ವಿಜಯಪುರ: ಉಗ್ರರ ವಿರುದ್ಧ ಹೋರಾಡಿ ಪ್ರಾಣ ತ್ಯಾಗ ಮಾಡಿದ್ದ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲ್ಲೂಕಿನ ಉಕ್ಕಲಿ ಗ್ರಾಮದ ಹವಾಲ್ದಾರ್ ಕಾಶಿರಾಯ ಬೊಮ್ಮನಹಳ್ಳಿಗೆ ಕೇಂದ್ರ ಸರ್ಕಾರವು ಮರಣೋತ್ತರ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿದೆ.
ನವದೆಹಲಿಯಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಂದ ಕಾಶಿರಾಯ ಅವರ ತಾಯಿ ಶಾಂತಾಬಾಯಿ ಶಂಕ್ರಪ್ಪ ಬೊಮ್ಮನಹಳ್ಳಿ ಮತ್ತು ಅವರ ಪತ್ನಿ ಸಂಗೀತಾ ಪ್ರಶಸ್ತಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಅವರ ಇಬ್ಬರು ಮಕ್ಕಳು ಇದ್ದರು.
ರಕ್ಷಿಸಿದ ಯೋಧ:2021ರ ಜುಲೈ 1ರಂದು ಜಮ್ಮು–ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಉಗ್ರರು ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಸೇನಾ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಾಗ ಅದರ ಮುಂದಾಳತ್ವ ವಹಿಸಿದ್ದ 37ರ ಹರೆಯದ ಹವಾಲ್ದಾರ್ ಕಾಶಿರಾಯ ಅವರು ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿ, ಉಗ್ರರು ತಾವು ಅಡಗಿರುವ ಸ್ಥಳದಿಂದ ತಪ್ಪಿಸಿಕೊಳ್ಳದಂತೆ ತಡೆದಿದ್ದರು. ಬಳಿಕ ಕಾಶಿರಾಯ ಅವರನ್ನು ಗುರಿಯಾಗಿಸಿಕೊಂಡ ಉಗ್ರರು ದಾಳಿ ನಡೆಸಿದಾಗ ಕಾಶಿರಾಯ ಗಾಯಗೊಂಡರೂ ಅಂಜದೇ ಉಗ್ರನೊಬ್ಬನ ಎದೆಗೆ ಗುಂಡಿಕ್ಕಿದರು.
ಕಾಶಿರಾಯ ಅವರ ಗುಂಡಿನ ಎದುರೇಟಿಗೆ ಎದುರು ಉಗ್ರರು ತತ್ತರಿಸಿಹೋಗಿದ್ದರು. ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಉಗ್ರರ ಜತೆ ಹೋರಾಡಿ ನಮ್ಮ ದೇಶದ ಯೋಧರನ್ನು ರಕ್ಷಿಸಿದ್ದ ಹಿನ್ನೆಲೆಯಲ್ಲಿ ಅವರಿಗೆ ಮರಣೋತ್ತರ ಶೌರ್ಯ ಪುರಸ್ಕಾರ ನೀಡಲಾಗಿದೆ.
ಹೆಮ್ಮೆಯ ಸಂಗತಿ:ಶೌರ್ಯ ಪ್ರಶಸ್ತಿ ಪುರಸ್ಕೃತ ಧೀರ ಕನ್ನಡಿಗ, ವೀರ ಯೋಧ ಕಾಶಿರಾಯ ಅವರು ವಿಜಯಪುರ ಜಿಲ್ಲೆಯವರು ಎಂಬುದು ಹೆಮ್ಮೆಯ ಸಂಗತಿ ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ಬಿ ದಾನಮ್ಮನವರ ಅವರು ತಿಳಿಸಿದ್ದಾರೆ.
ಭಯೋತ್ಪಾದಕರ ವಿರುದ್ಧ ಹೋರಾಡಿ ಮಣ್ಣಲ್ಲಿ ರಕ್ತ ಹರಿಸಿದ ಕಾಶಿರಾಯ ಅವರಿಗೆ ಶೌರ್ಯ ಪ್ರಶಸ್ತಿ ನೀಡಿರುವ ಕೇಂದ್ರ ಸರ್ಕಾರಕ್ಕೆ ಜಿಲ್ಲೆಯ ಜನತೆ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಕಾಶಿರಾಯ ಅವರ ದೇಶಪ್ರೇಮದ ಗಾಥೆಯು ಯುವ ಸಮುದಾಯಕ್ಕೆ ಸ್ಪೂರ್ತಿದಾಯಕವಾಗಿದೆ ಎಂದು ದಾನಮ್ಮನವರ ಶ್ಲಾಘಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.