ ಮುದ್ದೇಬಿಹಾಳದವರೆಗೆ ಹಮ್ಮಿಕೊಂಡ ಪಾದಯಾತ್ರೆ ಶನಿವಾರ ನಿಡಗುಂದಿಗೆ ಆಗಮಿಸಿದಾಗ ಇಲ್ಲಿನ ಭೀಮಾಶಂಕರ ಮಠದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

‘ವಿಧಾನಸಭೆ ಚುನಾವಣೆಯಲ್ಲಿ ಮತ ಕೇಳಲು ಬಂದಿದ್ದ ಶಾಸಕರು ದಲಿತರ ಒಳಮೀಸಲು ಬಗ್ಗೆ ಸದನದಲ್ಲಿ ಧ್ವನಿ ಎತ್ತಿ ಮಾತನಾಡುತ್ತೇನೆ ಎಂದು ಭರವಸೆ ನೀಡಿದ್ದರು. ಆದರೆ, ಈ ಬಗ್ಗೆ ಮಾತನಾಡಿಲ್ಲ. ಇದರಿಂದ ದಲಿತರಿಗೆ ಕೊಟ್ಟ ಮಾತು ತಪ್ಪಿದ್ದಾರೆ. ಪಾದಯಾತ್ರೆ ನ. 25 ರಂದು ಮುದ್ದೇಬಿಹಾಳ ತಲುಪಲಿದ್ದು, ಅಂದು ತಹಶೀಲ್ದಾರ್ ಕಚೇರಿ ಆವರಣದಲ್ಲಿ ಸಭೆ ನಡೆಸಿ ನಂತರ ಶಾಸಕ ಸಿ.ಎಸ್. ನಾಡಗೌಡರ ಮನೆಗೆ ಮುತ್ತಿಗೆ ಹಾಕಲಾಗುವುದು’ ಎಂದರು.

ADVERTISEMENT

ಮಾದಿಗ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾ ಘಟಕದ ಉಪಾಧ್ಯಕ್ಷ, ದಲಿತ ಮುಖಂಡರಾದ ಪ್ರಲ್ಹಾದ ಕರಿಯಣ್ಣವರ ಮಾತನಾಡಿದರು.

ಮುಖಂಡರಾದ ವಸಂತ ಹೊಳೆಯಣ್ಣವರ, ರಾಜು ಚಳ್ಳಮರದ, ಶೇಖಪ್ಪ ಮಾದರ ಮಾತನಾಡಿದರು. ದುರಗಪ್ಪ ಗುಡದಪ್ಪಗೋಳ, ಮಲ್ಲು ವಡವಡಗಿ, ಲಕ್ಷ್ಮಣ ಅಮೀನಪ್ಪಗೋಳ, ಕೃಷ್ಣಾ ಆದ್ವಾನಿ, ಪ್ರೇಮಾನಂದ ಕರಿಯಣ್ಣವರ, ಚಂದ್ರಶೇಖರ ಬಿದ್ನಾಳ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.