ತಾಳಿಕೋಟೆ: ಧಾರವಾಡ ರಂಗಾಯಣ ನಿರ್ದೇಶಕರಾಗಿ ಕರ್ನಾಟಕ ರಾಜ್ಯ ಸರ್ಕಾರ ರಾಜು ತಾಳಿಕೋಟಿ ಅವರನ್ನು ನೇಮಕ ಮಾಡಿರುವುದು ತಾಳಿಕೋಟೆಯ ಜನರಲ್ಲಿ ಸಂಭ್ರಮ ಮೂಡಿಸಿದೆ.
ಇವರು ಮೂಲ ಹೆಸರು ರಾಜೇಸಾಬ ಮುಕ್ತುಂಸಾಬ್ ತಾಳಿಕೋಟಿ. ತಮ್ಮ ತಂದೆ -ತಾಯಿಯ ನಾಲ್ಕು ಮಕ್ಕಳಲ್ಲಿ ಕೊನೆಯವರು ರಾಜು. ತಂದೆ- ತಾಯಿ ‘ಖಾಸ್ಗತೇಶ್ವರ ನಾಟ್ಯ ಸಂಘ’ ಸ್ಥಾಪಿಸಿದ್ದರು. ತಾಳಿಕೋಟೆ ಖಾಸ್ಗತೇಶ್ವರಮಠದ ಪ್ರಸಾದ ನಿಲಯಕ್ಕೆ ವರ್ಷಕ್ಕೆ ಅರ್ಧ ಚೀಲ ಜೋಳ ₹75 ನೀಡಿ ತಾಯಿ ಶಾಲೆಗೆ ಸೇರಿಸಿದ್ದರು. ಆಗಲೇ ಸಂಗೀತಾಭ್ಯಾಸ ಮಾಡಿದರು. ಆದರೆ ನಾಲ್ಕನೆಯ ತರಗತಿ ಓದುವಾಗ 11ನೇ ವಯಸ್ಸಿನಲ್ಲಿ ತಂದೆ -ತಾಯಿಗಳಿಬ್ಬರೂ ತೀರಿ ಹೋಗಿದ್ದರಿಂದ ರಾಜು ಅವರ ಓದು ಮೊಟಕಾಯಿತು. ಹೊಟ್ಟೆಪಾಡಿಗೆ ಹಲವು ಕೆಲಸಗಳನ್ನು ಮಾಡಬೇಕಾಯಿತು.
ಹೋಟೆಲ್‌ನಲ್ಲಿ ಸಪ್ಲೈಯರ್ ಆಗಿ, ಲಾರಿ ಕ್ಲೀನರ್, ಗೇಟ್ ಕೀಪರ್ ಆಗಿ ಹೀಗೆ ಹೊಟ್ಟೆಪಾಡಿಗಾಗಿ ಹಲವಾರು ಕೆಲಸ ಮಾಡುತ್ತ ಬಂದ ಅವರು, ಚಿತ್ತರಗಿ ನಾಟಕ ಕಂಪನಿಯಲ್ಲಿ ಗೇಟ್ ಕೀಪರ್ ಆಗಿ, ಪ್ರಚಾರ ಕಲಾವಿದನಾಗಿ, ಪರದೆ ಎಳೆಯುತ್ತ ಗ್ರೀನ್ ರೂಂ ಕಲಾವಿದರಾದರು. ಪಾತ್ರಧಾರಿಯೊಬ್ಬ ಕೈ ಕೊಟ್ಟ ವೇಳೆ ಬಣ್ಣ ಹಚ್ಚಿದ ರಾಜು ಅವರು ಮತ್ತೆ ಹಿಂತಿರುಗಿ ನೋಡಲಿಲ್ಲ. ಅವರೊಳಗಿನ ಕಲಾವಿದ ಬೆಳಕಿಗೆ ಬಂದಿದ್ದೇ ತಡ, ತಂದೆ -ತಾಯಿ ಕಟ್ಟಿ ಬೆಳೆಸಿದ್ದ ಖಾಸ್ಗತೇಶ್ವರ ನಾಟ್ಯ ಸಂಘಕ್ಕೆ ಅಣ್ಣನ ಜೊತೆ ಸೇರಿ 1983ರಲ್ಲಿ ಮರುಜೀವ ತುಂಬಿದರು.
40 ಸಾವಿರಕ್ಕೂ ಅಧಿಕ ಕಲಾಪ್ರದರ್ಶನ ನೀಡಿರುವ ಅವರು ಕುಡುಕರ ಜೀವನವನ್ನು ಹಾಸ್ಯವಾಗಿ ಚಿತ್ರಿಸಿದ ‘ಕಲಿಯುಗದ ಕುಡುಕ’ ನಾಟಕದಲ್ಲಿ ಕುಡುಕ ವಿನ್ಯಾ ಆಗಿ ಸಂಭಾಷಣೆ, ನಟನೆಯಿಂದ ನಾಡಿನ ಜನಪ್ರಿಯರಾದರು. ಈ ಪ್ರಸಿದ್ಧಿ ಅವರನ್ನು ಚಿತ್ರರಂಗಕ್ಕೂ ಎಳೆದೊಯ್ಯಿತು. ನಿರ್ದೇಶಕ ಆನಂದ್ ಪಿ.ರಾಜು ಅವರ ‘ಹೆಂಡ್ತಿ ಅಂದ್ರೆ ಹೆಂಡ್ತಿ’ ಚಿತ್ರದಲ್ಲಿ ಅಭಿನಯಿಸುವ ಮೂಲಕ ಸಿನಿರಂಗಕ್ಕೆ ಕಾಲಿಟ್ಟರು. ಯೋಗರಾಜ್ ಭಟ್ಟರ ‘ಮನಸಾರೆ’ ಚಿತ್ರದಿಂದ ಮತ್ತಷ್ಟು ಪ್ರಸಿದ್ಧಿ ಪಡೆದರು. ಮನಸಾರೆ ನಂತರ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ.
ರಂಗಾಯಣ ಹವ್ಯಾಸಿ ಕಲಾವಿದರ ತಂಡ ನಾನು ವೃತ್ತಿ ಕಲಾವಿದ ಕಳೆದ 40 ವರ್ಷಗಳ ನನ್ನ ವೃತ್ತಿ ಬದುಕಿನ ಅನುಭವವಿದ್ದು ಅವೆರಡನ್ನೂ ಸರಿದೂಗಿಸಿಕೊಂಡು ಹೋಗುವ ಜವಾಬ್ದಾರಿ ನನ್ನ ಮೇಲಿದೆ ಎಂದು ತಿಳಿಸಿದರು.
ಎಲೆಮರೆಯ ಕಾಯಿಯಂತಿರುವ ಉತ್ತರ ಕರ್ನಾಟಕ ಭಾಗದ ಕಲಾವಿದರನ್ನು ಗುರುತಿಸಿ ಬೆಳಕಿಗೆ ತರುವ ಕಾರ್ಯ ಮಾಡುವೆ. ನನಗೆ ವಹಿಸಿರುವ ಹೊಸ ಜವಾಬ್ದಾರಿಯಿಂದ ಸಂತೋಷಗೊಂಡಿದ್ದು ಹೆಚ್ಚು ಕ್ಷಮತೆಯಿಂದ ಅದನ್ನು ಯಶಸ್ವಿಗೊಳಿಸುವೆ–ರಾಜು ತಾಳಿಕೋಟೆ ಧಾರವಾಡ ರಂಗಾಯಣದ ನೂತನ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.