ವಿಜಯಪುರ: ಜೆಡಿಎಸ್–ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪಥನವಾಗಿ, ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ಸಿದ್ದರಾಮಯ್ಯ ಪಾತ್ರವೇ ದೊಡ್ಡದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಬಿಜೆಪಿ ಸರ್ಕಾರ ರಚನೆ ವೇಳೆ ಮುಂಬೈಗೆ ಶಾಸಕರನ್ನು ಕಳಿಸಿದ್ದು ಇವರೇ ಅಲ್ಲವೇ? ಸಿದ್ದರಾಮಯ್ಯ–ಯಡಿಯೂರಪ್ಪ ಅವರ ನೈಜ ಸಂಬಂಧ ಹೊರ ಬಂದರೆ ಬಹಳಷ್ಟು ವಿಚಾರಗಳು ಬಹಿರಂಗವಾಗಲಿವೆ ಎಂದು ಅವರು ಹೇಳಿದರು.
ದೇವೇಗೌಡರು ಎಂದೂ ಸಹ ಬಿಜೆಪಿ ಜೊತೆ ಕೈ ಜೋಡಿಸಿಲ್ಲ. ದೇವೇಗೌಡರ ಜಾತ್ಯತೀತತೆ ಪ್ರಶ್ನಿಸುವ ನೈತಿಕತೆ ಸಿದ್ದರಾಮಯ್ಯ ಎಲ್ಲಿ ಉಳಿಸಿಕೊಂಡಿದ್ದಾರೆ? ಡಿಎಂಕೆ ಜೊತೆ ಸೇರಿ ಸರ್ಕಾರ ರಚನೆ ಮಾಡಿದ ನಿಮ್ಮದ್ಯಾವ ಜಾತ್ಯಾತೀತತೆ? ಶಿವಸೇನೆ ಜೊತೆ ಸೇರಿ ಸರ್ಕಾರ ರಚನೆ ಮಾಡಿರುವ ನಿಮ್ಮದು ಯಾವ ಜಾತ್ಯತೀತತೆ ಸಿದ್ದರಾಮಯ್ಯನವರೇ? ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ನಡವಳಿಕೆಯಿಂದ ಜನರು ಕಾಂಗ್ರೆಸ್‌ನಿಂದ ದೂರ ಹೋಗುತ್ತಿದ್ದಾರೆ ಎಂದರು.
ಜಮೀರ್ ಅಹ್ಮದ್ ಬ್ಲ್ಯಾಕ್‌ಮೇಲ್ ಜೀವನ ಮಾಡುತ್ತಾರೆ. ಮಾರ್ಯಾದೆ ಇಲ್ಲದವರ ಜೊತೆಗೆ ನಾನು ಚರ್ಚೆ ಮಾಡಲ್ಲ. ಕೊಚ್ಚಯ ಮೇಲೆ ಕಲ್ಲು ಎಸೆದರೆ ನಮ್ಮ ಮೇಲೆ ಬೀಳುತ್ತದೆ ಎಂದರು.
ಸಿಂದಗಿ ಗೆಲ್ಲುತ್ತೇವೆ
ದೇವೇಗೌಡ ಮಾರ್ಗದರ್ಶನ, ಪರಿಶ್ರಮ, ಕಾರ್ಯಕರ್ತರ ಶ್ರಮದಿಂದಾಗಿ ಸಿಂದಗಿ ಉಪ ಚುನಾವಣೆಯಲ್ಲಿ ಹೆಚ್ಚು ಮತಗಳನ್ನು ಪಡೆಯುತ್ತೇವೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.