ವಿಜಯಪುರ: ಜಿಲ್ಲಾಡಳಿತದಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಗಣರಾಜ್ಯೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಧ್ವಜಾರೋಹಣ ನೆರವೇರಿಸಿದರು.
ಗಣರಾಜ್ಯೋತ್ಸವ ಸಂದೇಶ ನೀಡಿದ ಸಚಿವ ಪಾಟೀಲ, ವಿಜಯಪುರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ರೂಪುರೇಷೆ ತಯಾರಿಸಲಾಗಿದೆ ಎಂದರು.
ವಿಜಯಪುರ ಪಾರಂಪರಿಕ ಸ್ಥಳಗಳು ರಕ್ಷಣೆ, ಪ್ರವಾಸಿತಾಣವಾಗಿ ಅಭಿವೃದ್ಧಿ ಪಡಿಸಲು ಆದ್ಯತೆ ನೀಡಲಾಗುವುದು. ಯುನೆಸ್ಕೋ ಹೆರಿಟೇಜ್ ಸೈಟ್ ನಲ್ಲಿ ಸೇರ್ಪಡೆ ಗೊಳಿಸಲು ತೆಲಂಗಾಣ ಮಾದರಿಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ/ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗುವುದು ಎಂದರು.
ಐತಿಹಾಸಿಕ ಕೋಟೆ ಗೋಡೆಗಳು ಹಾಗೂ ಸುತ್ತಲಿನ ಸ್ಥಳಗಳ ಅಭಿವೃದ್ಧಿ ಮಾಡಲಾಗುವುದು ಎಂದರು.
ನಗರ ಸಂಚಾರ ದಟ್ಟಣೆ ತಡೆಯಲು ಗಾಂಧಿ ಚೌಕಿಯಲ್ಲಿ ಪ್ಲೈ ಓವರ್ ನಿರ್ಮಾಣ ಮಾಡಲಾಗುವುದು ಎಂದರು.
ಸೈಕ್ಲಿಂಗ್ ವೆಲೋಡೋಮ್ ಹಾಗೂ ಸೈಕ್ಲಿಂಗ್ ಹಾಸ್ಟೇಲ್ ಉನ್ನತೀಕರಣ ಮಾಡಲಾಗುವುದು ಎಂದರು.
ವಿಜಯಪುರದಲ್ಲಿ ವಿಮಾನಯಾನ ತರಬೇತಿ ಸಂಸ್ಥೆ ಪ್ರಾರಂಭಿಸಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ಸಾರ್ವಜನಿಕ ಶಾಲಾ ಶಿಕ್ಷಣ ಗುಣಮಟ್ಟ ಹೆಚ್ಚಿಸುವುದು, ಖಾಸಗಿ ಸಹಯೋಗದಲ್ಲಿ ಉತ್ಕೃಷ್ಟ ದರ್ಜೆಯ ಬಿಸಿಯೂಟ ಒದಗಿಸುವುದು. ವಿಜಯಪುರ ನಗರ ಹಾಗೂ ಪಟ್ಟಣಗಳಲ್ಲಿ ಅತ್ಯುತ್ತಮ ಸಾರ್ವಜನಿಕ ಶೌಚಾಲಯಗಳ ನಿರ್ಮಾಣ. ಜಿಲ್ಲೆಯ ಆರೋಗ್ಯ ವ್ಯವಸ್ಥೆ ಸುಧಾರಣೆಗೆ, ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆಗಳ ಆಧುನೀಕರಣ ಮತ್ತು ಗ್ರಾಮೀಣ ವೈದ್ಯಕೀಯ ಸೇವೆಗೆ ಒತ್ತು. ಆಯುಷ್ ಪದ್ಧತಿ, ನಿಸರ್ಗ ಚಿಕಿತ್ಸೆಗೆ ಪ್ರೊತ್ಸಾಹ ನೀಡಲಾಗುವುದು ಎಂದರು.
ನಗರ ಹಾಗೂ ಪಟ್ಟಣಗಳಲ್ಲಿ ಉಚಿತ ವೈಫೈ ವ್ಯವಸ್ಥೆ ಹಾಗೂ ಕ್ರೀಡಾ ಸೌಲಭ್ಯ ಒದಗಿಸುವುದು ಎಂದರು.
ಸಮುದಾಯ ರೇಡಿಯೋ ಕೇಂದ್ರಗಳ ನಿರ್ಮಾಣ ಮಾಡಲು ಆದ್ಯತೆ ನೀಡಲಾಗುವುದು ಎಂದರು.
ತ್ಯಾಜ್ಯ ಸಂಸ್ಕರಣಾ ಘಟಕಗಳ ಸುಧಾರಣೆ ಮಾಡುವುದು ಎಂದು ತಿಳಿಸಿದರು.
ಮೀನುಗಾರಿಕೆ ಕಾಲೇಜು ಹಾಗೂ ಬೃಹತ್ ಮೀನು ಸಂಗ್ರಹಾಲಯ ಪ್ರಾರಂಭಿಸಲು ಯೋಜಿಸಲಾಗಿದೆ ಎಂದರು.
ಶತಮಾನದ ಸಂತ ಶ್ರೀ ಸಿದ್ದೇಶ್ವರ ಶ್ರೀಗಳು ಸದಾ ಇಷ್ಟಪಡುತ್ತಿದ್ದ ಪರಿಸರ, ಪ್ರಕೃತಿ ಕುರಿತಾಗಿ ಅವರ ನೆನಪಿನಲ್ಲಿ ವಿಜಯಪುರ, ಮಮದಾಪುರ ಅಥವಾ ಬಾಬಾನಗರದಲ್ಲಿ ಒಂದು ಸಾವಿರ ಎಕರೆ ಪ್ರದೇಶದಲ್ಲಿ ಬೃಹತ್ ಮಾನವ ನಿರ್ಮಿತ ಕಾಡು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಅಲ್ಲಿಯೇ ವಿಜ್ಞಾನ ಸಂಶೋಧನ ಕೇಂದ್ರ ಪ್ರಾರಂಭಿಸುವ ಉದ್ದೇಶ ಇದೆ ಎಂದರು.
ಜಗತ್ತಿನ ಪ್ರಮುಖ ಕಂಪನಿಗಳಾದ ಎಚ್.ಪಿ., ಲುಲು, ನೆಲ್ಲೆ, ಬಿಎಲ್ ಆಗ್ರೋ, ಎಚ್.ಸಿ.ಎಲ್. ಮುಂತಾದ ಕಂಪನಿಗಳೊಂದಿಗೆ ಮಾತುಕತೆ ನಡೆಸುವ ಮೂಲಕ ರಾಜ್ಯಕ್ಕೆ ₹22 ಸಾವಿರ ಕೋಟಿಗಳಿಗೂ ಹೆಚ್ಚಿನ ಬಂಡವಾಳ ಬರುವುದನ್ನು ಖಾತ್ರಿ ಪಡಿಸಿಕೊಳ್ಳಲಾಗಿದೆ ಎಂದರು.
ಈ ಪೈಕಿ ಲುಲು ಕಂಪನಿ ವಿಜಯಪುರದಲ್ಲಿ ₹ 300 ಕೋಟಿ ವೆಚ್ಚದಲ್ಲಿ ಹಣ್ಣು ಮತ್ತು ತರಕಾರಿ ಸಂಸ್ಕರಣ ಘಟಕವನ್ನು ತೆರೆಯಲು ಒಪ್ಪಿಕೊಂಡಿದೆ. ಇದಲ್ಲದೆ. ಉತ್ತರಪ್ರದೇಶ ಮೂಲದ ಬಿ.ಎಲ್. ಆಗ್ರೋ ಕಂಪನಿ ಕೂಡ ನಮ್ಮ ಜಿಲ್ಲೆಯಲ್ಲೇ ತನ್ನ ಆಹಾರ ಸಂಸ್ಕರಣಾ ಘಟಕವನ್ನು ಆರಂಭಿಸಲು ಮುಂದೆ ಬಂದಿದೆ. ಇದರಿಂದಲೂ ನೂರಾರು ಕೋಟಿ ರೂಪಾಯಿಗಳ ಬಂಡವಾಳ ಹೂಡಿಕೆ ಇಲ್ಲಿ ಆಗಲಿದೆ. ಇವುಗಳಿಂದ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಜಿಲ್ಲೆಯಲ್ಲಿ ಐದು ಸಾವಿರಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದರು.
ಪಥಸಂಚಲನ:
ಪೊಲೀಸ್, ಅಗ್ನಿ ಶಾಮಕದಳ, ಸ್ಕೌಟ್ ಅಂಡ್ ಗೌಡ್ಸ್, ಎನ್ ಸಿಸಿ, ಎನ್ ಎಸ್ ಎಸ್ ಹಾಗೂ ವಿವಿಧ ಶಾಲಾ, ಕಾಲೇಜು ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿದರು.
ಸಂಸದ ರಮೇಶ ಜಿಗಜಿಣಗಿ, ಮೇಯರ್ ಮಹೆಜಬೀನ್ ಹೊರ್ತಿ, ಉಪ ಮೇಯರ್ ದಿನೇಶ್ ಹಳ್ಳಿ, ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ, ಜಿಲ್ಲಾ ಪಂಚಾಯ್ತಿ ಸಿಇಒ ರಿಷಿ ಆನಂದ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.