ADVERTISEMENT

ವಿಜಯಪುರ: ಕೃಷ್ಣಮೃಗಗಳ ಸಂರಕ್ಷಣೆಗೆ ಯೋಜನೆ

‘ಭೀಮಾ ತೀರ’ದಲ್ಲಿ ಮೀಸಲು ಪ್ರದೇಶ ನಿರ್ಮಾಣಕ್ಕೆ ಪ್ರಸ್ತಾವ

ಬಸವರಾಜ ಸಂಪಳ್ಳಿ
Published 25 ಜುಲೈ 2024, 5:49 IST
Last Updated 25 ಜುಲೈ 2024, 5:49 IST
ಕೃಷ್ಣ ಮೃಗಗಳು (ಸಂಗ್ರಹ ಚಿತ್ರ)
ಕೃಷ್ಣ ಮೃಗಗಳು (ಸಂಗ್ರಹ ಚಿತ್ರ)   

ವಿಜಯಪುರ: ಕರ್ನಾಟಕ–ಮಹಾರಾಷ್ಟ್ರ ರಾಜ್ಯದ ಗಡಿಭಾಗ ಭೀಮಾ ನದಿ ತೀರದ ಗ್ರಾಮಗಳಲ್ಲಿ ನೆಲೆಕಂಡುಕೊಳ್ಳಲು ಪರದಾಡುತ್ತಿರುವ ಕೃಷ್ಣಮೃಗಗಳ ಸಂರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಲು ಅರಣ್ಯ ಇಲಾಖೆ ಉದ್ದೇಶಿಸಿದೆ. ಅವುಗಳಿಗೆ ಯಾವುದೇ ರೀತಿ ಅಪಾಯ ಮತ್ತು ರೈತರ ಬೆಳೆಗಳಿಗೆ ತೊಂದರೆ ಆಗದಂತೆ ಯೋಜನೆ ರೂಪಿಸಲು ಸಿದ್ಧತೆ ನಡೆಸಿದೆ.

ಇಂಡಿ–ಚಡಚಣ ತಾಲ್ಲೂಕು ವ್ಯಾಪ್ತಿಯ ಬರಡೋಲ, ಜೇವೂರ, ದೇವರನಿಂಬರಗಿ, ದುಮಕನಾಳ, ಶಿಗಣಾಪುರ, ನಂದರಗಿ, ಬಳ್ಳೊಳ್ಳಿ, ಲೋಣಿ, ಝಳಕಿ ಗ್ರಾಮಗಳ ಹೊಲ, ಅರಣ್ಯ ಇಲಾಖೆ ನೆಡುತೋಪು, ರಸ್ತೆ, ಹೆದ್ದಾರಿ ಅಕ್ಕಪಕ್ಕದ ಕುರುಚಲು ಗಿಡಗಂಟಿಗಳಲ್ಲಿ 500ಕ್ಕೂ ಹೆಚ್ಚು ಕೃಷ್ಣ ಮೃಗಗಳು ಸುರಕ್ಷತೆ ಇಲ್ಲದೇ ಅಲೆದಾಡುತ್ತಿವೆ.

ಕೃಷ್ಣ ಮೃಗಗಳು ಸುರಕ್ಷಿತವಾಗಿ ಇರಲು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಕಂಡುಕೊಳ್ಳಲು ಭೀಮಾ ತೀರದಲ್ಲಿ ಅರಣ್ಯ ಇಲಾಖೆಗೆ ಸೇರಿದ ಭೂಮಿ ಸಾಕಷ್ಟು ಪ್ರಮಾಣದಲ್ಲಿ ಇಲ್ಲ. ಅಲ್ಲದೇ, ಇವುಗಳು ನೆಲೆ ಕಂಡುಕೊಂಡಿರುವ ರೈತರ ಜಮೀನು ತುಂಡು ತುಂಡಾಗಿ ಇರುವುದರಿಂದ ಅರಣ್ಯ ಇಲಾಖೆಗೆ ಇವುಗಳ ಸಂರಕ್ಷಣೆ ಕೂಡ ದೊಡ್ಡ ಸವಾಲಾಗಿದೆ.

ADVERTISEMENT

100 ಎಕರೆ ಅಗತ್ಯ:

‘ಕೃಷ್ಣ ಮೃಗಗಳಿಗೆ ಇಷ್ಟವಾಗುವ ಹುಲ್ಲು ಬೆಳೆಸಲು, ನೀರಿನ ಗುಂಡಿ ಮತ್ತು ನೆಡುತೋಪು ನಿರ್ಮಿಸಲು 100 ಎಕರೆ ಭೂಮಿ ಬೇಕು. ರೈತರು ಹಾಗೂ ಕಂದಾಯ ಇಲಾಖೆ ಸಹಯೋಗದೊಂದಿಗೆ ಕೃಷ್ಣ ಮೃಗಗಳಿಗೆಂದೇ ಮೀಸಲು ಪ್ರದೇಶ ಅಭಿವೃದ್ಧಿ ಪಡಿಸುವ ಗುರಿಯಿದೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ(ಡಿಸಿಎಫ್‌) ಶಿವಶರಣಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೆದ್ದಾರಿ ಮತ್ತು ರಸ್ತೆಗಳಲ್ಲಿ ಓಡಾಡುವಾಗ, ಕೃಷ್ಣಮೃಗಗಳು ಅಪಘಾತಕ್ಕೀಡಾಗಿ ಸಾಯುತ್ತವೆ. ಅಲ್ಲದೇ, ಭವಿಷ್ಯದಲ್ಲಿ ಮಾನವ ಮತ್ತು ವನ್ಯ ಪ್ರಾಣಿಗಳ ಸಂಘರ್ಷ ಏರ್ಪಡುವ ಸಾಧ್ಯತೆ ಇದೆ. ಈ ಎಲ್ಲಾ ಅಂಶಗಳನ್ನೂ  ಪರಿಗಣಿಸಿ, ಅವುಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು’ ಎಂದು ಅವರು ತಿಳಿಸಿದರು.

ಕೆಲವಡೆ ಕೃಷ್ಣಮೃಗಗಳು ಹೊಲಗಳಿಗೆ ನುಗ್ಗಿ, ಬೆಳೆ ಹಾಳು ಮಾಡಿವೆ. ಅರಣ್ಯ ಇಲಾಖೆ ಅಧಿಕಾರಿಗಳು, ಸ್ಥಳ ಸಮೀಕ್ಷೆ ನಡೆಸಿ ರೈತರಿಗೆ ಪರಿಹಾರ ನೀಡಿದ್ದಾರೆ.

ಕೃಷ್ಣ ಮೃಗಗಳ ಸಂರಕ್ಷಣೆಗೆ ಮೀಸಲು ಪ್ರದೇಶ ಅಭಿವೃದ್ಧಿಪಡಿಸುವ ಗುರಿಯಿದೆ. ಕಂದಾಯ ಅರಣ್ಯ ಇಲಾಖೆ ಸಹಭಾಗಿತ್ವದಲ್ಲಿ ಯೋಜನೆ ರೂಪಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು.
–ಶಿವಶರಣ್ಯ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿಜಯಪುರ
ಕೃಷ್ಣ ಮೃಗಗಳನ್ನು ಜೇವೂರಿನ ರೇವಣಸಿದ್ದೇಶ್ವರ ದೇವರ ಪ್ರತಿನಿಧಿಗಳು ಎಂದು ಈ ಭಾಗದ ಜನರು ನಂಬಿದ್ದಾರೆ. ಹೀಗಾಗಿ ಅವುಗಳಿಗೆ ಯಾರೂ ತೊಂದರೆ ನೀಡಿಲ್ಲ.
–ಭಾಗ್ಯವಂತ್ ಮಸೂದಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿಜಯಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.