ADVERTISEMENT

ಸಮಗ್ರ ರಂಗಗಳ ನಾಯಕ ಬಸವಣ್ಣ: ತರಳಬಾಳು ಶ್ರೀ

​ಪ್ರಜಾವಾಣಿ ವಾರ್ತೆ
Published 18 ಜೂನ್ 2024, 14:14 IST
Last Updated 18 ಜೂನ್ 2024, 14:14 IST
ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ ಇತ್ತೀಚೆಗೆ ನಡೆದ ‘ಶರಣ ಸಂಕುಲ’ ಕಾರ್ಯಕ್ರಮದಲ್ಲಿ ತರಳಬಾಳು ಜಗದ್ಗುರು ಬೃಹನ್ಮಠ ಸಿರಿಗೆರೆ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮತ್ತು ಸಚಿವ ಎಂ.ಬಿ.ಪಾಟೀಲ ಪರಸ್ಪರ ಚರ್ಚಿಸಿದರು
ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ ಇತ್ತೀಚೆಗೆ ನಡೆದ ‘ಶರಣ ಸಂಕುಲ’ ಕಾರ್ಯಕ್ರಮದಲ್ಲಿ ತರಳಬಾಳು ಜಗದ್ಗುರು ಬೃಹನ್ಮಠ ಸಿರಿಗೆರೆ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮತ್ತು ಸಚಿವ ಎಂ.ಬಿ.ಪಾಟೀಲ ಪರಸ್ಪರ ಚರ್ಚಿಸಿದರು   

ವಿಜಯಪುರ: 12ನೇ ಶತಮಾನದ ಬಸವಣ್ಣ ಸಾಂಸ್ಕೃತಿಕ ನಾಯಕ ಅಷ್ಟೇ ಅಲ್ಲ, ಸಾಹಿತ್ಯಿಕ, ಸಾಮಾಜಿಕ, ಧಾರ್ಮಿಕ, ರಾಜಕೀಯ ಮತ್ತು ಆರ್ಥಿಕತೆ ಕ್ಷೇತ್ರಗಳ ಸಮಗ್ರ ನಾಯಕ ಎಂದು ತರಳಬಾಳು ಜಗದ್ಗುರು ಬೃಹನ್ಮಠ ಸಿರಿಗೆರೆ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸಿರಿಗೆರೆ ತರಳಬಾಳು ಕಲಾಸಂಘ ಮತ್ತು ವಿದ್ಯಾಸಂಸ್ಥೆ ವಿದ್ಯಾರ್ಥಿಗಳಿಂದ ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ ಇತ್ತೀಚೆಗೆ ನಡೆದ ‘ಶರಣ ಸಂಕುಲ’ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ರಾಜ್ಯ ಸರ್ಕಾರ ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ಮುಖ್ಯಮಂತ್ರಿಗೆ ಸಲ್ಲಿಸಿದ ಮನವಿಯಲ್ಲಿ ಮೊದಲನೇ ಸಹಿ ನನ್ನದಾಗಿದೆ. ಬಸವಣ್ಣನವರು ಕೇವಲ ಸಾಂಸ್ಕೃತಿಕ ನಾಯಕರಾಗಿರದೇ ಸಮಗ್ರ ರಂಗಗಳ ನಾಯಕ ಆಗಿದ್ದಾರೆ. ಜಗತ್ತಿನ ಶ್ರೇಷ್ಠ ವ್ಯಕ್ತಿಗಳ ಪರಿಚಯ ನೋಡಿದರೆ, ಪ್ರತಿಯೊಬ್ಬರು ಒಂದೊಂದು ವಿಷಯದಲ್ಲಿ ಪರಿಣತಿ ಹೊಂದಿದ್ದರೆ, ಬಸವಣ್ಣನವರು ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ, ಶೈಕ್ಷಣಿಕ ರಂಗಗಳು ಸೇರಿದಂತೆ ಎಲ್ಲ ರಂಗಗಳಲ್ಲಿಯೂ ಪರಿಣತಿ ಸಾಧಿಸಿದ್ದಾರೆ ಎಂದರು.

ADVERTISEMENT

ಜ್ಞಾನಯೋಗಾಶ್ರಮದ ಪ.ಪೂ.ಬಸವಲಿಂಗ ಸ್ವಾಮೀಜಿ ಮಾತನಾಡಿ, ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ಯೋಗ, ಪ್ರಾಣಾಯಾಮ, ಕ್ರೀಡೆಗಳಲ್ಲಿ ಭಾಗವಹಿಸಿದರೆ ಸದೃಢ ಶರೀರ ಹೊಂದಿ, ಬುದ್ಧಿವಂತರಾಗುತ್ತಾರೆ ಎಂದು ಹೇಳಿದರು.

ಸಚಿವ ಎಂ.ಬಿ.ಪಾಟೀಲ ಅವರ  ಸಾರ್ವಜನಿಕ ಸಂಪರ್ಕಾಧಿಕಾರಿ ಮಹಾಂತೇಶ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ವಿದ್ಯಾರ್ಥಿಗಳಿಂದ ನಡೆದ ಮಲ್ಲಕಂಬ, ಮಲ್ಲಿಹಗ್ಗ ಸಾಹಸ ಕ್ರೀಡೆ ವೀಕ್ಷಿಸಿದರು.

ವಿವಿಧ ಸಂಸ್ಥೆಗಳ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರು ಭಾಗವಹಿಸಿದ್ದರು.

ಹಣಮಂತ ಚಿಂಚಲಿ, ವಿಜಯಪುರ ನಗರ ಕ್ಷೇತ್ರಶಿಕ್ಷಣಾಧಿಕಾರಿ ಬಸವರಾಜ ತಳವಾರ, ಅರವಿಂದ ಗಬ್ಬೂರ, ಸುಭಾಸ ಕರಿಕಬ್ಬಿ, ಗಂಗಾಧರ ಸಂಬಣ್ಣಿ, ರವಿ ಖಾನಾಪುರ, ರಾಜು ಜಕ್ಕುಂಡಿ, ಮಧು ಕಲಾದಗಿ, ಮಯೂರ ಬಿರಾದಾರ, ವಿಶ್ವನಾಥ ಬಿಜ್ಜರಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.