ಮುದ್ದೇಬಿಹಾಳ:ತಾಲ್ಲೂಕಿನ ಗ್ರಾಮೀಣ ಭಾಗದ ಜನರು ನಾಯಿಗಳಿಂದ ಕಚ್ಚಿಸಿಕೊಂಡರೂ ಚಿಕಿತ್ಸೆಗೆ ಮಾತ್ರ ಹಿಂದೇಟು ಹಾಕುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.
ನಾಯಿ ಕಚ್ಚಿದ ಬಳಿಕ ಚಿಕಿತ್ಸೆ ಪಡೆದುಕೊಳ್ಳದೇ ಅದರ ವೈರಾಣು ದೇಹದಲ್ಲಿ ತೀವ್ರವಾಗಿ ವ್ಯಾಪಿಸಿದ ಬಳಿಕ ಆಸ್ಪತ್ರೆಗೆ ಓಡೋಡಿ ಬರುವವರ ಸಂಖ್ಯೆ ಹೆಚ್ಚುತ್ತಿದೆ. ಇಂಥವರ ಬಗ್ಗೆ ಸರ್ಕಾರಿ ಆಸ್ಪತ್ರೆಯ ವೈದ್ಯರು, ನರ್ಸಿಂಗ್ ಸಿಬ್ಬಂದಿ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಗ್ರಾಮೀಣ ಜನರು ಇನ್ನಾದರೂ ಜಾಗೃತಗೊಳ್ಳುವ ಅಗತ್ಯವಿದೆ ಎಂಬ ಮಾತುಗಳನ್ನು ಹೇಳುತ್ತಿದ್ದಾರೆ.
236 ಕಡಿತ ಪ್ರಕರಣ
ಮುದ್ದೇಬಿಹಾಳ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಅಕ್ಟೋಬರ್ 2023ರಿಂದ ಡಿಸೆಂಬರ್ 2023 ರ ಅವಧಿಯಲ್ಲಿ ಒಟ್ಟು 236 ನಾಯಿ ಕಡಿತದ ಪ್ರಕರಣಗಳು, 33 ಹಾವು ಕಚ್ಚಿದ ಪ್ರಕರಣಗಳು ವರದಿಯಾಗಿದ್ದು ಚಿಕಿತ್ಸೆ ನೀಡಿ ಗುಣಮುಖರನ್ನಾಗಿ ಕಳಿಸಲಾಗಿದೆ.
2023 ಅಕ್ಟೋಬರ್‌ನಲ್ಲಿ 68 ನಾಯಿ, 14 ಹಾವು, ನವೆಂಬರ್‌ನಲ್ಲಿ 114 ನಾಯಿ, 13 ಹಾವು, ಡಿಸೆಂಬರ್‌ನಲ್ಲಿ 54 ನಾಯಿ ಹಾಗೂ 6 ಹಾವು ಕಚ್ಚಿದ ಪ್ರಕರಣಗಳು ವರದಿಯಾಗಿವೆ ಎಂದು ಆಸ್ಪತ್ರೆಯ ಮೂಲಗಳಿಂದ ತಿಳಿದು ಬರುತ್ತದೆ.
ಮುದ್ದೇಬಿಹಾಳ ಪಟ್ಟಣದ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಕಂಡು ಬರುತ್ತದೆ. ವಿಬಿಸಿ ಹೈಸ್ಕೂಲ್, ಬಸ್ ನಿಲ್ದಾಣ, ಮುಖ್ಯರಸ್ತೆಗಳಲ್ಲಿ ಈ ನಾಯಿಗಳ ದಂಡು ಕಂಡು ಬರುತ್ತದೆ. ಒಮ್ಮೆಲೇ 8-10 ಬೀದಿನಾಯಿಗಳ ಓಡಾಟ ಪಾದಚಾರಿಗಳಿಗೂ ಭಯ ಹುಟ್ಟಿಸುತ್ತದೆ. ಪುರಸಭೆಯವರು ನಾಯಿಗಳ ಸಂತತಿ ನಿಯಂತ್ರಿಸಲು ಅಗತ್ಯ ಕ್ರಮ ಜರುಗಿಸಬೇಕು ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿ ಬಂದಿವೆ.
ವಾರದ ಬಳಿಕ ಚಿಕಿತ್ಸೆಗೆ ಬರುವ ಜನ
ಸರ್ಕಾರಿ ಆಸ್ಪತ್ರೆಯಲ್ಲಿ ನಾಯಿ ಕಚ್ಚಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ನಮ್ಮ ಗ್ರಾಮೀಣ ಭಾಗದ ಜನರು ನಾಯಿ ಕಚ್ಚಿದ ಕೂಡಲೇ ಮೊದಲು ಆಸ್ಪತ್ರೆಗೆ ಬರುವ ಬದಲು ದಾರ ಹಾಕಿಸಿಕೊಳ್ಳಲು (ಸಾಂಪ್ರದಾಯಿಕ ಪದ್ಧತಿಯ ಮೊರೆ) ಹೋಗುತ್ತಾರೆ. ಹಳ್ಳಿ ಜನರ ನಂಬಿಕೆಯನ್ನು ನಾವು ಪ್ರಶ್ನಿಸುವುದಿಲ್ಲ. ನಾಯಿ ಹಾವು ಕಚ್ಚಿ ಜೀವಕ್ಕೆ ಆಪತ್ತು ಇರುವ ಅಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ಬಂದು ಹೋಗುವ ಬದಲು ಮೂಢನಂಬಿಕೆಗೆ ಜೋತು ಬಿದ್ದು ಚಿಕಿತ್ಸೆ ಪಡೆದುಕೊಳ್ಳದೇ ಸುಮ್ಮನಿರುತ್ತಾರೆ. ನಾಯಿ ಕಚ್ಚಿದ ವೈರಾಣು ಉಲ್ಬಣಗೊಂಡಾಗ ಆಸ್ಪತ್ರೆಗೆ ಧಾವಿಸಿ ಬರುತ್ತಾರೆ. ಅದರಲ್ಲಿ ಒಂದೊಂದು ವಾರಗಳ ಕಾಲ ತಡವಾಗಿ ಬಂದು ಚಿಕಿತ್ಸೆ ಪಡೆದುಕೊಂಡ ಉದಾಹರಣೆಗಳು ಇವೆ. ಇಂತವರಿಗೆ ಎಷ್ಟು ತಿಳಿ ಹೇಳಿದರೂ ಪ್ರಯೋಜನವಾಗುತ್ತಿಲ್ಲ. -ಮಹ್ಮದರಫೀಕ್ ಬಾಗವಾನ ಶುಶ್ರೂಷಕಾಧಿಕಾರಿ ಸರ್ಕಾರಿ ಆಸ್ಪತ್ರೆ ಮುದ್ದೇಬಿಹಾಳ
ನಾಯಿ ಕಚ್ಚಿದಾಗ ಏನು ಮಾಡಬೇಕು?
ನಾಯಿ ಅಥವಾ ಯಾವುದೇ ಪ್ರಾಣಿಗಳು ಕಚ್ಚಿದಾಗ ಮೊದಲು ಸಾಬೂನು ಮತ್ತು ನೀರಿನಿಂದ ತೊಳೆದುಕೊಳ್ಳಬೇಕು. ನಂತರ ಹತ್ತಿರದ ಆಸ್ಪತ್ರೆಗಳಿಗೆ ತೆರಳಿ ಕಚ್ಚಿದ ಪ್ರಮಾಣವನ್ನು ವೈದ್ಯರು ನಿರ್ಧರಿಸಿ ಚುಚ್ಚುಮದ್ದುಗಳನ್ನು ಕೊಡುತ್ತಾರೆ. ಆದರೆ ನಮ್ಮ ಜನ ಮೊದಲು ನೀರು ಹಾಕಿಸಲು ಕರೆದುಕೊಂಡು ಹೋಗುತ್ತಾರೆ. ಮೊದಲು ಪ್ರಥಮ ಚಿಕಿತ್ಸೆ ಮಾಡಿಸಬೇಕು. ನಾಯಿ ಹಾವು ಕಚ್ಚಿದರೆ ಕೊಡಬೇಕಾದ ಔಷಧಿಗೆ ನಮ್ಮಲ್ಲಿ ಕೊರತೆಯಿಲ್ಲ. -ಡಾ.ಅನೀಲ್‌ಕುಮಾರ ಶೇಗುಣಸಿ ವೈದ್ಯಾಧಿಕಾರಿ ಸರ್ಕಾರಿ ಆಸ್ಪತ್ರೆ ಮುದ್ದೇಬಿಹಾಳ
ನಾಯಿ ಕಚ್ಚಿದಾಗ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳಬೇಕು. ಅದರಿಂದ ಹರಡುವ ರೇಬಿಸ್ ರೋಗ ಅತ್ಯಂತ ಅಪಾಯಕಾರಿಯಾಗಿದ್ದು ಮೂಢನಂಬಿಕೆಗಳಿಗೆ ಜೋತು ಬಿದ್ದು ಜೀವಕ್ಕೆ ಸಂಚಕಾರ ತಂದುಕೊಳ್ಳಬಾರದು.ಹಣಮಂತ ನಲವಡೆ. ಸಾಮಾಜಿಕ ಕಾರ್ಯಕರ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.