ವಿಜಯಪುರ:ಒಬ್ಬ ಸಂವೇದನಾಶೀಲ ಸ್ತ್ರೀವಾದಿಯಾಗಿ ಗುರುತಿಸಿಕೊಂಡಿರುವಪ್ರೊ.ಆರ್.ಸುನಂದಮ್ಮ ಅವರು, ಕತೆ, ಕಾವ್ಯ, ಕಾದಂಬರಿ, ಸಂಶೋಧನಾ ಮತ್ತು ವೈಚಾರಿಕ ಲೇಖನಗಳಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯಕ್ಕೆ 2003ರಲ್ಲಿ ಕಾರ್ಯಕ್ರಮ ಅಧಿಕಾರಿಯಾಗಿಸೇರ್ಪಡೆಯಾದ ಸುನಂದಮ್ಮ, ಉಪನ್ಯಾಸಕಿಯಾಗಿ, ರೀಡರ್ ಆಗಿ, ಸಹ ಪ್ರಾಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿ, ಎನ್‍ಎಸ್‍ಎಸ್ ಕಾರ್ಯಕ್ರಮ ಸಂಯೋಜಕರಾಗಿ, ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶಕರಾಗಿ, ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ, ಕನಕದಾಸ ಅಧ್ಯಯನ ಪೀಠದ ಸಂಯೋಜಕರಾಗಿ, ಎರಡು ಅವಧಿಗೆ ಆರ್ಥಿಕ ಅಧಿಕಾರಿಗಳಾಗಿ, ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಸ್ಥಾಪನೆಯಾಗಿರುವ ದೇಶದ ಮೊಟ್ಟಮೊದಲ ಮಹಿಳಾ ವಸ್ತು ಸಂಗ್ರಹಾಲಯದ ಸ್ಥಾಪಕ ನಿರ್ದೇಶಕರಾಗಿ, ಮಹಿಳಾ ವಿಶ್ವವಿದ್ಯಾನಿಲಯದ ಮೊದಲ ಮಹಿಳಾ ಕುಲಸಚಿವರಾಗಿ ಅತ್ಯಂತ ಸಮರ್ಥವಾಗಿ ನಿಭಾಯಿಸಿ ಇದೀಗ ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.
ಬೋಧನೆ, ವಿಸ್ತರಣಾ ಚಟುವಟಿಕೆಗಳ ಜೊತೆ ಜೊತೆಯಲ್ಲಿಯೇ ಸಂಶೋಧನಾ ಕ್ಷೇತ್ರದಲ್ಲಿಯೂ ಅಪಾರ ಸಾಧನೆ ಮಾಡಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು, ಯುಜಿಸಿ ಹಾಗೂ ಅಂತರರಾಷ್ಟ್ರೀಯ ಸಂಸ್ಥೆಯೊಂದು ನೀಡಿರುವ ಪ್ರಾಯೋಜಕತ್ವದಲ್ಲಿ ಒಟ್ಟು 11 ಸಂಶೋಧನಾ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ಸಂಶೋಧನಾ ವರದಿಗಳನ್ನು ಸಲ್ಲಿಸಿರುವ ಪ್ರೊ.ಸುನಂದಮ್ಮ ಅವರು, ವಿವಿಧ ಸಂಶೋಧನಾ ಜರ್ನಲ್‍ಗಳಲ್ಲಿ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ಮಹಿಳಾ ವಿವಿಯ ಮಹಿಳಾ ಅಧ್ಯಯನ ವಿಭಾಗದಲ್ಲಿ 16 ವಿದ್ಯಾರ್ಥಿನಿಯರಿಗೆ ಪಿಎಚ್.ಡಿ ಮಾರ್ಗದರ್ಶಕರಾಗಿ ಕೆಲಸ ಮಾಡಿದ್ದಾರೆ. ಹೀಗೆ ಸಂಶೋಧನಾ ಕ್ಷೇತದಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡು ಸಮರ್ಪಣಾ ಭಾವದಿಂದ ಸ್ತ್ರೀವಾದಿ ನೆಲೆಯ ಸಂಶೋಧಕಿಯಾಗಿ ಕೆಲಸ ಮಾಡಿರುವುದು ಅವರ ಜೀವನ ಸಾಧನೆಯ ಬಹುಮುಖ್ಯ ಮೈಲಿಗಲ್ಲುಗಳಲ್ಲೊಂದಾಗಿದೆ.
2001ರಲ್ಲಿಇವರ ‘ಪರಿವರ್ತನೆ’ ಕತೆಗೆ ಎಚ್.ಎಂ.ಟಿ. ಗಡಿಯಾರಗಳ ಉದಯೋನ್ಮುಖ ಲೇಖಕರ ಪ್ರಶಸ್ತಿ, 2005ರಲ್ಲಿ ‘ದ್ವಿತ್ವ’ ಕಾದಂಬರಿಗೆ ‘ಕರ್ನಾಟಕ ಸಾಹಿತ್ಯ ಅಕಾಡೆಮಿ’ಪ್ರಶಸ್ತಿ, 2010ರಲ್ಲಿ ಅತ್ಯುತ್ತಮ ಎನ್.ಎಸ್.ಎಸ್ ಕಾರ್ಯಕ್ರಮ ಸಂಯೋಜಕರ ರಾಜ್ಯ ಪ್ರಶಸ್ತಿ, 2012ರಲ್ಲಿ ಇಂದಿರಾ ಗಾಂಧಿ ವಿಶಿಷ್ಟ ಸೇವಾ ಪ್ರಶಸ್ತಿ, 2017ರಲ್ಲಿ ಸಮಾಜ ಸೇವೆಗಾಗಿ ಸುವರ್ಣಮುಖಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. 2015ರಲ್ಲಿ ದಲಿತ ಸಾಹಿತ್ಯ ಪರಿಷತ್ ‘ಸಾವಿತ್ರಿ ಬಾಯಿ ಫುಲೆ’ ಪ್ರಶಸ್ತಿ ನೀಡಿ ಗೌರವಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.