ವಿಜಯಪುರ: ವಯೋಸಹಜ ಅನಾರೋಗ್ಯದಿಂದಾಗಿ ಸೋಮವಾರ ಲಿಂಗೈಕ್ಯರಾಗಿದ್ದ ಜ್ಞಾನ ಯೋಗಾ ಶ್ರಮದ ಸಿದ್ಧೇಶ್ವರ ಸ್ವಾಮೀಜಿ (82) ಅವರ ಅಂತ್ಯಕ್ರಿಯೆಯು ಆಶ್ರಮದ ಆವರಣದಲ್ಲಿ ಮಂಗಳವಾರ ರಾತ್ರಿ 8.45ಕ್ಕೆ ಅವರ ಅಂತಿಮ ಇಚ್ಛೆಯಂತೆ ಅಗ್ನಿಸ್ಪರ್ಶದೊಂದಿಗೆ ನೆರವೇರಿತು.
ಕತ್ತಲು ಆವರಿಸಿದ್ದ ಆಶ್ರಮದ ಆವರಣದಲ್ಲಿ, ಹೊಚ್ಚ ಹೊಸದಾಗಿ ವೃತ್ತಾಕಾರದಲ್ಲಿ ನಿರ್ಮಿಸಲಾಗಿದ್ದ ಚಿತಾಕಟ್ಟೆಗೆ ಸಚಿವೆ ಶಶಿಕಲಾ ಜೊಲ್ಲೆ ಮತ್ತು ಸಂಸದ ಅಣ್ಣಾಸಾಬ್ ಜೊಲ್ಲೆ ಪೂಜೆ ಸಲ್ಲಿಸಿ, ಕಟ್ಟೆಯ ಸುತ್ತಲೂ ದೀಪಬೆಳಗಿಸಿದರು.
ಸೈನಿಕ ಶಾಲೆಯ ಆವರಣದಲ್ಲಿ ಶ್ರೀಗಳ ಅಂತಿಮ ದರ್ಶನ ಮುಗಿದ ಬಳಿಕ ಪೊಲೀಸರು ಮೂರು ಸುತ್ತು ಕುಶಾಲತೋಪುಗಳನ್ನು ಹಾರಿಸಿ ಸರ್ಕಾರಿ ಗೌರವ ಅರ್ಪಿಸಿದರು. ಪುಷ್ಪಗಳಿಂದ ವಿಶೇಷವಾಗಿ ಅಲಂಕ ರಿಸಿದ್ದ ತೆರೆದ ವಾಹನದಲ್ಲಿ ಜ್ಞಾನ ಯೋಗಾಶ್ರಮದವರೆಗೆ ಶ್ರೀಗಳ ಅಂತಿಮಯಾತ್ರೆ ನಡೆಯಿತು. ಬಳಿಕ ಪಾರ್ಥಿವ ಶರೀರವನ್ನು ಅವರ ಗುರುಗಳಾದ ಮಲ್ಲಿಕಾರ್ಜುನ ಶಿವಯೋಗಿಗಳ ಪ್ರಣವ ಮಂಟಪ (ಗದ್ದುಗೆ) ಬಳಿ ಇರಿಸಿ, ಚಿತೆಯತ್ತ ತರಲಾಯಿತು. ಜಮಖಂಡಿ ತಾಲ್ಲೂಕಿನ ಹುಲ್ಯಾಳದ ಸದಾಶಿವ ಆಶ್ರಮದಿಂದ ತರಲಾಗಿದ್ದ 700 ಕೆ.ಜಿ ಶ್ರೀಗಂಧದ ಕಟ್ಟಿಗೆ ಮೇಲೆ ಶ್ರೀಗಳ ಪಾರ್ಥಿವ ಶರೀರವನ್ನಿಟ್ಟು, ಅಗ್ನಿ ಸ್ಪರ್ಶ ಮಾಡಲಾಯಿತು.
ಕನ್ಹೇರಿ ಮಠದ ಅದೃಶ್ಯ ಕಾಡ ಸಿದ್ಧೇಶ್ವರ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿರಿಗೆರೆಯ ತರಳಬಾಳು ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಸಕ ಬಿ.ಎಸ್.ಯಡಿಯೂರಪ್ಪ, ಸಚಿವ ಗೋವಿಂದ ಕಾರಜೋಳ, ಶಾಸಕ ಎಂ.ಬಿ.ಪಾಟೀಲ ಸೇರಿದಂತೆ ಹಲವು ಗಣ್ಯರು ಚಿತೆಗೆ ತುಪ್ಪ, ವಿಭೂತಿ ಅರ್ಪಿಸಿದರು.
ಸ್ವಾಮೀಜಿಗಳೆಲ್ಲ ದೀರ್ಘದಂಡ ನಮಸ್ಕಾರ ಸಲ್ಲಿಸಿದರು.
ಆಶ್ರಮದ ಶಿಷ್ಯರು ಗುರುವಿನ ಕೃಪೆಯ ಹಾಡು ಹಾಡುತ್ತ ವಿದಾಯ ಕೋರಿದರು. ‘ಜ್ಯೋತಿ ಬೆಳಗುತಿದೆ.. ಪರಂ ಜ್ಯೋತಿ ಬೆಳಗುತಿದೆ', ‘ಶಿವಾಯ ನಮ ಓಂ’ ಉದ್ಘೋಷಗಳ ನಡುವೆ ಶ್ರೀಗಳ ಅಂತ್ಯಕ್ರಿಯೆ ನಡೆಯಿತು. ಇಡೀ ಆಶ್ರಮ ನೀರವ ಮೌನಕ್ಕೆ ಜಾರಿತು.
ನಾಡಿನ ವಿವಿಧ ಮಠಾಧೀಶರು, ಜನಪ್ರತಿನಿಧಿಗಳು, ಆಶ್ರಮವಾಸಿಗಳು, ಪೊಲೀಸರು, ಶ್ರೀಗಳಿಗೆ ಚಿಕಿತ್ಸೆ ನೀಡಿದ್ದ ವೈದ್ಯರು ಅಂತ್ಯಕ್ರಿಯೆಗೆ ಸಾಕ್ಷಿಯಾದರು.
ಚಿತೆಯ ಬೆಂಕಿ ನೆಲಕಚ್ಚುವ ಮುನ್ನ, ‘ಮನೆಗೆ ಹೋಗಿ ಪ್ರಸಾದ ಸ್ವೀಕರಿಸಿ’ ಎಂದು ಕೋರಲಾಯಿತು. ‘ಚಿತಾಭಸ್ಮ ಬೇಕಾದವರು, ಆಶ್ರಮದಲ್ಲಿ ಹೆಸರು ನೋಂದಾಯಿಸಬೇಕು. ನಂತರ ಭಸ್ಮವನ್ನು ನದಿ, ಸಮುದ್ರಗಳಿಗೆ ವಿಸರ್ಜಿಸಬೇಕು’ ಎಂದು ಆಶ್ರಮದವರು ಪ್ರಕಟಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.