ಕೊಲ್ಹಾರ : ರಾಜ್ಯದ ರಾಮನಗರ, ಚಾಮರಾಜನಗರ, ಕೋಲಾರ, ಮೈಸೂರು, ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಹೆಚ್ಚು ಕೇಂದ್ರೀಕೃತವಾಗಿರುವ ರೇಷ್ಮೆ ಕೃಷಿ ಇದೀಗ ವಿಜಯಪುರ ಜಿಲ್ಲೆಗೂ ವ್ಯಾಪಿಸಿದೆ.
ವಿಶೇಷವೆಂದರೆ, ಜಿಲ್ಲೆಯಲ್ಲಿ ಅಖಂಡ ಬಸವನ ಬಾಗೇವಾಡಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ರೇಷ್ಮೆ ಕೃಷಿ ಮಾಡಲಾಗುತ್ತಿದೆ. ಜಿಲ್ಲೆಯ ಒಟ್ಟು ರೇಷ್ಮೆ ಪ್ರಗತಿಯಲ್ಲಿ ಶೇ 58 ರಷ್ಟು ಪಾಲು ಬಸವನ ಬಾಗೇವಾಡಿ ತಾಲ್ಲೂಕಿನದಾಗಿದೆ ಎಂಬುದು ಗಮನಾರ್ಹ ಅಂಶ.
ರೇಷ್ಮೆ ಇಲಾಖೆ ಮಾಹಿತಿಯಂತೆ ಬಸವನ ಬಾಗೇವಾಡಿ ತಾಲ್ಲೂಕು ರೇಷ್ಮೆ ಕೃಷಿ ತಾಂತ್ರಿಕ ಸೇವಾ ಕೇಂದ್ರ ವ್ಯಾಪ್ತಿಯಲ್ಲಿ ಐದು ವರ್ಷಗಳ ಹಿಂದೆ ಕೇವಲ 38 ರೇಷ್ಮೆ ಬೆಳೆಗಾರರು ಹಾಗೂ 96 ಎಕರೆ ಪ್ರದೇಶದಲ್ಲಿ ಹಿಪ್ಪುನೇರಳೆ ರೇಷ್ಮೆ ಕೃಷಿ ಇತ್ತು.
ಸದ್ಯ ಅಖಂಡ ತಾಲ್ಲೂಕಿನಲ್ಲಿ ಒಟ್ಟು 274 ರೇಷ್ಮೆ ಬೆಳೆಗಾರರಿದ್ದು, 757 ಎಕರೆ ಪ್ರದೇಶದಲ್ಲಿ ಹಿಪ್ಪುನೇರಳೆ ರೇಷ್ಮೆ ಕೃಷಿ ಮಾಡಲಾಗುತ್ತಿದೆ. ಅಲ್ಲದೇ, 66 ಪ್ರತ್ಯೇಕ ಹುಳು ಸಾಕಾಣಿಕೆ ಮನೆಗಳು, 18 ಎಕರೆ ಹಿಪ್ಪುನೇರಳೆ ಮರಗಡ್ಡಿ ತೋಟ ಸ್ಥಾಪಿಸಲಾಗಿದೆ. 32 ಕಡಿಮೆ ವೆಚ್ಚದ ಬಯೋಡೈಜೆಸ್ಟ್, 4 ಚಾಕಿ ಹುಳು ಸಾಕಾಣಿಕೆ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಇನ್ನೂ ರೇಷ್ಮೆ ಕೃಷಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ವಿಜಯಪುರ ಜಿಲ್ಲಾ ಮಧ್ಯವರ್ತಿ ಸಹಕಾರ ಬ್ಯಾಂಕ್ (ಡಿಸಿಸಿ) ರೇಷ್ಮೆ ಬೆಳೆಗಾರರಿಗೆ ಇಲ್ಲಿವರೆಗೂ ಸುಮಾರು ₹2.20 ಕೋಟಿ ಸಾಲ ನೀಡಿರುವುದು ವಿಶೇಷ.
ಐದು ವರ್ಷಗಳಲ್ಲಿ ತಾಲ್ಲೂಕು ರೇಷ್ಮೆ ಕೃಷಿಯಲ್ಲಿ ಇಷ್ಟೋಂದು ಗಮನಾರ್ಹ ಪ್ರಗತಿ ಸಾಧಿಸಲು ತಾಲ್ಲೂಕು ರೈತಸ್ನೇಹಿ ರೇಷ್ಮೆ ಅಧಿಕಾರಿ ಸುರೇಶ ಗೋಲಗೊಂಡ ಅವರ ಪರಿಶ್ರಮ ಮುಖ್ಯ ಕಾರಣ ಎನ್ನುತ್ತಾರೆ ತಾಲ್ಲೂಕಿನ ಪ್ರಗತಿಪರ ರೇಷ್ಮೆ ಬೆಳೆಗಾರರು.
ಇವರು ರೇಷ್ಮೆ ಇಲಾಖೆ ಯೋಜನೆಗಳು ಮತ್ತು ಸಹಾಯಧನಗಳನ್ನು ರೇಷ್ಮೆ ಬೆಳೆಗಾರರಿಗೆ ಸಮರ್ಪಕವಾಗಿ ತಲುಪಿಸುವ ಜೊತೆಗೆ ಅವರಿಗೆ ಯಶಸ್ವಿ ರೇಷ್ಮೆ ಕೃಷಿಗೆ ಕಾಲಕಾಲಕ್ಕೆ ಸೂಕ್ತ ಸಲಹೆ ಮಾರ್ಗದರ್ಶನಗಳನ್ನು ನೀಡುತ್ತಾ ರೇಷ್ಮೆ ಬೆಳೆಗೆ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದಾರೆ.
ಬಸವನ ಬಾಗೇವಾಡಿ ಮತಕ್ಷೇತ್ರದ ಶಾಸಕ ಶಿವಾನಂದ ಪಾಟೀಲರು ರೇಷ್ಮೆ ಅಧಿಕಾರಿಯ ಸೇವೆ ಹಾಗೂ ತಾಲ್ಲೂಕಿನಲ್ಲಿ ರೇಷ್ಮೆ ಕೃಷಿ ಪ್ರಗತಿಯನ್ನು ಶ್ಲಾಘಿಸಿ ಇತ್ತಿಚೇಗೆ ಜರುಗಿದ ಖಾಸಗಿ ಕಾರ್ಯಕ್ರಮದಲ್ಲಿ ರೇಷ್ಮೆ ಅಧಿಕಾರಿ ಸುರೇಶ ಗೋಲಗೊಂಡ ಅವರನ್ನು ಸನ್ಮಾನಿಸಿ ಗೌರವಿಸಿದ್ದಾರೆ.
‘ರೇಷ್ಮೆ ಬೆಳೆ ನಿರಂತರ ಆದಾಯ ತಂದುಕೊಡುವ ಸರಳ ಕೃಷಿ ವಿಧಾನವಾಗಿದ್ದು, ಬಂಗಾರದಂತಹ ಬೆಲೆ ಸಿಗುತ್ತಿದೆ. ರೇಷ್ಮೆ ಅಧಿಕಾರಿ ಸುರೇಶ ಗೊಲಗೊಂಡ ರೇಷ್ಮೆ ಬೆಳೆಗಾರರಿಗೆ ಏನೇ ಸಮಸ್ಯೆಗಳಿದ್ದರೂ ತ್ವರಿತವಾಗಿ ಸ್ಪಂದಿಸಿ ಸೂಕ್ತ ಮಾರ್ಗದರ್ಶನ, ಸಹಕಾರ ನೀಡುತ್ತಿರುವುದರಿಂದ ಈ ಭಾಗದಲ್ಲಿ ರೇಷ್ಮೆ ಕೃಷಿಗೆ ಒಳ್ಳೆಯ ಉತ್ತೇಜನ ದೊರೆಯುತ್ತಿದೆ’ ಎನ್ನುತ್ತಾರೆ ವಿಜಯಪುರ ರೇಷ್ಮೆ ರೈತ ಉತ್ಪಾದಕರ ಕಂಪನಿಯ ಅಧ್ಯಕ್ಷ ಶಂಕರಗೌಡ ಪಾಟೀಲ್ ಮನಗೂಳಿ.
ರೇಷ್ಮೆ ಕೃಷಿಗೆ ಸರ್ಕಾರ ಹಾಗೂ ಇಲಾಖೆಯಿಂದ ಸಾಕಷ್ಟು ಸೌಲಭ್ಯಗಳಿದ್ದು, ರೈತರು ರೇಷ್ಮೆ ಬೆಳೆದು ನಿರಂತರ ಆದಾಯ ಪಡೆಯಬಹುದು. ರೇಷ್ಮೆ ಬೆಳೆಯಲು ರೈತರ ಆಸಕ್ತಿ ಮತ್ತು ತಾಲ್ಲೂಕಿನಲ್ಲಿ ರೇಷ್ಮೆ ಪ್ರಗತಿ ಖುಷಿ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.