ನಾಲತವಾಡ: ರಾಜ್ಯದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ 1 ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಶಾಲಾ ಬ್ಯಾಗ್ ಹೊರೆ ಇಳಿಸಿ ಶಾಲಾ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ಬ್ಯಾಗ್ ಹೊರೆ ತಪ್ಪಿಸಲು ಮಕ್ಕಳು ಶಾಲೆಯಲ್ಲಿಯೇ ತಮ್ಮ ದೈನಂದಿನ ಬಳಕೆಯ ಪಠ್ಯ ವಸ್ತುಗಳನ್ನ ಇಟ್ಟು ಬರಬಹುದು. ಹೋಮ್ ವರ್ಕ್‌ಗೆ ಅವಶ್ಯವಾಗುವ ಪುಸ್ತಕ ಮಾತ್ರ ಮನೆಗೆ ತೆಗೆದುಕೊಂಡು ಹೋಗಲು ಯೋಜನೆ ರೂಪಿಸಿದೆ.
ಶಾಲಾ ಮಕ್ಕಳ ಬ್ಯಾಗ್ ಹೊರೆ ತಗ್ಗಿಸಲು ರಾಜ್ಯ ಸರ್ಕಾರವು ಮಹತ್ವದ ಕ್ರಮ ಕೈಗೊಂಡಿದ್ದು, ಭಾಗ-1, ಭಾಗ-2 ಪಠ್ಯ ಪುಸ್ತಕ ಜಾರಿಗೆ ತಂದಿದೆ. ಅಂದರೆ, ಮೊದಲ ಸೆಮಿಸ್ಟರ್ ನಲ್ಲಿ ಎಸ್‌ಎ 1 ಹಾಗೂ ಎರಡನೇ ಸೆಮಿಸ್ಟರ್ ನಲ್ಲಿ ಎಸ್‌ಎ 2ಗಳಾಗಿ ವಿಂಗಡಿಸಿ ಶೇ 100 ರಷ್ಟು ಪಠ್ಯವನ್ನು ಮೌಲ್ಯಾಂಕನಕ್ಕೆ ಒಳಪಡಿಸುವ ವಿಧಾನವನ್ನು ನೀಡಲಾಗಿದೆ.
ಶೈಕ್ಷಣಿಕ ವರ್ಷವು ಪ್ರಾರಂಭವಾದಂದಿನಿಂದ ಕ್ರಮವಹಿಸುವಂತೆ ಸೂಚನೆ ನೀಡಲಾಗಿದೆ. ಪಠ್ಯಪುಸ್ತಕಗಳ್ನ ಮುದ್ರಿಸಿ ಸರಬರಾಜು ಸಹ ಮಾಡಲಾಗಿದೆ. ಇದರಿಂದ ಮಕ್ಕಳ ಬ್ಯಾಗ್ ಭಾರ ಅರ್ಧಕ್ಕಿಂತ ಹೆಚ್ಚು ಕಡಿಮೆಯಾಗಿದೆ. ಇದರಿಂದ ಮಕ್ಕಳು ಅರ್ಧವಾರ್ಷಿಕ ಪರೀಕ್ಷೆ ವರೆಗೆ ಒಂದು ಪುಟ್ಟ ಪಠ್ಯಪುಸ್ತಕ (ಭಾಗ-1) ದಸರಾ ರಜೆ ಬಳಿಕ ವಾರ್ಷಿಕ ಪರೀಕ್ಷೆವರೆಗೆ ಇನ್ನೊಂದು ಚಿಕ್ಕದಾದ ಪಠ್ಯಪುಸ್ತಕ (ಭಾಗ-2) ಬಳಸುವ ಮೂಲಕ ಶಾಲಾ ಬ್ಯಾಗ್‌ನ ಹೊರೆ ಕಡಿಮೆ ಮಾಡಲಾಗಿದೆ.
ಒಟ್ಟಿನಲ್ಲಿ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಹೆಣಭಾರದ ಚೀಲದ ಸಮಸ್ಯೆಗೆ ಶಾಲಾ ಶಿಕ್ಷಣ ಇಲಾಖೆ ಮುಕ್ತಿ ನೀಡಲು ಮುಂದಾಗಿದ್ದು, ಇದು ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಜೊತೆಗೆ ಶಿಕ್ಷಕರಿಗೂ ಖುಷಿ ತಂದಿದೆ.
ಶಾಲಾ ಬ್ಯಾಗ್ ಹೊರೆ ತಗ್ಗಿಸುವ ನಿಟ್ಟಿನಲ್ಲಿ 2024-25 ನೇ ಸಾಲಿನಲ್ಲಿ ಪಠ್ಯಪುಸ್ತಕಗಳನ್ನು ಭಾಗ-1 ಮತ್ತು ಭಾಗ-2 ರಂತೆ ಪ್ರತ್ಯೇಕವಾಗಿ ಮುದ್ರಿಸಲಾಗಿದೆ. ಇದು ವಿದ್ಯಾರ್ಥಿಗಳಿಗೆ ಪಾಲಕರಿಗೆ ಶಿಕ್ಷಕ ಸ್ನೇಹಿಯಾಗಿದೆಯು.ಬಿ.ಧರಿಕಾರ ಕ್ಷೇತ್ರ ಸಮನ್ವಯಾಧಿಕಾರಿ ಮುದ್ದೇಬಿಹಾಳ
ಬಹು ವರ್ಷಗಳ ಬಳಿಕ ಸರ್ಕಾರ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಪಠ್ಯಪುಸ್ತಕ ಹೊರೆ ತಗ್ಗಿಸಿದೆ ಇದು ಅತೀವ ಸಂತಸದ ಸಂಗತಿಯಾಗಿದೆ- ಗೀತಾಂಜಲಿ ದೇಶಮುಖ ಶಿಕ್ಷಕಿ ಸರ್ಕಾರಿ ಕೆಪಿಎಸ್ ರಕ್ಕಸಗಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.