ADVERTISEMENT

ಮುಳುಗಿದ ಕಡಣಿ ಬ್ಯಾರೇಜ್‌; ಸಂಪರ್ಕ ಕಡಿತ, ಬ್ಯಾರೇಜ್‌ ಎತ್ತರ ಹೆಚ್ಚಳ?

ಮೂರ್ನಾಲ್ಕು ವರ್ಷದಿಂದ ಬಿಗಡಾಯಿಸುತ್ತಿರುವ ಸಮಸ್ಯೆ; ಬ್ಯಾರೇಜ್‌ ಎತ್ತರ ಹೆಚ್ಚಳ ಆಗ್ರಹಕ್ಕೆ ಸಿಗದ ಸ್ಪಂದನೆ

ಡಾ.ರಮೇಶ ಎಸ್.ಕತ್ತಿ
Published 14 ಅಕ್ಟೋಬರ್ 2018, 19:46 IST
Last Updated 14 ಅಕ್ಟೋಬರ್ 2018, 19:46 IST
ಮುಳುಗಡೆಯಾಗಿರುವ ಕಡಣಿ ಬ್ಯಾರೇಜ್‌ ಕಂ ಸೇತುವೆ
ಮುಳುಗಡೆಯಾಗಿರುವ ಕಡಣಿ ಬ್ಯಾರೇಜ್‌ ಕಂ ಸೇತುವೆ   

ಆಲಮೇಲ: ದೇವಣಗಾಂವ ಬಳಿ ಭೀಮಾ ನದಿಗೆ ಬ್ಯಾರೇಜ್ ನಿರ್ಮಿಸಿದ ಬಳಿಕ; ಕಡಣಿ ಬಳಿಯ ಬ್ಯಾರೇಜ್‌ ಪ್ರತಿ ವರ್ಷವೂ ಹಿನ್ನೀರಿನಲ್ಲಿ ಮುಳುಗುತ್ತಿದ್ದು, ನೆರೆಯ ಕಲಬುರ್ಗಿ, ಮಹಾರಾಷ್ಟ್ರದ ಸೊಲ್ಲಾಪುರ, ಅಕ್ಕಲಕೋಟೆ ಪಟ್ಟಣದ ಸಂಪರ್ಕ ಕಡಿತಗೊಂಡಿದೆ.

ಕಡಣಿ, ತಾವರಖೇಡ, ತಾರಾಪುರ ಸೇರಿದಂತೆ ಸುತ್ತಮುತ್ತಲಿನ 10ಕ್ಕೂ ಹೆಚ್ಚು ಗ್ರಾಮಗಳ ಜನ ದೇವಣಗಾಂವ ಬಳಿ ಬ್ಯಾರೇಜ್‌ ನಿರ್ಮಾಣಕ್ಕೂ ಮುನ್ನ, ಕಡಣಿ ಬ್ಯಾರೇಜ್‌ ಕಂ ಸೇತುವೆ ಮೂಲಕ ನೇರವಾಗಿ ಕರಜಗಿ ತಲುಪಿ, ಅಲ್ಲಿಂದ ಅಕ್ಕಲಕೋಟೆ, ಕಲಬುರ್ಗಿಗೆ ಪಯಣಿಸುತ್ತಿದ್ದರು.

ಮೂರ್ನಾಲ್ಕು ವರ್ಷದ ಹಿಂದಿನಿಂದ ದೇವಣಗಾಂವ ಬ್ಯಾರೇಜ್‌ನಲ್ಲಿ ನೀರು ನಿಲ್ಲಿಸಲು ಆರಂಭಿಸಿದ್ದಾರೆ. ಈ ಹಿನ್ನೀರಿನಲ್ಲಿ ಕಡಣಿ ಬ್ಯಾರೇಜ್‌ ಮುಳುಗುವುದರಿಂದ, ಹಲ ಗ್ರಾಮಗಳ ಜನರು ಇದೀಗ ಅನಿವಾರ್ಯವಾಗಿ ಅಫಜಲಪುರಕ್ಕೆ ತೆರಳಿ, ಅಲ್ಲಿಂದ ಕರಜಗಿ ಮೂಲಕ ವಿವಿಧೆಡೆ ಹೋಗಬೇಕಿದೆ. ಕನಿಷ್ಠ 40ರಿಂದ 50 ಕಿ.ಮೀ. ಹೆಚ್ಚಿಗೆ ಪಯಣಿಸಬೇಕಿದೆ.

ADVERTISEMENT

ಈ ಸಮಸ್ಯೆ ಶಾಶ್ವತವಲ್ಲ. ದೇವಣಗಾಂವ ಬ್ಯಾರೇಜ್‌ನಲ್ಲಿ ನೀರು ಇಳಿಮುಖಗೊಂಡಂತೆ ಕಡಣಿ ಬ್ಯಾರೇಜ್‌ ಸಂಚಾರಕ್ಕೆ ಮುಕ್ತವಾಗಲಿದೆ. ನೀರು ತುಂಬಿದ ಕೆಲ ತಿಂಗಳು ಸುತ್ತಿನ ಸಂಚಾರ ಅನಿವಾರ್ಯವಾಗಿದೆ. ಕಡಣಿ ಬ್ಯಾರೇಜ್‌ ಎತ್ತರವನ್ನು ಹೆಚ್ಚಿಸಬೇಕು ಎಂದು ಈ ಭಾಗದ ಜನರು ಹಲ ಬಾರಿ ಮನವಿ ಸಲ್ಲಿಸಿದರೂ; ಸೂಕ್ತ ಸ್ಪಂದನೆ ಸಿಕ್ಕಿಲ್ಲ ಎಂಬ ದೂರು ಹಲ ಗ್ರಾಮಗಳ ಗ್ರಾಮಸ್ಥರದ್ದಾಗಿದೆ.

1970ರ ಆಸುಪಾಸು ಕಡಣಿ ಬ್ಯಾರೇಜ್‌ ನಿರ್ಮಾಣಗೊಂಡಿತ್ತು. ಈ ಭಾಗದ ಜಮೀನುಗಳಿಗೆ ಇಲ್ಲಿಂದಲೇ ನೀರು ಹರಿಸಲಾಗುತ್ತಿತ್ತು. ಈ ಸೇತುವೆ ಸಮೀಪವೇ ಗಡ್ಡಿಲಿಂಗ ದೇವಸ್ಥಾನ ನಿರ್ಮಿಸಲಾಗಿತ್ತು. ಇದೀಗ ಎಲ್ಲವೂ ನೆನಪು. ಹಿನ್ನೀರಿನಲ್ಲಿ ಸಂಪೂರ್ಣ ಮುಳುಗಿವೆ.

ಅಫಜಲಪುರ ಮೂಲಕ ಕರಜಗಿಗೆ ಹೋಗಲು ಇದೀಗ ದೇವಣಗಾಂವ ಸೇತುವೆ ಬಳಸಲಾಗುತ್ತಿದೆ. ಅದೂ ಕೂಡಾ ಶಿಥಿಲಾವಸ್ಥೆಯಲ್ಲಿದ್ದರೂ; ದುರಸ್ತಿ ಕೆಲಸ ನಡೆದಿಲ್ಲ. ಸುತ್ತು ಬಳಸುವ ಸಂಚಾರಕ್ಕಿಂತ ಕಡಣಿ ಮಾರ್ಗವೇ ನಮಗೆ ಸೂಕ್ತ. ಕಡಣಿ ಬ್ಯಾರೇಜ್‌ಗೆ ಕಾಯಕಲ್ಪ ಕಲ್ಪಿಸಿ ಎಂಬ ಬೇಡಿಕೆ ಸ್ಥಳೀಯರದ್ದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.