ADVERTISEMENT

ಪೊಲೀಸ್ ನೌಕರಿ| ಲಿಂಗತ್ವ ಅಲ್ಪಸಂಖ್ಯಾತರು ಮೀಸಲಾತಿಯಿಂದ ಪಾಸ್, ಮಾನದಂಡಗಳಿಂದ ಫೇಲ್

ಅಮರನಾಥ ಹಿರೇಮಠ
Published 30 ಜುಲೈ 2024, 5:01 IST
Last Updated 30 ಜುಲೈ 2024, 5:01 IST
ಶಿವರಾಜ(ಶಿವಾನಿ) ನಾಯ್ಕೋಡಿ
ಶಿವರಾಜ(ಶಿವಾನಿ) ನಾಯ್ಕೋಡಿ   

ದೇವರಹಿಪ್ಪರಗಿ: ಸರ್ಕಾರ ನಿಗದಿಪಡಿಸಿದ ಮೀಸಲಾತಿ ಅನ್ವಯ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ನಂತರ ದೈಹಿಕ ಪರೀಕ್ಷೆಯಲ್ಲಿ ಮಾನದಂಡ ಸಡಿಲಿಸದೇ ಇದ್ದ ಕಾರಣ ಅನುತ್ತೀರ್ಣರಾಗುವ ಮೂಲಕ ತೃತೀಯ ಲಿಂಗಿಗಳು ವಿವಿಧ ಪೊಲೀಸ್ ಹುದ್ದೆಗಳಿಂದ ವಂಚಿತರಾಗಿದ್ದಾರೆ.

2022-23ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಸಶಸ್ತ್ರ ಪೊಲೀಸ್ ಕಾನ್‌ ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಕರೆಯಲಾಗಿತ್ತು. ಒಟ್ಟು 3064 ಹುದ್ದೆಗಳ ಪೈಕಿ 2996 ಹುದ್ದೆಗಳನ್ನು ಪುರುಷರಿಗೆ ಮತ್ತು ಶೇ 1ರಷ್ಟು ಅಂದರೆ, 68 ಹುದ್ದೆಗಳನ್ನು ತೃತೀಯಲಿಂಗಿಗಳಿಗೆ ಮೀಸಲಿರಿಸಲಾಗಿತ್ತು.

68 ಹುದ್ದೆಗಳಿಗೆ ರಾಜ್ಯದಾದ್ಯಂತ ಕೇವಲ 14 ತೃತೀಯ ಲಿಂಗಿಗಳು ಮಾತ್ರ ಅರ್ಜಿ ಸಲ್ಲಿಸುವುದರ ಮೂಲಕ ಲಿಖಿತ ಪರೀಕ್ಷೆ ಬರೆದಿದ್ದರು. ನಂತರ ಫಲಿತಾಂಶ ಬಂದಾಗ 14 ಜನರು ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಆದರೆ, ದೈಹಿಕ ಪರೀಕ್ಷೆಯಲ್ಲಿ ಯಾರೊಬ್ಬರೂ ಉತ್ತೀರ್ಣವಾಗಿಲ್ಲ!

ADVERTISEMENT

ಉತ್ತರ ಕರ್ನಾಟಕದ ಒಟ್ಟು 6 ಅಭ್ಯರ್ಥಿಗಳು ಸರ್ಕಾರದ ಶೇ 1ರ ಮೀಸಲಾತಿ ಅನ್ವಯ ಸಶಸ್ತ್ರ ಪೊಲೀಸ್ ಹುದ್ದೆಗಳಿಗೆ(ಸಿಎಆರ್ ಹಾಗೂ ಡಿಎಆರ್)  ಅರ್ಜಿ ಸಲ್ಲಿಸಿ ನಂತರ ಲಿಖಿತ ಪರೀಕ್ಷೆ ಬರೆದು ಉತ್ತೀರ್ಣರಾಗಿ ನಂತರ ದೈಹಿಕ ಅರ್ಹತಾ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ ಎದುರು ಅಳಲು ತೋಡಿಕೊಂಡ ದೇವರ ಹಿಪ್ಪರಗಿಯ ಶಿವರಾಜ(ಶಿವಾನಿ) ನಾಯ್ಕೋಡಿ,  ‘ದೈಹಿಕ ಪರೀಕ್ಷೆಯ ಮಾನದಂಡಗಳು ಪುರುಷರು ಹಾಗೂ ತೃತೀಯ ಲಿಂಗಿಗಳಿಗೂ ಒಂದೇ ತೆರನಾಗಿದ್ದ ಕಾರಣ ಇವು ತೃತೀಯ ಲಿಂಗಿಗಳ ಸರ್ಕಾರಿ ಹುದ್ದೆಯ ಆಸೆಗೆ ಮುಳ್ಳಾದವು. ಕಾರಣ ನಿಗದಿತ ಕಾಲಮಿತಿಯಲ್ಲಿ 1600 ಮೀಟರ್ ಓಟ, ಲಾಂಗ್ ಜಂಪ್, ಹೈಜಂಪ್‌ಗಳನ್ನು ತೃತೀಯ ಲಿಂಗಿಗಳು ಪುರುಷ ಅಭ್ಯರ್ಥಿಗಳಂತೆ ನಿಗದಿತ ಕಾಲ ಮೀತಿಯಲ್ಲಿ ಸರಾಗವಾಗಿ ಮಾಡಲು ಸಾಧ್ಯವಾಗಿಲ್ಲ’ ಎಂದರು.

‘ತೃತೀಯ ಲಿಂಗಿಗಳ ದೈಹಿಕ ಸಾಮರ್ಥ್ಯದ ಅನುಗುಣವಾಗಿ ದೈಹಿಕ ಪರೀಕ್ಷೆಗಳು ನಡೆಯಬೇಕು. ಅದಕ್ಕಾಗಿ ಮಾನದಂಡಗಳು ಬದಲಾಗಬೇಕು. ಆಗ ಮಾತ್ರ ಲಿಖಿತ ಪರೀಕ್ಷೆ ಪಾಸಾದ ಎಲ್ಲ ಅಭ್ಯರ್ಥಿಗಳು ದೈಹಿಕ ಪರೀಕ್ಷೆ ಪಾಸಾಗಲೂ ಸಾಧ್ಯ. ಜೊತೆಗೆ ತೃತೀಯ ಲಿಂಗಿಗಳಿಗೆ ವಯೋಮಿತಿ ಸಡಿಲಿಕೆ ನೀಡುವಂತಾಗಬೇಕು’ ಎಂದು ಆಗ್ರಹಿಸಿದರು.

‘ರಾಜ್ಯದಲ್ಲಿ ಈಗಾಗಲೇ 10 ನೇ ತರಗತಿಯಿಂದ ಎಂಜಿನೀಯರಿಂಗ್ ಪದವಿವರೆಗೆ ಶಿಕ್ಷಣ ಪಡೆದ ಸಾಕಷ್ಟು ತೃತೀಯ ಲಿಂಗಿಗಳಿದ್ದಾರೆ. ಇವರು ಸೂಕ್ತ ಉದ್ಯೋಗ ದೊರೆಯದೇ ನಿರ್ಲಕ್ಷ್ಯಕ್ಕೆ ಒಳಗಾಗಿ ಭಿಕ್ಷಾಟನೆಯಲ್ಲಿ ತೊಡಗಿದ್ದಾರೆ. ಆದ್ದರಿಂದಲೇ ಲಿಂಗತ್ವ ಮತ್ತು ಲೈಂಗಿಕ ಬಹುತ್ವಕ್ಕಾಗಿ ಚಳವಳಿ ಮೂಲಕ ತೃತೀಯ ಲಿಂಗಿಗಳು ಸರ್ಕಾರಿ ಉದ್ಯೋಗ ಮಾಡಿ ಘನತೆಯಿಂದ ಬದುಕುವ ಹೋರಾಟಕ್ಕೆ ಇಳಿಯುವಂತಾಗಿದೆ’ ಎಂದರು.

‘ರಾಜ್ಯ ಸರ್ಕಾರ ಪೊಲೀಸ್ ಸೇರಿದಂತೆ ವಿವಿಧ ನೇಮಕಾತಿಯಲ್ಲಿ ಮಾನದಂಡಗಳ ಬದಲಾವಣೆ ಮಾಡಿ ತೃತೀಯ ಲಿಂಗಿಗಳ ಸ್ಪರ್ಧೆಗೆ ಅವಕಾಶ ಕಲ್ಪಿಸಬೇಕು, ಬದುಕುವ ಹಕ್ಕನ್ನು ಗಟ್ಟಿಗೊಳಿಸಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.