ಕೊಲ್ಹಾರ: ಉತ್ತರ ಕರ್ನಾಟಕ ಭಾಗದ ರೈತಾಪಿ ವರ್ಗದ ಜೀವಾಳವಾದ ಭೂತಾಯಿಯನ್ನು ಆರಾಧಿಸುವ ಹಬ್ಬ ಸೀಗೆ ಹುಣ್ಣಿಮೆ. ಅಕ್ಟೋಬರ್ 17ರಂದು ಹುಣ್ಣಿಮೆ ದಿನ ಆಚರಿಸಲಾಗುವುದು.
ಮಹಾನವಮಿ ನಂತರ ಬರುವ ಸೀಗೆ ಹುಣ್ಣಿಮೆಗೆ ಈ ಭಾಗದಲ್ಲಿ ಭೂತಾಯಿಯ ಹಬ್ಬ, ರೈತರ ಹಬ್ಬ, ಭೂತಾಯಿ ಸೀಮಂತ, ಭೂತಾಯಿ ಬಯಕೆ ಹಬ್ಬ ಎಂಬ ಹೆಸರುಗಳಿಂದಲೂ ಕರೆಯಲ್ಪಡುತ್ತದೆ.
ಆ ದಿನ ರೈತರ ಮನೆಗಳಲ್ಲಿ ಮಹಿಳೆಯರು ಹಸುವಿನ ಸಗಣಿಯಿಂದ ನೆಲ್ಲಕ್ಕಿ ಹೊಯ್ದು, ಎತ್ತುಗಳನ್ನು ಮೈತೋಳೆದು, ಮಡಿನೀರು ತಂದು ನೈವೇದ್ಯ ಮಾಡಿ ಬೆಳಿಗ್ಗೆ ಸೂರ್ಯ ಉದಯಿಸುವ ಮುನ್ನವೇ ಭೂತಾಯಿಗೆ ಚರಗ ಚೆಲ್ಲಲು ಸಿದ್ಧರಾಗಿರುತ್ತಾರೆ.
ಭೂತಾಯಿಗೆ ಸೀಮಂತ ಮಾಡುವಂತೆ ಪಂಚ ಕಲ್ಲುಗಳಿಗೆ ಸುಣ್ಣ ಬಳಿದು, ಕುಂಕುಮ, ಹೂವುಗಳಿಂದ ಸಿಂಗರಿಸಿ, ಪೂಜೆ ಮಾಡಿ, ನೈವೇದ್ಯ ಮಾಡುತ್ತಾರೆ. ಪಂಚ ಕಲ್ಲುಗಳು ಪಾಂಡವರನ್ನು ಪ್ರತಿನಿಧಿಸುತ್ತವೆ. ಮಹಿಳೆಯರಿಗೆ ಉಡಿ ತುಂಬಿ, ಉತ್ತಮ ಬೆಳೆಗಾಗಿ ಪ್ರಾರ್ಥಿಸುತ್ತಾರೆ.
ಭೂ ತಾಯಿಗೆ ನೈವೇದ್ಯದ ರೂಪದಲ್ಲಿ ಮಡಿಕೆಯಲ್ಲಿ ಒಂಬತ್ತು ಧಾನ್ಯಗಳನ್ನು ನೆನಸಿ, ಹಸಿ ಎಣ್ಣೆ ಮಿಶ್ರಣ ಮಾಡಿ, ವಿವಿಧ ಹಸಿ ತರಕಾರಿಗಳಿಂದ ಪಲ್ಯ ಹಾಗೂ ಸಜ್ಜಿಧಾನ್ಯದಿಂದ ಕಡುಬು ತಯಾರಿಸಲಾಗುತ್ತದೆ. ‘ಹೂಲಿಗೋ ಹೂಲಿಗೋ ಹೂಲಿಗೋ’ ಎನ್ನುತ್ತಾ ಜಮೀನಿನ ಎಲ್ಲ ದಿಕ್ಕುಗಳತ್ತ ಚರಗ ಚೆಲ್ಲುವುದು ವಿಶೇಷ.
ಚರಗದ ನಂತರ ಉಳಿದ ನೈವೇದ್ಯ ಭೂತಾಯಿ ಮಡಿಲಲ್ಲಿ ಅರ್ಪಿಸಿ, ಉತ್ತಮ ಫಸಲು ಬರಲಿ, ಕಿಟಕಿಗಳಿಂದ ರಕ್ಷಣೆ ಸಿಗಲಿ, ನಷ್ಟ ಸಂಭವಿಸದಿರಲಿ ಎಂದು ಪ್ರಾರ್ಥಿಸಲಾಗುತ್ತದೆ.
ರೈತರಿಗೆ ಭೂತಾಯಿ ಜೊತೆ ಇರುವ ಅವಿನಾಭಾವ ಸಂಬಂಧವನ್ನು ಸಂಭ್ರಮಿಸುವ ಹಬ್ಬವೇ ಸೀಗೆ ಹುಣ್ಣಿಮೆಮಲ್ಲಪ್ಪ ಗಣಿ ರೈತರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.