ತಾಂಬಾ: ಇಲ್ಲಿನ ಅಥರ್ಗಾ ಗ್ರಾಮದಲ್ಲಿ ಶಾಲಾ ಮಾಸ್ತರರಾಗಿ ಸೇವೆ ಸಲ್ಲಿಸಿದ ರೇವಣಸಿದ್ದಪ್ಪ ಅವರ ಪುತ್ಥಳಿ ನಿರ್ಮಿಸಿ, ಅವರನ್ನೇ ಗ್ರಾಮದ ಆರಾಧ್ಯ ದೈವನೆಂದು ನಂಬಿ, ಗುಡಿ ಕಟ್ಟಿ ದಿನನಿತ್ಯ ಪೂಜೆ ಮಾಡುವುದಲ್ಲದೇ ಪ್ರತಿ ವರ್ಷ ಜಾತ್ರೆಯನ್ನೂ ಮಾಡುತ್ತಿದ್ದಾರೆ.
ರೇವಣಸಿದ್ದಪ್ಪ ಮಾಸ್ತರರು 1889 ಮೇ 26ರಂದು ಜನಿಸಿ 1925 ಫೆ.23ರಂದು ಲಿಂಗೈಕ್ಯರಾಗಿದ್ದಾರೆ. ಅವರ ಜೀವಿತಾವಧಿ ಅಲ್ಪಾವಧಿಯಾಗಿದ್ದರೂ ಅವರ ಸೇವೆ ಮಹತ್ವ ಪಡೆದುಕೊಂಡಿದೆ. ಅವರು ಶಿಕ್ಷಣದ ಜೊತೆಗೆ ದೇವರಲ್ಲಿ ಅಪಾರ ನಂಬಿಕೆಯಿಟ್ಟು ಜಪ-ತಪ, ಆಧ್ಯಾತ್ಮ ಬೋಧನೆ, ಲಿಂಗಪೂಜೆ, ಸನ್ಮಾರ್ಗ ರೂಢಿಸಿಕೊಂಡ ಅವರು ಪ್ರತ್ಯಕ್ಷ ದೇವರನ್ನು ಕಂಡವರು ಎಂಬ ನಂಬಿಕೆಯಿದೆ.
ಗ್ರಾಮದ ಪ್ರತಿಯೊಂದು ಕುಟುಂಬದ ದೇವರ ಮನೆಯಲ್ಲಿ, ಅಂಗಡಿಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ, ವ್ಯಾಪಾರದ ಮಳಿಗೆಗಳಲ್ಲಿ ಅವರ ಭಾವಚಿತ್ರವಿದೆ. ಇಲ್ಲಿಯ ಪ್ರತಿಯೊಂದು ಕುಟುಂಬದಲ್ಲಿ ಒಂದು ಮಗುವಿಗಾದರೂ ರೇವಣಸಿದ್ದಪ್ಪ ಹೆಸರಿನಿಂದ ನಾಮಕರಣ ಮಾಡಲಾಗುತ್ತಿದೆ.
ಸೇವಾ ಸಮರ್ಪಣಾ ಭಾವದಿಂದ ಸಮಾಜವನ್ನು ಉತ್ತೇಜಿಸುವ ಮೌಲ್ಯ ಅವರಲ್ಲಿತ್ತು. ಶಾಲೆಯ ಅವಧಿ ಮುಗಿದ ನಂತರ ಗ್ರಾಮಸ್ಥರಿಗೆ ಗ್ರಾಮ ಸ್ವರಾಜ್ಯದ ಬಗ್ಗೆ ಕಲ್ಪನೆ ನೀಡಿದರು. ಮಕ್ಕಳೊಂದಿಗೆ ಇಡೀ ಗ್ರಾಮವನ್ನು ಅಕ್ಷರಸ್ಥರನ್ನಾಗಿ ಮಾಡಿದ ಕೀರ್ತಿ ಅವರದ್ದು.
ಮನೆ ಮನೆಗಳಿಗೆ ಅಡ್ಡಾಡಿ ಮಕ್ಕಳನ್ನು ಕರೆತರುತ್ತಿದ್ದರು. ಓದಿನಲ್ಲಿ ಹಿಂದೆ ಬಿದ್ದ ಮಕ್ಕಳನ್ನು ಗುರುತಿಸುತ್ತಿದ್ದ ಅವರು ಮಕ್ಕಳ ಮನೆ ಮನೆಗೆ ತೆರಳಿ ರಾತ್ರಿ ಸಮಯದಲ್ಲಿ ಹೆಚ್ಚಿನ ಅವಧಿಯಲ್ಲಿ ಪಾಠ ಮಾಡುತ್ತಿದ್ದರು. ಪರಿಸರ ಸ್ವಚ್ಛತೆಗೆ ಆದ್ಯತೆ ನೀಡಿ ಯುವಕರಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಕಿಡಿ ಬಗ್ಗೆ ತಿಳಿವಳಿಕೆ ನೀಡಿ ದೇಶ ಭಕ್ತಿ ಬೆಳೆಸಿದ್ದರು. ಅವರ ಸೇವೆಯನ್ನು ಗುರುತಿಸಿದ ಜನ ಅವರ ಮರಣದ ದಿನವನ್ನು ಗ್ರಾಮದ ಜಾತ್ರೆಯಾಗಿ ಮಾಡುತ್ತಿದ್ದಾರೆ.
ಪ್ರಮುಖ ಬೀದಿಗಳಲ್ಲಿ ಮೆರವಣಿಗೆ
ಮಾರ್ಚ್ 9 ರಂದು ಬೆಳಿಗ್ಗೆ ರೇವಣಸಿದ್ದೇಶ್ವರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ಮಧ್ಯಾಹ್ನ 12ಕ್ಕೆ ಜಂಗಮ ಆರಾಧನೆ ಮಹಾಪ್ರಸಾದ ಸಂಜೆ 6ಕ್ಕೆ ಪಲ್ಲಕ್ಕಿ ಮಹೋತ್ಸವ ಡೊಳ್ಳು ಕುಣಿತ ಕರಡಿ ಮಜಲುಗಳೊಂದಿಗೆ ಭೀರಲಿಂಗೇಶ್ವರ ಡೊಳ್ಳಿನ ವಾಲಗ ಮತ್ತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನೆರವೇರುವುದು. ಮಾರ್ಚ್ 10 ರಂದು ಬೆಳಿಗ್ಗೆ 9ಕ್ಕೆ ಭಾರ ಎತ್ತುವ ಸ್ಪರ್ಧೆ ಮತ್ತು ಸಂಜೆ 9ಕ್ಕೆ ಸಿದ್ಧೇಶ್ವರ ಶ್ರೀಗಳ ನುಡಿನಮನ ರಾತ್ರಿ 10ಕ್ಕೆ ‘ತವರಿಗೆ ಬಂದ ತಂಗಿ’ ಅರ್ಥಾತ್ ‘ಮನೆಮುರುಕ ಅಳಿಯ’ ಎಂಬ ನಾಟಕ ಪ್ರದರ್ಶನವಿದೆ ಎಂದು ಶಿಕ್ಷಕ ಎಚ್.ಎನ್.ಭಂಟನೂರ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.