ADVERTISEMENT

‘ತ್ರಿಕೋನ’ ಸ್ಪರ್ಧೆಗೆ ವೇದಿಕೆಯಾದ ಸಿಂದಗಿ ಉಪ ಚುನಾವಣೆ

ಉಪ ಚುನಾವಣಾ ಅಖಾಡಕ್ಕೆ ಇಳಿದ ದಿಗ್ಗಜರು; ರಂಗೇರಿದ ಕಣ

ಬಸವರಾಜ ಸಂಪಳ್ಳಿ
Published 4 ಅಕ್ಟೋಬರ್ 2021, 20:30 IST
Last Updated 4 ಅಕ್ಟೋಬರ್ 2021, 20:30 IST
   

ವಿಜಯಪುರ: ಚುನಾವಣಾ ದಿನಾಂಕ ಘೋಷಣೆ ಪೂರ್ವದಲ್ಲಿ ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರಾನೇರ ಪೈಪೋಟಿ ಏರ್ಪಡಲಿದೆ. ಜೆಡಿಎಸ್‌ ಲೆಕ್ಕಕ್ಕಿಲ್ಲ ಎಂಬ ವಾತಾವರಣ ಇತ್ತು. ಆದರೆ, ಇದೀಗ ಜೆಡಿಎಸ್‌ ಉರುಳಿಸಿರುವ ದಾಳವು ತ್ರಿಕೋನ ಸ್ಪರ್ಧೆಯನ್ನು ಜೀವಂತವಾಗಿಸಿದೆ.

ಮನಗೂಳಿ ಕುಟುಂಬ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗುತ್ತಿರುವಂತೆ ಇನ್ನೇನು ಕ್ಷೇತ್ರದಲ್ಲಿ ಜೆಡಿಎಸ್‌ ಕಥೆ ಮುಗಿಯಿತು ಎಂದೇ ಭಾವಿಸಲಾಗಿತ್ತು. ಆದರೆ, ಜೆಡಿಎಸ್‌ ವರಿಷ್ಠರು ಅಲ್ಪಸಂಖ್ಯಾತ ಸಮುದಾಯದ ಮಹಿಳೆಯನ್ನು ಕಣಕ್ಕಿಳಿಸಿ, ಕಾಂಗ್ರೆಸ್‌ನ ಸಾಂಪ್ರದಾಯಿಕ ವೋಟಿಗೆ ಕೈಹಾಕುವ ಮೂಲಕ ಕಣವನ್ನು ರೋಚಕಗೊಳಿಸಿದೆ. ಇದರ ಲಾಭ ಬಿಜೆಪಿಗೆ ಆಗುವ ಸಾಧ್ಯತೆ ಆರಂಭಿಕ ಹಂತದಲ್ಲೇ ತೋರುತ್ತಿದೆ.

ಈಗಾಗಲೇ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಅಶೋಕ ಮನಗೂಳಿ, ಜೆಡಿಎಸ್‌ ಅಭ್ಯರ್ಥಿಯಾಗಿ ನಾಜಿಯಾ ಅಂಗಡಿ ಕಣಕ್ಕಿಳಿದಿದ್ದಾರೆ. ರಮೇಶ ಭೂಸನೂರು ಬಿಜೆಪಿ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದ್ದು, ತ್ರೀಕೋನ ಸ್ಪರ್ಧೆ ಸ್ಪಷ್ಟವಾಗಿದೆ. ಅಷ್ಟೇ ಅಲ್ಲ, ಯಾರ ಗೆಲುವೂ ಸುಲಭವಲ್ಲ ಎಂಬುದು ಖಾತ್ರಿಯಾಗಿದೆ.

ADVERTISEMENT

ನಾಮಪತ್ರ ಸಲ್ಲಿಕೆಗೂ ಮುನ್ನವೇ ಸಿಂದಗಿ ಉಪ ಚುನಾವಣಾ ಅಖಾಡಕ್ಕೆ ಕಾಂಗ್ರೆಸ್‌ ಮತ್ತು ಬಿಜೆಪಿ ದಿಗ್ಗಜರು ಇಳಿದಿದ್ದು, ಚುನಾವಣಾ ಕಣ ರಂಗೇರಿದೆ. ಆರೋಪ, ಪ್ರತ್ಯಾರೋಪಗಳ ವಾಗ್ಬಣ ಸಿಡಿಯತೊಡಗಿವೆ. ಪ್ರಚಾರದ ವೇಳೆ ವಾಗ್ಬಾಣಗಳು ತಾರಕಕ್ಕೆ ಏರುವುದು ಖಚಿತವಾಗಿದೆ. ಮೂರು ಪಕ್ಷಗಳು ಮತ್ತು ಅಭ್ಯರ್ಥಿಗಳ ಬಲಾಬಲ ಅವಲೋಕಿಸಿದರೆ ಚುನಾವಣೆ ಹೆಚ್ಚು ಪೈಪೋಟಿಯಿಂದ ಕೂಡಿರಲಿದೆ ಎಂಬ ರಾಜಕೀಯ ಲೆಕ್ಕಾಚಾರ ನಡೆದಿದೆ.

ಕಾಂಗ್ರೆಸ್‌: ಕಾಂಗ್ರೆಸ್‌ ಅಭ್ಯರ್ಥಿ ಅಶೋಕ ಮನಗೂಳಿ ಅವರ ತಂದೆ ಎಂ.ಸಿ.ಮನಗೂಳಿ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳು ಕೈಹಿಡಿಯುವ ಸಾಧ್ಯತೆ ಇದೆ. ಜೊತೆಗೆ ಎಂ.ಸಿ.ಮನಗೂಳಿ ಅಕಾಲಿಕ ಸಾವಿನ ಅನುಕಂಪವೂ ಅಲ್ಪ ಮಟ್ಟಿಗೆ ನೆರವಿಗೆ ಬರಬಹುದು. ಅಲ್ಲದೇ, ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಪಂಚಮಸಾಲಿ ಸಮಾಜದ ಮತದಾರರು ಇರುವುದರಿಂದ ಗೆಲುವಿಗೆ ನೆರವಾಗಬಹುದು. ಆದರೆ, ಕಾಂಗ್ರೆಸ್ ಅಭ್ಯರ್ಥಿಯಒರಟು ನಡೆ ಮತ್ತು ವ್ಯಕ್ತಿತ್ವ ಅವರ ಹಿನ್ನೆಡೆಗೂ ಕಾರಣವಾಗುವ ಸಾಧ್ಯತೆ ಇದೆ. ಜೊತೆಗೆ ಕಾಂಗ್ರೆಸ್‌ ಟಿಕೆಟ್‌ ವಂಚಿತರು ಮೇಲ್ನೋಟಕ್ಕೆ ಒಗ್ಗಟ್ಟು ಪ್ರದರ್ಶಿಸಿದರೂ ಕೈಕೊಡುವ ಸಾಧ್ಯತೆ ದಟ್ಟವಾಗಿದೆ.

ಬಿಜೆಪಿ: ಬಿಜೆಪಿಯ ಸಾಂಭವ್ಯ ಅಭ್ಯರ್ಥಿ ರಮೇಶ ಭೂಸನೂರ ಅವರು ಎಲ್ಲ ಸಮುದಾಯದೊಂದಿಗೆ ಹೊಂದಿಕೊಂಡು ಹೋಗುವ ಗುಣ ಇರುವುದೇ ಅವರಿಗೆ ಬಲವಾಗಿದೆ. ಜೊತೆಗೆ ಗಾಣಿಗ ಸಮಾಜವೂ ಕ್ಷೇತ್ರದಲ್ಲಿ ಪ್ರಬಲವಾಗಿರುವುದು ಅನುಕೂಲಕರವಾಗಿದೆ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿಯೇ ಅಧಿಕಾರದಲ್ಲಿ ಇರುವುದರಿಂದ ರಮೇಶ ಅವರನ್ನು ಗೆಲ್ಲಿಸಿದರೆ ಕ್ಷೇತ್ರಕ್ಕೆ ಒಂದಷ್ಟು ಒಳಿತಾಗುವ ಸಾಧ್ಯತೆ ಇದೆ. ಉಳಿದಿರುವ ಅತ್ಯಲ್ಪ ಅವಧಿಗೆ ಆಡಳಿತ ಪಕ್ಷವನ್ನು ಗೆಲ್ಲಿಸಿದರೆ ಅನುಕೂಲ ಹೆಚ್ಚು ಎಂಬ ಭಾವನೆ ಜನರಲ್ಲಿ ಮೂಡಿದರೆ ಗೆಲುವು ಸಲಭವಾಗಲಿದೆ. ಆದರೆ, ಬೆಲೆ ಏರಿಕೆ, ಬಿಜೆಪಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಬಗ್ಗೆ ಇರುವ ಜನ ವಿರೋಧಿ ಅಲೆ ಬಿಜೆಪಿ ಅಭ್ಯರ್ಥಿಗೆ ಏಟು ನೀಡುವ ಸಾಧ್ಯತೆ ಇದೆ.

ಜೆಡಿಎಸ್‌: ಜೆಡಿಎಸ್‌ ಅಭ್ಯರ್ಥಿ ನಾಜಿಯಾ ಅಂಗಡಿ ಅವರಿಗೆ ರಾಜಕೀಯ ಹೊಸದು. ಅವರ ಮಾವ ರಾಜಕೀಯದಲ್ಲಿ ಇದ್ದರು ಎಂಬುದನ್ನು ಬಿಟ್ಟರೆ ಇವರಿಗೆ ಯಾವುದೇ ರಾಜಕೀಯ ಒಡನಾಟ ಇಲ್ಲ. ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಜೆಡಿಎಸ್‌ ಮೂಲ ಮತದಾರರು ಹಾಗೂ ಅಲ್ಪಸಂಖ್ಯಾತ ಮತದಾರರು ಕೈಹಿಡಿಯವ ಸಾಧ್ಯತೆ ಇದೆ. ಆದರೆ, ಜೆಡಿಎಸ್‌ ಪಕ್ಷ ಅಭ್ಯರ್ಥಿ ಹಾಕಿರುವುದೇ ಕಾಂಗ್ರೆಸ್‌ ಸೋಲಿಸಲು, ಬಿಜೆಪಿ ಜೊತೆ ಒಳಒಪ್ಪಂದ ಮಾಡಿಕೊಂಡಿದೆ ಎಂಬ ಭಾವನ ಜನರಲ್ಲಿ ಖಚಿತವಾದರೆ ಹಿನ್ನೆಡೆ ನಿಶ್ಚಿತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.