ADVERTISEMENT

ಡಾ.ಬಿದರಿ, ಹಾರಿವಾಳಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2024, 15:48 IST
Last Updated 30 ಅಕ್ಟೋಬರ್ 2024, 15:48 IST
ಡಾ.ಎಲ್‌.ಎಚ್‌.ಬಿದರಿ
ಡಾ.ಎಲ್‌.ಎಚ್‌.ಬಿದರಿ   

ವಿಜಯಪುರ: ನಗರದ ಪ್ರಸಿದ್ಧ ವೈದ್ಯ ಡಾ. ಎಲ್. ಎಚ್. ಬಿದರಿ ಮತ್ತು ಬಸವನ ಬಾಗೇವಾಡಿಯ ಜಾನಪದ ಕಲಾವಿದ ಬಸವರಾಜ ಹಾರಿವಾಳ ಅವರು ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ

ನವೆಂಬರ್ 1 ರಂದು ಬೆಂಗಳೂರನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ಮತ್ತು ಸಚಿವರು ಈ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಡಾ.ಎಲ್‌.ಎಚ್‌.ಬಿದರಿ:

ADVERTISEMENT

ವಿಜಯಪುರ ನಗರದಲ್ಲಿ 120 ಹಾಸಿಗೆಗಳ ಬಿ.ಎನ್.ಬಿ ಪೆಡಿಯಾಟ್ರಿಕ್ ಸ್ನಾತಕೋತ್ತರ ಕೇಂದ್ರವನ್ನು ಸ್ಥಾಪಿಸಿದ ಮೊದಲಿಗರಾಗಿದ್ದಾರೆ. ಮಕ್ಕಳೂ ಸೇರಿದಂತೆ ವಯಸ್ಕರರಿಗೂ ವಿಶೇಷ ಸೇವೆಗಳನ್ನು ಕೈಗೆಟಕುವ ದರದಲ್ಲಿ ಮತ್ತು ಸರ್ಕಾರದ ವಿಮೆ ಯೋಜನೆಗಳಡಿಯಲ್ಲಿ ಆರೋಗ್ಯ ಸೇವೆ ನೀಡುವ ಮೂಲಕ ಮನೆ ಮಾತಾಗಿದ್ದಾರೆ.

ಚಿಕ್ಕಮಕ್ಕಳಿಗೆ ಉತ್ಕೃಷ್ಠ ದರ್ಜೆಯ ಪ್ರತ್ಯೇಕ ಚಿಕಿತ್ಸೆ ಘಟಕ, ನವಜಾತು ಶಿಶುಗಳ ಘಟಕ, ಚಿಕ್ಕ ಮಕ್ಕಳ ಎಲ್ಲ ತರಹದ ಶಸ್ತ್ರಚಿಕ್ಕಿತ್ಸೆಗಳ ವ್ಯವಸ್ಥೆ, ಮಕ್ಕಳ ಹೃದಯ ಸಂಬಂಧಿತ ಶಸ್ತ್ರಚಿಕ್ಕಿತ್ಸೆ ವ್ಯವಸ್ಥೆ ಹಾಗೂ ಕಳೆದ 30 ವರ್ಷಗಳಿಂದ ಮಕ್ಕಳ ಪುಪ್ಪಸದಲ್ಲಿಯ ಪರವಸ್ತು ತೆಗೆಯುವ ವ್ಯವಸ್ಥೆಯನ್ನು ಮಾಡುತ್ತ ಬಂದಿದ್ದಾರೆ. ಇದಲ್ಲದೆ ಮಕ್ಕಳ ಅಭಿವೃದ್ಧಿ ಕ್ಲಿನಿಕ್‌ನಿಂದ ಮಕ್ಕಳ ಮಂದ ಬೆಳವಣಿಗೆ, ಮಾತು ವಿಳಂಬತೆಗೆ ಸಂಬಂಧಿಸಿದಂತೆ ಎಸ್. ಟಿ. ಬಿದರಿ ಟ್ರಸ್ಟನ್ ಅಡಿಯಲ್ಲಿ ಸೇವೆ ನೀಡುತ್ತಿದ್ದಾರೆ.

ಕಳೆದ 40 ವರ್ಷಗಳಿಂದ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರೋಟರಿ ಐಎಂಎ ಗಳಲ್ಲಿಯೂ ಸೇವೆ ಸಲ್ಲಿಸುತ್ತ ಮಕ್ಕಳ ಲಸಿಕೆ ಕಾರ್ಯಕ್ರಮ ಹಾಗೂ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತಿದ್ದಾರೆ.  ಭಾರತೀಯ ರೆಡ್ ಕ್ರಾಸ್ ಸೊಸೈಟಿಗೆ ಅಪಾರ ದೇಣಿಗೆ ನೀಡಿ ಗುಣಮಟ್ಟದ ರಕ್ತನಿಧಿ ಕೇಂದ್ರವನ್ನು ಸ್ಥಾಪಿಸಲು ನೆರವು ನೀಡಿದ್ದಾರೆ. ಚೈಲ್ಡ್ ಅಕಾಡೆಮಿ ಸ್ಥಾಪಿಸುವ ಮೂಲಕ ಮಕ್ಕಳ ಕೌಶಲಗಳನ್ನು ಬೆಳೆಕಿಗೆ ತರುವ ಕೆಲಸ ಮಾಡುತ್ತಿದ್ದಾರೆ. ಎಸ್. ಟಿ. ಬಿದರಿ ಟ್ರಸ್ಟ್ ವತಿಯಿಂದ ಬಡವರಿಗಾಗಿ ಉಚಿತ ಆರೋಗ್ಯ ಸೇವೆ, ಆರೋಗ್ಯ ಶಿಬಿರಗಳನ್ನು ನಡೆಸುತ್ತಿದ್ದಾರೆ. 

‘ನಾನು ಕಳೆದ 45 ವರ್ಷಗಳಿಂದ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು, ಸರ್ಕಾರ ನನ್ನ ಸೇವೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸಂತಸ ತಂದಿದೆ. ಆರೋಗ್ಯ ಕ್ಷೇತ್ರದಲ್ಲಿ ಮತ್ತಷ್ಟು ಸೇವೆ ಸಲ್ಲಿಸಲು ಹೊಸ ಹುಮ್ಮಸ್ಸು ನೀಡಿದೆ’ ಎಂದು ಹೇಳಿದರು. 

ಬಸವರಾಜ ಹಾರಿವಾಳ:

ಬಸವನ ಬಾಗೇವಾಡಿಯ ಬಸವರಾಜ ಹಾರಿವಾಳ(72) ಅವರಿಗೆ ಜಾನಪದ ವಿಭಾಗದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. 

ಕಳೆದ 35 ವರ್ಷಗಳಿಂದ ಜಾನಪದ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. 108 ಹಂತಿ ಪದಗಳನ್ನು ಬಾಯಿಪಾಠ ಮಾಡಿರುವ ಇವರು, 20 ಮಂಗಳಾರತಿ, 20 ಭಜನಾ ತತ್ವಪದಗಳು, 125 ಮಲ್ಲಿಕಾರ್ಜುನ ಕಂಬಿ ಹಾಡುಗಳು, 175 ಕೊಡೆಕಲ್ಲ ಬಸವಣ್ಣನವರ ವಚನಗಳನ್ನು ಸರಾಗವಾಗಿ ಹಾಡಬಲ್ಲವರಾಗಿದ್ದಾರೆ.

ಸಮಾಜ ಸೇವೆಯಲ್ಲಿಯೂ ಮುಂಚೂಣಿಯಲ್ಲಿರುವ ಇವರು, ಲೆಕ್ಕಪತ್ರ, ವಹಿಸಿ ಶುಭ ಕಾರ್ಯಗಳ ಯಾದಿ ಬರೆಯುವುದರಲ್ಲಿ ನಿಪುಣರಾಗಿದ್ದಾರೆ. 

40ಕ್ಕೂ ಪ್ರಶಸ್ತಿಗಳನ್ನು ಇವರು ಪಡೆದಿದ್ದು, ಮೈಸೂರು, ಯಾದಗಿರಿ, ಬಾಗಲಕೋಟೆಯಲ್ಲಿ ಕಾರ್ಯಕ್ರಮ ನೀಡಿದ್ದಾರೆ. 40 ಎಕರೆ ಉಳುಮೆ ಮಾಡಿಕೊಂಡೆ ಇದನ್ನು ಮಾಡುತ್ತಿದ್ದಾರೆ. ಪದಗಳು ಹಾಡುತ್ತಲೇ ಉಳುಮೆ ಮಾಡುತ್ತಾರೆ. 10ನೇ ತರಗತಿ ವರೆಗೆ ಕಲಿತಿದ್ದಾರೆ.

‘ಈ ಪ್ರಶಸ್ತಿ ಸಿಕ್ಕಿರುವುದಕ್ಕೆ ಸಂತಸವಾಗಿದೆ. ತಮ್ಮ ಆಯ್ಕೆಗೆ ಕಾರಣವಾದ ಸರ್ಕಾರ ಮತ್ತು ಸಚಿವ ಶಿವಾನಂದ ಎಸ್. ಪಾಟೀಲ ಅವರಿಗೆ ಧನ್ಯವಾದ ಹೇಳುತ್ತೇನೆ’ ಎಂದು ಹೇಳಿದ್ದಾರೆ.

ಬಸವರಾಜ ಹಾರಿವಾಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.