ADVERTISEMENT

ಮುದ್ದೇಬಿಹಾಳ | ಕೆರೆಗೆ ನೀರು ಹರಿಸಲು ಕಾಲುವೆಗೆ 1,350 ಅಡಿ ಉದ್ದ ತಾಡಪಾಲ

ಅಗಸಬಾಳದ ರೈತರಿಂದ ಶ್ರಮದಾನ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2024, 6:00 IST
Last Updated 5 ಮಾರ್ಚ್ 2024, 6:00 IST
ಮುದ್ದೇಬಿಹಾಳ ತಾಲ್ಲೂಕಿನ ಅಗಸಬಾಳದ ರೈತರು ಕಣಕಾಲ-ಅಗಸಬಾಳ ಮಾರ್ಗದಲ್ಲಿ ಬರುವ ಕಾಲುವೆಗೆ ತಾಡಪಾಲ ಹೊದಿಸಿದರು 
ಮುದ್ದೇಬಿಹಾಳ ತಾಲ್ಲೂಕಿನ ಅಗಸಬಾಳದ ರೈತರು ಕಣಕಾಲ-ಅಗಸಬಾಳ ಮಾರ್ಗದಲ್ಲಿ ಬರುವ ಕಾಲುವೆಗೆ ತಾಡಪಾಲ ಹೊದಿಸಿದರು    

ಮುದ್ದೇಬಿಹಾಳ (ವಿಜಯಪುರ): ತಾಲ್ಲೂಕಿನ ಅಗಸಬಾಳದ ರೈತರು, ಗ್ರಾಮಸ್ಥರು ತಮ್ಮೂರಿನ ಕೆರೆ ತುಂಬಿಸಲು 1,350 ಅಡಿ ಉದ್ದಕ್ಕೆ ತಾಡಪಾಲನ್ನು ಕಾಲುವೆಗೆ ಹಾಕಿ ಕೆರೆಗೆ ನೀರು ಹರಿಸಲು ಮುಂದಾಗಿದ್ದಾರೆ.

ಫೆಬ್ರುವರಿ 19ರಿಂದ ಆಲಮಟ್ಟಿ ಜಲಾಶಯದಿಂದ ಕಾಲುವೆಗಳ ಮೂಲಕ ಕೆರೆಗಳನ್ನು ತುಂಬಿಸಲು ನೀರು ಬಿಡಲಾಗುತ್ತಿದೆ. ಮಾರ್ಚ್ ಮೊದಲ ವಾರದಲ್ಲಿ ಮುಳವಾಡ ಏತ ನೀರಾವರಿ ಯೋಜನೆಯಡಿ ಬರುವ ಹೂವಿನಹಿಪ್ಪರಗಿ ಶಾಖಾ ಕಾಲುವೆಯಿಂದ ಅಗಸಬಾಳ ಕೆರೆಗೂ ನೀರು ಹರಿಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಕಾಲುವೆ ಪೂರ್ಣಗೊಳ್ಳದಿದ್ದರೂ  ರೈತರು ಕೆಲ ಗುತ್ತಿಗೆದಾರರ ನೆರವಿನಿಂದ ಈ ಕಾಲುವೆಯಲ್ಲಿದ್ದ ಮಣ್ಣು ತೆಗೆಸಿ ತಾತ್ಕಾಲಿಕವಾಗಿ ದುರಸ್ತಿ ಮಾಡಿಸಿದ್ದಾರೆ.

ಬಳಿಕ ಕೃಷಿ ಹೊಂಡಕ್ಕೆ ಬಳಸುವ ತಾಡಪಾಲನ್ನು 100ಕ್ಕೂ ಹೆಚ್ಚು ರೈತರು ಸೇರಿ ಶ್ರಮದಾನ ಮಾಡಿ ಕಾಲುವೆಗೆ ಅಳವಡಿಸಿದ್ದಾರೆ. 

ADVERTISEMENT

‘ಮುಳವಾಡ ಏತ ನೀರಾವರಿ ಯೋಜನೆಯಡಿ ಈ ಕಾಲುವೆ ನಿರ್ಮಿಸಲಾಗಿದ್ದು ಕಾಲುವೆಯಲ್ಲಿ ಮಣ್ಣು ತುಂಬಿದೆ. ಅದನ್ನು ಜೆಸಿಬಿಯಿಂದ ತೆರವುಗೊಳಿಸಿದ್ದೇವೆ. ಪ್ರತಿ ಮನೆಯಿಂದಲೂ ತಲಾ ₹1,000 ವಂತಿಗೆ ಹಾಕಿದ್ದೇವೆ. ಹಳ್ಳೂರು ಗ್ರಾಮಸ್ಥರು ಈ ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ದಂಡಪ್ಪ ಅರಷಣಗಿ ತಿಳಿಸಿದರು.

ಮುದ್ದೇಬಿಹಾಳ ತಾಲ್ಲೂಕಿನ ಅಗಸಬಾಳದ ರೈತರು ಇನ್ನೂ ಪೂರ್ಣಗೊಳ್ಳದ ಕಾಲುವೆಗೆ ತಾಡಪಾಲ ಹಾಸಿ ನೀರು ಹಾಯಿಸಿಕೊಳ್ಳಲು ಶ್ರಮದಾನ ಮಾಡಿದರು.

‘ಒಟ್ಟು 1,350 ಅಡಿ ಉದ್ದ 30 ಅಡಿ ಅಗಲದ ತಾಡಪಾಲನ್ನು ₹1.30 ಲಕ್ಷ ವೆಚ್ಚದಲ್ಲಿ  ದಾವಣಗೆರೆಯಿಂದ ಖರೀದಿಸಿ ತಂದು ಕಾಲುವೆಗೆ ಹಾಕಿದ್ದೇವೆ. ಸಂಬಂಧಿಸಿದ ಅಧಿಕಾರಿಗಳು ಇದಕ್ಕೂ ಮುನ್ನ ಸ್ಥಳಕ್ಕೆ ಭೇಟಿ ನೀಡಿದ್ದಾಗ  ‘ನಮ್ಮಿಂದ ಏನು ಮಾಡಲು ಸಾಧ್ಯವಿಲ್ಲ. ನೀವೇ ನೀರು ಹರಿಸಿಕೊಳ್ಳಲು ಏನಾದರೂ ವ್ಯವಸ್ಥೆ ಮಾಡಿಕೊಳ್ಳಿ’ ಎಂದಿದ್ದರು. ನೀರಿನ ಅವಶ್ಯಕತೆ ನಮಗಿದೆ. ಹೀಗಾಗಿ ತಾತ್ಕಾಲಿಕವಾಗಿ ನಾವೇ ಕಾಲುವೆಗೆ ತಾಡಪಾಲ ಹಾಕಿ ನೀರು ಕೆರೆಗೆ ಹರಿಸಲು ಶ್ರಮದಾನ ಮಾಡಿದ್ದೇವೆ’ ಎಂದು ತಿಳಿಸಿದರು. 

‘ಇಂತಹ ಬಿರು ಬೇಸಿಗೆಯಲ್ಲಿ ಅಗಸಬಾಳ ಕೆರೆಗೆ ನೀರು ಹರಿಸಲು ಗ್ರಾಮಸ್ಥರು, ರೈತರು ಸೇರಿ ಶ್ರಮದಾನ ಮಾಡಿದ್ದಾರೆ’ ಎಂದು ಸ್ಥಳೀಯ ಮುಖಂಡ ಅರವಿಂದ ಕಾಶಿನಕುಂಟಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.