ADVERTISEMENT

ಬ್ರಿಗೇಡ್ ಸ್ಥಾಪನೆ | ಸಾಧು–ಸಂತರ ನೇತೃತ್ವದಲ್ಲಿ ಮಹತ್ವದ ಸಭೆ: ಕೆ.ಎಸ್‌.ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2024, 15:23 IST
Last Updated 19 ಅಕ್ಟೋಬರ್ 2024, 15:23 IST
ಕೆ.ಎಸ್.ಈಶ್ವರಪ್ಪ
ಕೆ.ಎಸ್.ಈಶ್ವರಪ್ಪ   

ವಿಜಯಪುರ: ಹೊಸ ಬ್ರಿಗೇಡ್‌ ಸ್ಥಾಪನೆ ಸಂಬಂಧ ಅ.20ರಂದು ಬಾಗಲಕೋಟೆಯಲ್ಲಿ ಸಾಧು–ಸಂತರ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಹೇಳಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಗಲಕೋಟೆ ಸಭೆಯಲ್ಲಿ ರಾಜ್ಯದ ವಿವಿಧೆಡೆಯ 2500ಕ್ಕೂ ಅಧಿಕ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದರು.

ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಈ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.  

ADVERTISEMENT

ರಾಜಕೀಯ ಕಾರಣಕ್ಕೆ ಬ್ರಿಗೇಡ್‌ ಸ್ಥಾಪಿಸುತ್ತಿಲ್ಲ. ನಾನಾಗಲಿ ಅಥವಾ ಯತ್ನಾಳ ಅವರಾಗಲಿ ನೂತನ ಬ್ರಿಗೇಡ್‌ ನಾಯಕತ್ವ ವಹಿಸುತ್ತಿಲ್ಲ. ಯಾರು ಏನೇ ಒತ್ತಡ ತಂದರೂ ಭವಿಷ್ಯದಲ್ಲಿ ಬ್ರಿಗೇಡ್‌ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ. ನಾಡಿನ ಪ್ರಮುಖ ಸಾಧು–ಸಂತರ ಮಾರ್ಗದರ್ಶನ, ಅವರ ಅಪೇಕ್ಷೆಯಂತೆ ಬ್ರಿಗೇಡ್‌ ನಡೆದುಕೊಂಡು ಹೋಗಲಿದೆ ಎಂದರು.

ಬ್ರಿಗೇಡ್‌ ರೂಪುರೇಷೆ ಹೇಗಿರಬೇಕು ಎಂಬ ತೀರ್ಮಾನವನ್ನು ಬಾಗಲಕೋಟೆ ಸಭೆಯಲ್ಲಿ ತೀರ್ಮಾನವಾಗಲಿದೆ. ನೂತನ ಬ್ರಿಗೇಡ್‌ ಸ್ಥಾಪನೆ ಸಂಬಂಧ ಆರ್‌ಎಸ್‌ಎಸ್‌ ಸೇರಿದಂತೆ ಯಾವುದೇ ಹಿಂದುಪರ ಸಂಘಟನೆಗಳ ಮುಖಂಡರ ಜೊತೆ ಚರ್ಚಿಸಿಲ್ಲ ಎಂದರು.

ಈಗಿರುವ ಕೆಲ ಹಿಂದುಪರ ಸಂಘಟನೆಗಳಲ್ಲಿ ಅಸ್ಪೃಶ್ಯತೆ ಇದೆ. ಅದನ್ನು ನಿವಾರಸುವ ಉದ್ದೇಶದಿಂದ ಈ ಬ್ರಿಗೇಡ್‌ ತಲೆ ಎತ್ತುತ್ತಿದೆ. ಇದಕ್ಕೆ ಯಾರಾರು ಬರುತ್ತಾರೋ ಅವರೆಲ್ಲರಿಗೂ ಸ್ವಾಗತವಿದೆ ಎಂದು ಹೇಳಿದರು.

ವಾಗ್ದಾಳಿ: ರಾಜ್ಯದಲ್ಲಿ ಸರ್ಕಾರ ಇಲ್ಲವೇನೋ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಆಡಳಿತ ವ್ಯವಸ್ಥೆ ಸಂಪೂರ್ಣ ನೆಲಕಚ್ಚಿದೆ. ಧಾರಾಕಾರವಾಗಿ ಮಳೆ ಸುರಿದು ರಸ್ತೆ ಹಾಳಾಗುತ್ತಿದ್ದರೂ, ಬೆಳೆ ಹಾನಿಯಾದರೂ ಒಬ್ಬ ಸಚಿವರು ಭೇಟಿ ನೀಡುತ್ತಿಲ್ಲ. ಅವರ ಕಷ್ಟ ಕೇಳುತ್ತಿಲ್ಲ. ಪರಿಹಾರದ ಮಾತೇ ಇಲ್ಲವಾಗಿದೆ. ತಕ್ಷಣ ರಸ್ತೆ, ಚರಂಡಿ ದುರಸ್ತಿಗೊಳಿಸಿ, ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಜಾತಿ ಜನ ಗಣತಿ: ಒಂಬತ್ತು ವರ್ಷವಾದರೂ ಇದುವರೆಗೂ ಜಾತಿ ಜನ ಗಣತಿ ಬಹಿರಂಗವಾಗಿಲ್ಲ. ಜಾತಿ ಜನ ಗಣತಿ ಪರಿಸ್ಥಿತಿ ‘ನಾಳೆ ಬಾ’ ಎಂಬಂತಾಗಿದೆ. ಸಚಿವ ಸಂಪುಟದಲ್ಲಿ ಮಂಡಿಸುತ್ತೇವೆ ಎಂಬ ಮುಖ್ಯಮಂತ್ರಿ ಹೇಳಿಕೆ ಉತ್ತರ ಕುಮಾರನ ಪೌರುಷದಂತಾಗಿದೆ. ಆದಷ್ಟು ಬೇಗ ಜಾತಿ ಜನ ಗಣತಿಗೆ ಸಚಿವ ಸಂಪುಟದಲ್ಲಿ ಸ್ವೀಕರಿಸಿ, ಸಾರ್ವಜನಿಕ ಚರ್ಚೆಗೆ ಅವಕಾಶ ಕಲ್ಪಿಸಬೇಕು. ಆಮೇಲೆ  ಏನು ಮಾಡಬೇಕು ಎಂಬ ತೀರ್ಮಾನ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮುಖ್ಯಮಂತ್ರಿ, ಸಚಿವರು ಅನೇಕ ಕೇಸುಗಳಲ್ಲಿ ಸಿಲುಕಿಕೊಂಡಿದ್ದಾರೆ. ಜನರನ್ನು ಮರೆತಿದ್ದಾರೆ. ವಿರೋಧ ಪಕ್ಷದ ನಾಯಕರನ್ನು ಕೇಸಿನಲ್ಲಿ ಸಿಲುಕಿಸಲು ವ್ಯರ್ಥ ಪ್ರಯತ್ನ ನಡೆಸಿದ್ದಾರೆ ಎಂದರು.

ಬಿಜೆಪಿ ಮುಖಂಡ ರಾಜು ಬಿರಾದಾರ, ಶಿಲ್ಪಾ ಕುದರಗೊಂಡ, ರಾಹುಲ್‌ ಔರಂಗಬಾದ್‌, ಕಾಶಿನಾಥ ಚನ್ನವೀರ, ಅಶೋಕ ಒಡೆಯರ್‌ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಬಿಜೆಪಿ ಟಿಕೆಟ್‌ ಕೊಡಿಸುವ ಆಮಿಷ: ತನಿಖೆಗೆ ಆಗ್ರಹ

ವಿಜಯಪುರ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಸಹೋದರ ಲೋಕಸಭೆ ಚುನಾವಣೆ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ಆಮಿಷವೊಡ್ಡಿರುವ ಆರೋಪ ಬಂದಿರುವುದು ದುರ್ದೈವ. ತಕ್ಷಣ ಈ ಪ್ರಕರಣದ ಬಗ್ಗೆ ತನಿಖೆಯಾಗಬೇಕು. ತಪ್ಪಿತಸ್ಥರ ವಿರುದ್ಧ ಕ್ರಮವಾಗಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಆಗ್ರಹಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಕರಣದ ಬಗ್ಗೆ ಜೋಶಿ ಕುಟುಂಬದವರು ಸ್ಪಷ್ಟನೆ ನೀಡಬೇಕಿತ್ತು. ಆದರೆ ಎಫ್‌ಐಆರ್‌ ಆದ ತಕ್ಷಣ ನಾಪತ್ತೆಯಾಗಿರುವುದು ಸರಿಯಲ್ಲ. ಹಣ ತೆಗೆದುಕೊಂಡಿರುವುದು ನಿಜವೇ ಆಗಿದ್ದರೇ ಇದು ದೊಡ್ಡ ಅನ್ಯಾಯ. ಪಕ್ಷದಲ್ಲಿ ಬೇಲಿಯೇ ಎದ್ದು ಹೊಲ ಮೇಯುವ ಪರಿಸ್ಥಿತಿ ಕಂಡು ಬೇಸರವಾಗುತ್ತಿದೆ ಎಂದರು. ದೇಶದಲ್ಲಿ ಹಿಂದುತ್ವ ಪರವಾದ ಆಡಳಿತ ನೀಡಲು ಬಿಜೆಪಿಯನ್ನು ಕಟ್ಟಿ ಬೆಳಸಲಾಗಿದೆಯೇ ಹೊರತು ದುಡ್ಡು ತೆಗೆದುಕೊಂಡು ಇಷ್ಟ ಬಂದವರಿಗೆ ಪಕ್ಷದ ಟಿಕೆಟ್ ಕೊಡುವುದಕ್ಕಾಗಿ ಅಲ್ಲ ಎಂದು ಹೇಳಿದರು.

ಕಳೆದ ಲೋಕಸಭೆ ಸೇರಿದಂತೆ ಯಾವುದೇ ಚುನಾವಣೆಯಲ್ಲಿ ಪಕ್ಷದ ಟಿಕೆಟ್‌ಗಾಗಿ ನನ್ನ ಬಳಿ ಯಾರೂ ಆ ರೀತಿ ಹಣ ಕೇಳಿಲ್ಲ. ಒಂದು ವೇಳೆ ಕೇಳಲು ಬಂದಿದ್ದರೇ ಏನು ತೆಗೆದುಕೊಂಡು ಹೊಡೆಯುತ್ತಿದ್ದೆ ಎಂದು ಈಗ ಹೇಳಲ್ಲ. ನನ್ನ ಬಳಿ ಹಣ ಕೇಳುವ ಧೈರ್ಯ ಯಾರಿಗಿದೆ ಎಂದರು.

ರಾಜ್ಯದಲ್ಲಿ ದ್ವೇಷ ರಾಜಕಾರಣ ಆರಂಭವಾಗಿದೆ. ರಾಜ್ಯ ರಾಷ್ಟ್ರ ನಾಯಕರು ಬಳಸುತ್ತಿರುವ ಭಾಷೆ ಕೇಳಲು ಆಗದಂತಾಗಿದೆ. ಕೆಟ್ಟ ಸ್ಥಿತಿಗೆ ರಾಜ್ಯ ರಾಜಕಾರಣ ಬಂದಿದೆ.
--ಕೆ.ಎಸ್‌.ಈಶ್ವರಪ್ಪ, ಮಾಜಿ ಉಪ ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.