ವಿಜಯಪುರ: ಕೆ.ಎಸ್.ಆರ್.ಪಿ ಎಡಿಜಿಪಿ ಅಲೋಕ್ ಕುಮಾರ್ ಅವರ ನೇತೃತ್ವದಲ್ಲಿ ಬುಧವಾರ ಬೆಳಿಗ್ಗೆ ನಗರದ ಗೋಳಗುಮ್ಮಟದಿಂದ ಬಿ.ಎಲ್.ಡಿ.ಇ ಕ್ಯಾಂಪಸ್ ವರೆಗೆ ರನ್ ಫಾರ್ ಫಿಟ್ ಇಂಡಿಯಾ ರ‍್ಯಾಲಿ ನಡೆಯಿತು.
ಐಆರ್‌ಬಿ, ಸಿವಿಲ್ ಪೊಲೀಸ್, ಡಿಎಆರ್, ಕೆಎಸ್‌ಆರ್‌ಪಿ ಅಧಿಕಾರಿ, ಸಿಬ್ಬಂದಿ ಮತ್ತು ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಸೇರಿದಂತೆ ಸಾವಿರಕ್ಕೂ ಅಧಿಕ ಜನ ರ‍್ಯಾಲಿಯಲ್ಲಿ ಭಾಗವಹಿಸಿ, 5 ಕಿ.ಮೀ.ದೂರ ಓಡುವ ಮೂಲಕ ಚಳಿಯಲ್ಲೂ ಬೆವರು ಹರಿಸಿದರು.
ವಿಶೇಷ ತರಬೇತಿ:
ಜನವರಿ 16 ರಿಂದ ಮಾರ್ಚ್ 26ರ ವರೆಗೆ ಎರಡು ತಿಂಗಳು ಐಆರ್‌ಬಿ ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲು ವಿಶೇಷ ಅಧಿಕಾರಿ ಕಳುಹಿಸುತ್ತೇನೆ ಎಂದುಎಡಿಜಿಪಿ ಅಲೋಕ್ ಕುಮಾರ್ ಹೇಳಿದರು.
ಸರ್ಕಾರಕ್ಕಲ್ಲ, ನಿಮಗಾಗಿ:
‘ಪ್ರತಿಯೊಬ್ಬ ಪೊಲೀಸ್ ಸಿಬ್ಬಂದಿ ಆರೋಗ್ಯ ಕಾಳಜಿ ವಹಿಸಬೇಕು, ಆರೋಗ್ಯ ಕಾಪಾಡಿಕೊಳ್ಳುವುದು ಯಾವುದೇ ಸರ್ಕಾರದ ಕೆಲಸಕ್ಕಾಗಿ ಅಲ್ಲ, ನಿಮಗಾಗಿ, ನಿಮ್ಮ ಕುಟುಂಬಕ್ಕಾಗಿ ಎಂಬುದನ್ನು ಮರೆಯಬಾರದು. ಪೊಲೀಸರಿಗೆ ಫಿಟ್‌ನೆಸ್ ಜಾಗೃತಿ ಅಗತ್ಯ ಎಂದು ಹೇಳಿದರು.
ಕೆಲಸದ ಒತ್ತಡದ ನಡುವೆಯೂ ನಿಯಮಿತ ವ್ಯಾಯಾಮ ಮಾಡುವುಕ್ಕೆ ಆದ್ಯತೆ ನೀಡಬೇಕು. ಕೆಲ ಸಂದರ್ಭದಲ್ಲಿ ಭದ್ರತೆಗಾಗಿ ಅಲ್ಲಲ್ಲಿ ಪೊಲೀಸರನ್ನು ನಿಯೋಜಿಸಲಾಗುತ್ತದೆ. ಅಂತಹ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸುತ್ತೇಲೇ ವ್ಯಾಯಾಮ ಮಾಡಿದರೆ ಫಿಟ್ ಆಗಿರಬಹುದು ಎಂದರು.
ಕೋವಿಡ್ ಇನ್ನೂ ಹೋಗಿಲ್ಲ. ಹೀಗಾಗಿ ಯಾವುದೇ ಕಾರಣಕ್ಕೂ ನಿಷ್ಕಾಳಜಿ ತೋರಬಾರದು, ಮಾಸ್ಕ್ ಧರಿಸಬೇಕು, ಸ್ಯಾನಿಟೈಜ್ ಸಿಂಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ದೈಹಿಕ, ಮಾನಸಿಕ ತೊಂದರೆಯಾದರೆ ಅದನ್ನು ಆದವರೇ ಅನುಭವಿಸಬೇಕಾಗುತ್ತದೆ. ಬೇರೆಯವರಿಗೆ ಅನುಭವಿಸಲು ಆಗುವುದಿಲ್ಲ. ಹಂಚಿಕೊಳ್ಳಲು ಬರುವುದಿಲ್ಲ, ಅದರ ನೋವನ್ನು ನಾವೇ ಅನುಭವಿಸಬೇಕಾಗುತ್ತದೆ. ಹಾಗಾಗಿ ಪ್ರತಿಯೊಬ್ಬರು ದೈಹಿಕ, ಮಾನಸಿಕ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಲೇಬೇಕು ಎಂದರು.
ವಿಜಯಪುರದ ಇಂಡಿಯಾ ರಿಸರ್ವ್ ಬಟಾಲಿಯನ್ ಕಮಾಂಡೆಂಟ್ಎಸ್.ಡಿ.ಪಾಟೀಲ್, ಸಹಾಯಕ ಕಮಾಂಡೆಂಟ್ ಗುರುನಾಥ್ ಮಡಿವಾಳರ, ಡೆಪ್ಯೂಟಿ ಕಮಾಂಡೆಂಟ್ ಬಿ.ಡಿ.ಲೋಕೇಶ್, ಶರಣ ಬಸವ, ಶರಣ ಬಸವ ಕೊಳಾರಿ, ವಿಶ್ವನಾಥ ನಾಯಕ್, ರಾಚಪ್ಪ ಖಾಜಗಾರ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ ಅರಸಿದ್ದಿ, ಮುನಿರಾಬಾದ್ ಪಿಟಿಎಸ್ ಪ್ರಾಂಶುಪಾಲರಾದ ರಾಮಕೃಷ್ಣ ಮುದ್ದೆಪಾಲ, ಬೆಳಗಾವಿ ಪಿಟಿಸಿ ಪ್ರಾಂಶುಪಾಲ ರಮೇಶ ಬೋರಗಾವಿ, ಕಲಬುರ್ಗಿ ಕೆಎಸ್‌ಆರ್‌ಪಿ 6ನೇ ಪಡೆಯ ಕಮಾಂಡೆಂಟ್ ಬಸವರಾಜ ಜಿಳೆ, ಚಿತ್ರ ನಿರ್ದೇಶಕ ಎಂ.ಆರ್.ರಮೇಶ್,ಜಾವಿದ್ ಜಮಾದಾರ್ ಇದ್ದರು.
***
ಐಆರ್‌ಬಿ ಆಡಳಿತ ಕಚೇರಿ ಉದ್ಘಾಟನೆ ಜ.16ಕ್ಕೆ
ವಿಜಯಪುರ: ಅರಕೇರಿ ಬಳಿ ಇರುವ ವಿಜಯಪುರ ಐಆರ್‌ಬಿ ಬಟಾಲಿಯನ್ ನೂತನ ಆಡಳಿತ ಕಚೇರಿ ಉದ್ಘಾಟನಾ ಕಾರ್ಯಕ್ರಮ ಜ.16ರಂದು ನಡೆಯಲಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರ್ಯಕ್ರಮಕ್ಕೆ ಆಗಮಿಸುವ ಸಾಧ್ಯತೆ ಇದೆ ಎಂದು ಕೆಎಸ್‌ಆರ್‌ಪಿ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದರು.
ಸಚಿವರು ಅಂದು ಬೆಂಗಳೂರಿಗೆ ಬರಲಿದ್ದು, ವಿಜಯಪುರಕ್ಕೆ ಬರುವ ಸಮಯ ಇನ್ನೂ ಅಂತಿಮವಾಗಿಲ್ಲ. ಒಂದು ವೇಳೆ ಬರಲು ಸಾಧ್ಯವಾಗದಿದ್ದರೆ ವರ್ಚ್ಯೂವೆಲ್ ಉದ್ಘಾಟನೆ ಮಾಡುವ ಸಾಧ್ಯತೆ ಇದೆ ಎಂದು ಹೇಳಿದರು.
***
ಪೊಲೀಸರು ಹೊಟ್ಟೆ ಜಾಸ್ತಿ ಬೆಳಸಿದರೆ ಕಳ್ಳರನ್ನು ಬೆನ್ನತ್ತಿ ಹಿಡಿಯಲು ಆಗಲ್ಲ. ಕಳ್ಳ ಮುಂದೆ ಓಡ್ತಾನೆ, ನೀವು ಹಿಂದೆ ಓಡಿದರೆ ಯಾವ ಕೇಸು ಸಿಗಲ್ಲ
–ಅಲೋಕ್ ಕುಮಾರ್, ಎಡಿಜಿಪಿ, ಕೆಎಸ್‌ಆರ್‌ಪಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.