ADVERTISEMENT

ಸಾಹಿತ್ಯಕ್ಕೆ ಹೊಸ ಭಾಷ್ಯ ಬರೆದ ಶರಣರು: ವಕೀಲ ವಿ.ಎಸ್. ಖಾಡೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2024, 14:24 IST
Last Updated 7 ಏಪ್ರಿಲ್ 2024, 14:24 IST
ವಿಜಯಪುರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಭಾ ಭವನದಲ್ಲಿ ಜರುಗಿದ ದತ್ತಿ ನಿಧಿ ಉಪನ್ಯಾಸ ಕಾರ್ಯಕ್ರಮವನ್ನು ವಕೀಲ ವಿ.ಎಸ್ ಖಾಡೆ ಉದ್ಘಾಟಿಸಿದರು
ವಿಜಯಪುರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಭಾ ಭವನದಲ್ಲಿ ಜರುಗಿದ ದತ್ತಿ ನಿಧಿ ಉಪನ್ಯಾಸ ಕಾರ್ಯಕ್ರಮವನ್ನು ವಕೀಲ ವಿ.ಎಸ್ ಖಾಡೆ ಉದ್ಘಾಟಿಸಿದರು    

ವಿಜಯಪುರ: ಶರಣರ ಚಿಂತನ ಮಂಥನದಿಂದ ಮೂಡಿದ ಸ್ವರೂಪವೇ ವಚನ ಸಾಹಿತ್ಯ. ಸರ್ವರನ್ನು ಸಮಭಾವದಿಂದ ಕಂಡ 12ನೇ ಶತಮಾನವೂ ಸುವರ್ಣಯುಗವಾಗಿತ್ತು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದ ಶರಣರು, ವಚನ ಸಾಹಿತ್ಯ ರಚಿಸಿ ಕನ್ನಡ ಸಾಹಿತ್ಯಕ್ಕೆ ಹೊಸ ಭಾಷ್ಯ ಬರೆದರು ಎಂದು ವಕೀಲ ವಿ.ಎಸ್. ಖಾಡೆ ಹೇಳಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಸಭಾಭವನದಲ್ಲಿ ಭಾನುವಾರ ಜರುಗಿದ ಶಾಂತಾಬಾಯಿ ಗುಂಡಳ್ಳಿ ಹಾಗೂ ದಿ.ಪ್ರಭಾವತಿ ಪಟ್ಟಣಶೆಟ್ಟಿ ದತ್ತಿ ನಿಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಚನಗಳು ಕನ್ನಡ ಸಾಹಿತ್ಯದ ಸುವರ್ಣ ನಿಧಿ ಸಂಗ್ರಹಿಸಿ ಮುದ್ರಿಸಿ ಜನರಿಗೆ ಪರಿಚಯಿಸಿದ ಫ.ಗು ಹಳಕಟ್ಟಿ ಅವರ ಕಾರ್ಯ ಅನನ್ಯ ಎಂದರು.

ವಿಶ್ರಾಂತ ಉಪನಿರ್ದೇಶಕ ಎಸ್.ಐ. ಕಣಬೂರ ಮಾತನಾಡಿ, ಕಠಿಣ ಮತ್ತು ರಾಜಾಶ್ರಯದಲ್ಲಿ ಕನ್ನಡ ಸಾಹಿತ್ಯವನ್ನು ಸರಳೀಕರಣಗೊಳಿಸಿ ಜನ ಸಾಮಾನ್ಯರಿಗೂ ಅರ್ಥವಾಗುವಂತೆ ವಚನ ರಚಿಸಿದ ಕೀರ್ತಿ ಶರಣರದ್ದು, ಪ್ರಮಾಣ ಬದ್ಧವಾಗಿರುವ ವಚನಗಳು ವ್ಯಕ್ತಿಯ ದೋಷವನ್ನು ತಿದ್ದುವ ಮೂಲಕ ಮಾನವೀಯ ಮೌಲ್ಯಗಳನ್ನು ಮೂಡಿಸುವ ಶ್ರೇಷ್ಠ ಸಂದೇಶಗಳಾಗಿವೆ ಎಂದರು.

ADVERTISEMENT

ಮುಕ್ತಾಯಕ್ಕನ ಕುರಿತು ಉಪನ್ಯಾಸ ನೀಡಿದ ಸಾಹಿತಿ ಅಂಬಿಕಾ ಕರಕಪ್ಪಗೋಳ ಮಾತನಾಡಿ, ಸರ್ವಕಾಲದಲ್ಲೂ ಒಪ್ಪಿಕೊಳ್ಳುವ ಹನ್ನೆರಡನೇ ಶತಮಾನದ ವಚನಗಳು ಸಮಾನತೆ, ಸಮಷ್ಟಿ ಭಾವವನ್ನು ಮೂಡಿಸಿದವು. ಜ್ಞಾನ ಮತ್ತು ಪರಮಾತ್ಮನ ಹಂಬಲಿಸಿದ ಶರಣೆ ಮುಕ್ತಾಯಕ್ಕ ಶೋಕ ಸಂದರ್ಭದಲ್ಲಿಯೂ ವಚನ ರಚನೆ ಮಾಡಿದ ಶ್ರೇಷ್ಠ ವಚನಕಾರ್ತಿ ಎಂದರು.

ಮಹಮ್ಮದ್ ಗೌಸ್ ಹವಾಲ್ದಾರ್ ಮಾತನಾಡಿ, ಕೇವಲ ಅನುಭವದ ಮೇಲೆಯೇ ಸರ್ವರನ್ನು ಪ್ರೀತಿಸುವ ಸಾಹಿತ್ಯ ವಚನ ಸಾಹಿತ್ಯ, ಕಾಯಕಕ್ಕೆ ಪ್ರಾಧಾನ್ಯತೆ ನೀಡಿದ ಶಿವಶರಣೆಯರು ಸಂಸಾರದ ಜೊತೆಗೆ ಆಧ್ಯಾತ್ಮಿಕ ಚಿಂತನೆಗಳನ್ನೊಳಗೊಂಡ ವಚನ ರಚಿಸಿ ವಿಶ್ವಕ್ಕೆ ಸಮಾನತೆಯ ಸಂದೇಶ ನೀಡಿದರು ಎಂದರು.

ಹುಣಶ್ಯಾಳ ಪಿ.ಬಿ ಸಂಸ್ಥಾನದ ಆನಂದ ದೇವರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹಾಸಿಂಪೀರ ವಾಲೀಕಾರ, ರಾಜೇಸಾಬ ಶಿವನಗುತ್ತಿ, ಅಭಿಷೇಕ ಚಕ್ರವರ್ತಿ, ಶಿವಾನಂದ ಡೋಣುರ, ಸುನಂದ ಕೋರಿ, ಸಂಗಮೇಶ ಮೇತ್ರಿ, ಶೋಭಾ ಬಡಿಗೇರ, ಸುಭಾಸಚಂದ್ರ ಕನ್ನೂರ, ಇಂದಿರಾ ಬಿದರಿ, ವಿದ್ಯಾವತಿ ಅಂಕಲಗಿ, ಅರ್ಜುನ ಶಿರೂರ, ಸಿದ್ದಾರಾಮ ಬಿರಾದಾರ, ಲಕ್ಷ್ಮಿ ಕಾತರಾಳ, ಅಲ್ಲಿಸಾಬ ಖಡಕೆ, ಗಂಗಮ್ಮ ರಡ್ಡಿ, ಅನಿತಾ ಕಾಂಬಳೆ, ಜಿ.ಎಸ್ ಬಳೂರ, ಅಶೋಕ ಪೂಜಾರಿ, ವಿಜಯಲಕ್ಷ್ಮಿ ಎಚ್, ಹಣಮಂತಪ್ಪ ತೊದಲಬಾಗಿ, ಸಿದ್ದರಾಮಪ್ಪ ಜಂಗಮಶೆಟ್ಟಿ, ಎನ್.ಕೆ ಕುಲಕರ್ಣಿ, ಶಿವಲೀಲಾ ಕೊರವಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.