ADVERTISEMENT

ಸಂಭ್ರಮದ ರಾವುತರಾಯ–ಮಲ್ಲಯ್ಯ ಜಾತ್ರೆ

ಮಹಾರಾಷ್ಟ್ರ, ಆಂಧ್ರಪ್ರದೇಶದಿಂದ ನೂರಾರು ಭಕ್ತರ

ಅಮರನಾಥ ಹಿರೇಮಠ
Published 18 ಅಕ್ಟೋಬರ್ 2024, 7:37 IST
Last Updated 18 ಅಕ್ಟೋಬರ್ 2024, 7:37 IST
ದೇವರ ಹಿಪ್ಪರಗಿಯ ರಾವುತರಾಯ ತನ್ನ ಅಶ್ವದೊಂದಿಗೆ ದೇವಾಲಯದಲ್ಲಿ ಆಸೀನನಾಗಿರುವುದು.
ದೇವರ ಹಿಪ್ಪರಗಿಯ ರಾವುತರಾಯ ತನ್ನ ಅಶ್ವದೊಂದಿಗೆ ದೇವಾಲಯದಲ್ಲಿ ಆಸೀನನಾಗಿರುವುದು.   

ದೇವರ ಹಿಪ್ಪರಗಿ: ಐತಿಹಾಸಿಕ ಹಿನ್ನೆಲೆಯ ಪಟ್ಟಣದ ರಾವುತರಾಯ– ಮಲ್ಲಯ್ಯ ಜಾತ್ರೆ ಮೂರು ದಿನಗಳ ಮೋಡ ಕವಿದ ವಾತಾವರಣ ಹಾಗೂ ತುಂತುರು ಮಳೆಯ ನಡುವೆಯೇ ಶುಕ್ರವಾರ ಅದ್ಧೂರಿಯ ಬಂಡಿ ಉತ್ಸವದೊಂದಿಗೆ ಸಂಪನ್ನಗೊಳ್ಳಲಿದೆ.

ವಿಜಯದಶಮಿಯ ಬಳಿಕ ದ್ವಾದಶಿಯಂದು ಆರಂಭಗೊಳ್ಳುವ ಸಾಂಪ್ರದಾಯಿಕ ಜಾತ್ರಾ ಮಹೋತ್ಸವ ಹುಣ್ಣಿಮೆಯ ಮರುದಿನ ರಾವುತರಾಯನ ಬಂಡಿ ಉತ್ಸವದೊಂದಿಗೆ ಕೊನೆಗೊಳ್ಳುವುದು.

ಜನಸಮೂಹದ ಜಾತ್ರಾ ಮಹೋತ್ಸವ ಶತಮಾನದ ಹಿಂದಿನಿಂದಲೂ ನಿರಂತರವಾಗಿ ಪ್ರತಿ ವರ್ಷ ನಡೆದು ಬಂದಿದೆ. ಐತಿಹಾಸಿಕ ಹಿನ್ನೆಲೆ ಜೊತೆಗೆ ಪುರಾಣ, ಜನಪದವು ರಾವುತರಾಯನ ಜಾತ್ರೆಯೊಂದಿಗೆ ತಳಕು ಹಾಕಿಕೊಂಡಿದೆ. ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ಹಿರಿಯರು ಆಚರಿಸಿಕೊಂಡು ಬರುತ್ತಿರುವ ಜಾತ್ರೆಯು ಆಧುನಿಕತೆಯ ಭರದಲ್ಲೂ ಸಡಗರದ ಜೊತೆ ಭಯ, ಭಕ್ತಿ ಶ್ರದ್ಧೆಯಿಂದ ಮುಂದುವರಿಯುತ್ತಿದೆ.

ADVERTISEMENT

ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಆಂಧ್ರಪ್ರದೇಶದ ನೆರೆಹೊರೆಯ ಜಿಲ್ಲೆಗಳಲ್ಲಿ ನೆಲೆಸಿರುವ ಭಕ್ತ ಸಮೂಹ ಜಾತ್ರೆಯ ಸಮಯದಲ್ಲಿ ದೇವರಹಿಪ್ಪರಗಿಗೆ ಆಗಮಿಸಿ ತಮ್ಮ ಆರಾಧ್ಯದೈವವಾದ ರಾವುತರಾಯ- ಮಲ್ಲಯ್ಯನ ದರ್ಶನ ಪಡೆದು ಧನ್ಯರಾಗುತ್ತಾರೆ. ಅಶ್ವರೂಢ ರಾವುತರಾಯನಿಗೆ ಪೂಜೆ ಸಲ್ಲಿಸಿ, ದೇವಾಲಯದ ಆವರಣದಲ್ಲಿ ವಗೈಗಳಿಗೆ ಊಟ ಮಾಡಿಸಿ ಪುನೀತರಾಗುತ್ತಾರೆ.

ದಸರಾ ಬಳಿಕ ಬರುವ ದ್ವಾದಶಿಯ ದಿನ ತೆರೆದ ಬಂಡಿಯಲ್ಲಿ ರಾವುತರಾಯ ಅಶ್ವರೂಢನಾಗಿ ಆಸೀನನಾಗುವುದರ ಮೂಲಕ ಜಾತ್ರೆ ಆರಂಭವಾಗುತ್ತದೆ. ಈ ಬಂಡಿ ಮೆರವಣಿಗೆ ಛತ್ರಿ, ಚಾಮರಗಳೊಂದಿಗೆ ರಾವುತರಾಯನ ದೇಗುಲದಿಂದ ಮಲ್ಲಯ್ಯನ ದೇಗುಲದವರೆಗೆ ನಡೆಯುತ್ತದೆ. ಈ ಸಮಯದಲ್ಲಿ ಮಾನೆದೊಡ್ಡಿ ಎಂದೇ ಕರೆಯಲಾಗುವ ಸ್ಥಳದಲ್ಲಿ 500ಕ್ಕೂ ಹೆಚ್ಚು ಜನ ಭಕ್ತರಿಂದ ಪುಷ್ಪಲಂಕಾರ ಜರುಗುತ್ತದೆ. ಇದನ್ನು ಹೂ ಮುಡಿಯುವುದು ಎನ್ನಲಾಗುತ್ತದೆ. ಬಳಿಕ ಶಿಡಗಟ್ಟಿ ಹಾಗೂ ಪಾದಗಟ್ಟಿ ಎಂದೇ ಕರೆಯಲಾಗುವ ಸ್ಥಳದಲ್ಲಿ ಕಾರಣಿಕರಿಂದ ಹೇಳಿಕೆ ನಡೆಯುತ್ತವೆ. ಬಳಿಕ ಸಿಂದಗಿ ರಸ್ತೆಯಲ್ಲಿರುವ ಬನ್ನಿ ವೃಕ್ಷಕ್ಕೆ ತೆರಳಿ ಪ್ರದಕ್ಷಿಣೆ ಮಾಡಿ ಮಲ್ಲಯ್ಯನ ದೇವಸ್ಥಾನವನ್ನು ರಾವುತರಾಯ ಪ್ರವೇಶಿಸುತ್ತಾನೆ.

ಸಂಪ್ರದಾಯದಂತೆ ಇಲ್ಲಿ ರಾವುತರಾಯ– ಗಂಗೆಮಾಳಮ್ಮರ ಮದುವೆ ಪ್ರಸಂಗ ಜರುಗುತ್ತದೆ. ಶೀಗೆ ಹುಣ್ಣಿಮೆಯ ದಿನವಾದ ಭಾನುವಾರ ಸಕ್ಕರೆ ಲೋಭಾನ ನೈವೇಧ್ಯ ಕಾರ್ಯಕ್ರಮ ಅಪಾರ ಭಕ್ತರ ಸಮ್ಮುಖದಲ್ಲಿ ಜರುಗಿತು. ಸೋಮವಾರ ರಾವುತರಾಯ ಪುನಃ ತೆರೆದ ಬಂಡಿಯಲ್ಲಿ ಅಶ್ವರೂಢನಾಗಿ ಮರಳಿ ಸ್ವಸ್ಥಾನಕ್ಕೆ ಮರಳುತ್ತಾನೆ. ಈ ದೃಶ್ಯ ಕಣ್ಣು ತುಂಬಿಕೊಳ್ಳಲು ಅಪಾರ ಸಂಖ್ಯೆಯ ಭಕ್ತ ಸಮೂಹ ಎರಡು ದೇಗುಲಗಳ ಬಳಿ ಜಮಾಯಿಸುವುದು ವಿಶೇಷ. ಈ ಸಂದರ್ಭದಲ್ಲಿ ಭಕ್ತರ ಏಳಕೋಟಿ, ಏಳಕೋಟಿ, ಏಳಕೋಟಿಗೆ ಎಂಬ ಘೋಷಣೆ, ಜಯಕಾರ ಮೋಳಗುತ್ತದೆ.

ಐತಿಹಾಸಿಕ ಹಿನ್ನೆಲೆ: ರಾವುತರಾಯ ಮಾರ್ತಾಂಡ ಭೈರವ ಎಂದು ಕರೆಯಲ್ಪಡುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಮಲ್ಲಾರಿ ಮಹಾತ್ಮೆ ಎಂಬ ಸಂಸ್ಕೃತ ಗ್ರಂಥದಲ್ಲಿ ಉಲ್ಲೇಖವಿದೆ. ಮಣಿ ಮಲ್ಲಾಸುರರು ಎಂಬ ದುಷ್ಟರ ವಧೆಗೆ ಮಾರ್ತಾಂಡ ಭೈರವನಾಗಿ ಅವತರಿಸಿದ ಶಿವನು ಒಬ್ಬ ಮೈಲಾರ. ಈತ ಅಶ್ವರೂಢನಾಗಿ ಹೊರಟು ಮಣಿ ಮಲ್ಲಾಸುರರನ್ನು ವಧಿಸಿದಂತೆ ಇತನ ಮಡದಿ ಗಂಗೆ ಮಾಳಮ್ಮ ಇವಳನ್ನು ತುಪ್ಪದ ಮಾಳಮ್ಮ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಇತನ ವಾಹನ ನಾಯಿ.

ಒಂದೂವರೆ ಸಾವಿರ ವರ್ಷದ ಇತಿಹಾಸ

ಜಾತ್ರೆಯ ಕೇಂದ್ರ ಬಿಂದುವಾದ ಮಲ್ಲಯ್ಯನ ದೇವಸ್ಥಾನಕ್ಕೆ 1500 ವರ್ಷಗಳ ಇತಿಹಾಸವಿದೆ. ದೇವಾಲಯದ ಹಿಂಬದಿಯ ಐದು ಅಂತಸ್ತಿನ ದೀಪಸ್ಥಂಭ ‘ಮಹಲಗಂಬ’ ವಿಜಯಪುರದ ಆದಿಲ್ ಷಾಹಿ ಅರಸರ ಕಣ್ಣು ಕುಕ್ಕುವಂತೆ ಮಾಡಿತ್ತು ಎಂಬ ವಿಷಯ ಇತಿಹಾಸದಿಂದ ತಿಳಿದು ಬರುತ್ತದೆ.

ಮಲ್ಲಯ್ಯನ ದೇಗುಲದ ಮುಂದಿರುವ ಹುಣಸೇಮರ 900 ವರ್ಷಗಳಷ್ಟು ಹಳೆಯದಾಗಿದ್ದು 2011ರಲ್ಲಿ ಘೋಷಿಸಿದ ರಾಜ್ಯದ ಪಾರಂಪರಿಕ ಮರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇರುವುದು ವಿಶೇಷವಾಗಿದೆ. ಸದ್ಯ ನೂತನವಾಗಿ ರಚನೆಗೊಂಡಿರುವ ದೇವಸ್ಥಾನ ಹಾಗೂ ಜಾತ್ರಾ ಕಮಿಟಿ ಪಾರಂಪರಿಕ ಮರದ ವಿಶೇಷತೆ ಸಾರುವ ಫಲಕ ನಿರ್ಮಿಸುವುದರ ಜೊತೆಗೆ ಅದರ ರಕ್ಷಣೆಗೆ ಕ್ರಮ ವಹಿಸಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.