ADVERTISEMENT

ಕೇಂದ್ರ ಸಚಿವ ಸ್ಥಾನ ನೀಡದೇ ಅನ್ಯಾಯ: ರಮೇಶ್ ಜಿಗಜಿಣಗಿ ಬೇಸರ

​ಪ್ರಜಾವಾಣಿ ವಾರ್ತೆ
Published 9 ಜುಲೈ 2024, 12:49 IST
Last Updated 9 ಜುಲೈ 2024, 12:49 IST
   

ವಿಜಯಪುರ: ‘ಬಿಜೆಪಿ ದಲಿತ ವಿರೋಧಿ, ಆ ಪಕ್ಷ ಸೇರುವುದು ಬೇಡ ಎಂದು ಅನೇಕ ಸ್ನೇಹಿತರು ನನ್ನೊಂದಿಗೆ ಮೊದಲೇ ವಾದ ಮಾಡಿದರೂ ಯೋಚಿಸದೇ ಸೇರಿದೆ. ಏಳು ಬಾರಿ ಸಂಸದನಾದೆ. ಆದರೂ ನನಗೆ ಕೇಂದ್ರ ಸಚಿವ ಸ್ಥಾನ ನೀಡದಿರುವುದಕ್ಕೆ ಕ್ಷೇತ್ರದ ಜನರು ಬೇಸರವಾಗಿದ್ದಾರೆ. ನನಗೆ ಅನ್ಯಾಯವಾಗಿದೆ’ ಎಂದು ಸಂಸದ ರಮೇಶ ಜಿಗಜಿಣಗಿ ಅವರು ಪಕ್ಷದ ವಿರುದ್ಧ ತೀವ್ರ ಅಸಮಾದಾನ ವ್ಯಕ್ತಪಡಿಸಿದರು.

ನಗರದಲ್ಲಿ ಮಂಗಳವಾರ ಸಂಸದರ ಕಾರ್ಯಾಲಯ ಪೂಜಾ ಕಾರ್ಯಕ್ರಮದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ದಲಿತ ಮನುಷ್ಯನಾಗಿ ದಕ್ಷಿಣ ಭಾರತದಿಂದ ನಾನೊಬ್ಬನೇ ಏಳು ಬಾರಿ ಸಂಸದನಾಗಿ ಗೆದ್ದು ಬಂದಿದ್ದೇನೆ. ಕೇಂದ್ರ ಸರ್ಕಾರದಲ್ಲಿ ಈ ಬಾರಿ ಎಲ್ಲ ಮೇಲ್ಜಾತಿಯವರೇ ಸಚಿವರಾಗಿದ್ದಾರೆ. ದಲಿತರು ಬಿಜೆಪಿಗೆ ವೋಟ್‌ ಹಾಕಿಲ್ಲವೇ? ಮನಸ್ಸಿಗೆ ಭಾರೀ ನೋವಾಗಿದೆ. ವೈಯಕ್ತಿವಾಗಿ ನನಗೆ ಕೇಂದ್ರ ಸಚಿವ ಸ್ಥಾನ ಅವಶ್ಯಕತೆ ಇಲ್ಲ. ನನಗೆ ಸಚಿವ ಸ್ಥಾನ ನೀಡಬೇಕು ಎಂಬುದು ನನ್ನ ಕ್ಷೇತ್ರದ ಜನರ ಒತ್ತಡವಾಗಿದೆ’ ಎಂದರು.

ADVERTISEMENT

ಖಂಡನೆ:

‘ಪರಿಶಿಷ್ಟರ ಪಾಲಿನ ₹32 ಸಾವಿರ ಕೋಟಿ ಎಸ್‌ಇಪಿ, ಟಿಎಸ್‌ಪಿ ಹಣವನ್ನು ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಬಳಕೆ ಮಾಡಿಕೊಂಡಿರುವುದು ಖಂಡನೀಯ. ದಲಿತರಿಗೆ ಮೀಸಲಾದ ಅನುದಾನವನ್ನು ಸಮುದಾಯದ ಅಭಿವೃದ್ಧಿಗೆ ಬಳಸದೇ ಅನ್ಯ ಯೋಜನೆಗೆ ದುರುಪಯೋಗ ಪಡಿಸಿಕೊಂಡಿರುವುದು ಖಂಡನೀಯ’ ಎಂದರು.

‘ಹಿಂದುಳಿದ ವರ್ಗದ ಪ್ರತಿನಿಧಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಮೀಸಲಾದ ಅನುದಾನವನ್ನು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಬಳಕೆ ಮಾಡಿರುವುದು ಸರಿಯಲ್ಲ’ ಎಂದು ಹೇಳಿದರು.

‘ದಲಿತ ಸಮುದಾಯಕ್ಕೆ ಸೇರಿದ ಸಮಾಜ ಕಲ್ಯಾಣ ಸಚಿವ ಮಹಾದೇವಪ್ಪ ಕೂಡ ಎಸ್‌ಇಪಿ, ಟಿಎಸ್‌ಪಿ ಅನುದಾನ ಅನ್ಯ ಉದ್ದೇಶಕ್ಕೆ ಬಳಕೆ ಮಾಡುವುದಕ್ಕೆ ಸ್ಪಲ್ಪವೂ ವಿರೋಧಿಸದಿರುವುದು ಸರಿಯಲ್ಲ. ಸಮಾಜದ ಹಿತ ಕಾಪಾಡುವುಲ್ಲ ಮಹಾದೇವಪ್ಪ ವಿಫಲವಾಗಿದ್ದಾರೆ’ ಎಂದು ಆರೋಪಿಸಿದರು. 

‘ಕಾಂಗ್ರೆಸ್ ಪಕ್ಷ ಹಗರಣದಿಂದಲೇ ಜನ್ಮ ತಾಳಿದೆ. ಸಿದ್ದರಾಮಯ್ಯ ಸರ್ಕಾರದಲ್ಲೂ ನೂರೆಂಟು ಅವ್ಯವಹಾರ ಮುಂದುವರಿದಿದೆ. ಅಭಿವೃದ್ಧಿ ಕೆಲಸಗಳು ಸ್ಥಗಿತವಾಗಿವೆ’ ಎಂದು ಆರೋಪಿಸಿದರು.

‘ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಶೀಘ್ರದಲ್ಲೇ ಉದ್ಘಾಟನೆಯಾಗಲಿದೆ. ವಿಜಯಪುರ ಮಾರ್ಗದಲ್ಲಿ ವಂದೇ ಭಾರತ್‌ ರೈಲು ಸಂಚಾರಕ್ಕೆ ತಾಂತ್ರಿಕ ಅಡಚಣೆ ಇದ್ದು, ಶೀಘ್ರದಲ್ಲೇ ಬಗೆಹರಿಯಲಿದೆ’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಎಸ್‌.ಪಾಟೀಲ ಕೂಚಬಾಳ, ವಿಧಾನ ಪರಿಷತ್‌ ಮಾಜಿ ಸದಸ್ಯ ಅರುಣ ಶಹಾಪೂರ, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಮುಖಂಡರಾದ ಸಂಜೀವ ಐಹೊಳಿ, ಉಮೇಶ ಕೋಳಕೂರ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.