ADVERTISEMENT

ಸಿಂದಗಿ ತಾಲ್ಲೂಕು ಸರ್ಕಾರಿ ನೌಕರರ ಸಂಘ: ಚುನಾವಣೆಗೆ ಮೊದಲೇ ‘ಸಂಧಾನ’ದ ಮೊರೆ

ಶಾಂತೂ ಹಿರೇಮಠ
Published 14 ನವೆಂಬರ್ 2024, 5:37 IST
Last Updated 14 ನವೆಂಬರ್ 2024, 5:37 IST
ಸಿಂದಗಿ ಪಟ್ಟಣದ ಶಾಸಕ ಅಶೋಕ ಮನಗೂಳಿಯವರ ಮನೆಯಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸ್ಥಾನದ ಚುನಾವಣೆಯ ಸಂಧಾನ ಸಭೆ ನಡೆಯಿತು. ಅಭ್ಯರ್ಥಿಗಳಾದ ಅಶೋಕ ತೆಲ್ಲೂರ, ಗಿರಿಧರ ಗತಾಟೆ ಜೊತೆಗಿದ್ದರು
ಸಿಂದಗಿ ಪಟ್ಟಣದ ಶಾಸಕ ಅಶೋಕ ಮನಗೂಳಿಯವರ ಮನೆಯಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸ್ಥಾನದ ಚುನಾವಣೆಯ ಸಂಧಾನ ಸಭೆ ನಡೆಯಿತು. ಅಭ್ಯರ್ಥಿಗಳಾದ ಅಶೋಕ ತೆಲ್ಲೂರ, ಗಿರಿಧರ ಗತಾಟೆ ಜೊತೆಗಿದ್ದರು   

ಸಿಂದಗಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲ್ಲೂಕು ಶಾಖೆಯ ಅಧ್ಯಕ್ಷ ಸ್ಥಾನಕ್ಕೆ 2024 -2029 ನೇ ಸಾಲಿಗಾಗಿ ನ.16 ರಂದು ಚುನಾವಣೆ ನಡೆಯಲಿದೆ. ಈ ಹಿಂದಿನ ಐದು ವರ್ಷಗಳ ಅವಧಿಗೆ ಅಧ್ಯಕ್ಷರಾಗಿದ್ದ ಅಶೋಕ ತೆಲ್ಲೂರ ಪುನಃ ಅಧ್ಯಕ್ಷರಾಗಿ ಮುಂದುವರಿಯುವ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿದ್ದರಿಂದ ಈ ಚುನಾವಣೆ ನಿರ್ಧಾರ ರಾಜಕೀಯ ಅಂಗಳಕ್ಕೆ ಹೋಗಿದೆ.

ಅಧ್ಯಕ್ಷ ಸ್ಥಾನಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನೌಕರ ಅಶೋಕ ತೆಲ್ಲೂರ ಮತ್ತು ಶಿಕ್ಷಣ ಇಲಾಖೆಯ ಶಿಕ್ಷಕ ಗಿರಿಧರ ಗತಾಟೆ ಇಬ್ಬರೇ ನಾಮಪತ್ರ ಸಲ್ಲಿಸಿದ್ದಾರೆ. ತೆಲ್ಲೂರ ಅವರಿಗೆ ರಾಜಕೀಯ ಬಲವಿದ್ದರೆ ಗತಾಟೆಯವರಿಗೆ ಸಂಘದ ನಿರ್ದೇಶಕರ ಬಲವಿದೆ ಎನ್ನಲಾಗುತ್ತಿದೆ.

ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದರೆ ಗತಾಟೆ ಗೆಲ್ಲುತ್ತಾರೆ ಎಂದು ಸಂಘದ ಹಲವಾರು ನಿರ್ದೇಶಕರು ಅಭಿಪ್ರಾಯ ಮುಂದಿಟ್ಟಿದ್ದಾರೆ ಎಂದು ನಿರ್ದೇಶಕರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಹೀಗಾಗಿ ಚುನಾವಣೆ ನಡೆಯದೇ ಸಂಧಾನ ಮೂಲಕ ಇತ್ಯರ್ಥಗೊಳಿಸಲು ಮತಕ್ಷೇತ್ರ ಶಾಸಕ ಅಶೋಕ ಮನಗೂಳಿಯವರ ಮನೆಯಲ್ಲಿ ಮಂಗಳವಾರ ತಡರಾತ್ರಿಯವರೆಗೆ ಸಭೆ ನಡೆದು, ‘ಮೊದಲ ಅವಧಿಯಲ್ಲಿ ತೆಲ್ಲೂರ ಅಧ್ಯಕ್ಷರಾಗಲಿ ನಂತರದ ಎರಡನೆಯ ಅವಧಿಗೆ ಮೂರು ವರ್ಷ ಗತಾಟೆ ಅಧ್ಯಕ್ಷರಾಗಲಿ’ ಎಂಬ ಶಾಸಕರ ಸೂಚನೆಗೆ ಇಬ್ಬರೂ ಒಪ್ಪಿಕೊಂಡಿದ್ದಾಗಿ ತೆಲ್ಲೂರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ADVERTISEMENT

ಒಟ್ಟು 21 ನಿರ್ದೇಶಕ ಸ್ಥಾನಗಳಲ್ಲಿ 16 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, ಶಿಕ್ಷಣ ಇಲಾಖೆಯ 4 ಸ್ಥಾನಗಳು ಮತ್ತು ಭೂಮಾಪನಾ ಇಲಾಖೆ ಒಂದು ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆದಿತ್ತು.

ಖಜಾಂಚಿ ಸ್ಥಾನಕ್ಕೆ ಇಮ್ರಾನ್ ಮಕಾಂದಾರ ಮತ್ತು ಗಂಗಪ್ಪ ತಾವರಖೇಡ ಸ್ಥರ್ಧೆಯಲ್ಲಿದ್ದರು. ಇಮ್ರಾನ್ ಮಕಾಂದಾರ ಅವರಿಗೆ ಸ್ಥಾನ ಬಿಟ್ಟು ಕೊಡಲು ಶಾಸಕರ ಸೂಚನೆಯಂತೆ ತಾವರಖೇಡ ಕಣದಿಂದ ಹಿಂದಕ್ಕೆ ಸರಿದಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ರಾಜ್ಯಪರಿಷತ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಶಿಕ್ಷಣ ಇಲಾಖೆಯ ಭೀಮನಗೌಡ ಬಿರಾದಾರ ಮತ್ತು ಚಂದ್ರಾಮ ಗಡಗಿ ಈ ಸ್ಥಾನಗಳ ಬಗ್ಗೆ ಇನ್ನೂ ಇತ್ಯರ್ಥಗೊಂಡಿಲ್ಲ. ಈ ಕುರಿತು ಮನವೊಲಿಕೆ ಮುಂದುವರಿದಿದೆ ಎಂದು ಹೇಳಲಾಗುತ್ತಿದೆ ಎಂದಿದ್ದಾರೆ.

ಪ್ರಸ್ತುತ ಅಧ್ಯಕ್ಷ ಚುನಾವಣೆಯಲ್ಲಿ ರಾಜಕೀಯ ಲಾಬಿ ಮತ್ತು ಜಾತಿಯ ಲಾಬಿ ವಿಜೃಂಭಿಸಿವೆ ಎಂದು ಕೆಲವು ನಿರ್ದೇಶಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಂದಿನ ಎರಡೂವರೆ ವರ್ಷದ ಅವಧಿ ಅಧ್ಯಕ್ಷ ಸ್ಥಾನ ಮತ್ತೆ ನನಗೆ ವಹಿಸಿಕೊಳ್ಳುವಂತೆ ಶಾಸಕರ ಸಮ್ಮುಖದಲ್ಲಿ ನಿರ್ಧಾರವಾಗಿದೆ.
–ಅಶೋಕ ತೆಲ್ಲೂರ ನಿಕಟಪೂರ್ವ ಅಧ್ಯಕ್ಷ ಸರ್ಕಾರಿ ನೌಕರರ ಸಂಘ ತಾಲ್ಲೂಕು ಶಾಖೆ ಸಿಂದಗಿ
ಶಾಸಕರ ಮಾತಿಗೆ ಬೆಲೆಕೊಟ್ಟು ಅಧಿಕಾರ ಹಂಚಿಕೆಗೆ ಒಪ್ಪಿಕೊಂಡಿದ್ದು ಎರಡನೆಯ ಅವಧಿ ಮೂರು ವರ್ಷ ಅಧ್ಯಕ್ಷ ಸ್ಥಾನ ಬಿಟ್ಟು ಕೊಡುವ ಸಂಧಾನವಾಗಿದೆ.
–ಗಿರಿಧರ ಗತಾಟೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.