ತಾಳಿಕೋಟೆ: ನಗರ ಪ್ರದೇಶದ ಖಾಸಗಿ ಶಾಲೆಗಳಲ್ಲಿ ಹೆಚ್ಚಾಗಿ ಕಾಣಸಿಗುವ ಸ್ಮಾರ್ಟ್ ಬೋರ್ಡ್‌ಗಳು ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲೂ ಕಾಣುವ ಸೌಭಾಗ್ಯ ಭಾರತ ಸರ್ಕಾರದ ‘ನವರತ್ನ’ಗಳಲ್ಲಿ ಒಂದಾದ ದಿ ಶಿಪ್ಪಿಂಗ್ ಕಾರ್ಪೊರೇಶನ್ ಆಫ್ ಇಂಡಿಯಾದ ಮೂಲಕ ಒದಗಿ ಬಂದಿದೆ.
ಶಿಪ್ಪಿಂಗ್ ಕಾರ್ಪೊರೇಶನ್ ಆಫ್ ಇಂಡಿಯಾಕ್ಕೆ ಸ್ವತಂತ್ರ ನಿರ್ದೇಶಕರಾಗಿ ರಾಜ್ಯದಿಂದ ನೇಮಕವಾಗಿರುವ ತಾಳಿಕೋಟೆ ತಾಲ್ಲೂಕಿನ ಬ.ಸಾಲವಾಡಗಿ ಗ್ರಾಮದ ಶ್ರೀಕಾಂತ ಪತ್ತಾರ ಅವರ ವಿಶೇಷ ಕಾಳಜಿಯಿಂದ ಕಾರ್ಪೊರೇಷನ್‌ನಲ್ಲಿ ಲಭ್ಯವಿರುವ ಸಿ.ಎಸ್.ಆರ್. ನಿಧಿಯಿಂದ ಜಿಲ್ಲೆಯ ಗ್ರಾಮೀಣ ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ್ ಬೋರ್ಡ್ ಭಾಗ್ಯ ಲಭಿಸಿದೆ.
₹50.18 ಲಕ್ಷ ವೆಚ್ಚದಲ್ಲಿ 20 ಸ್ಮಾರ್ಟ್ ಬೋರ್ಡ್‌ಗಳೀಗ ವಿಜಯಪುರ ಜಿಲ್ಲೆ ಮತ್ತು ಯಾದಗಿರಿ ಜಿಲ್ಲೆ ಪ್ರೌಢಶಾಲೆಗಳಲ್ಲಿ ಜೋಡಣೆಯಾಗಿದ್ದು, ಸೆ.15ರಂದು ಬಳಕೆಗೆ ಮುಕ್ತವಾಗಲಿವೆ.
‘ಸರ್ಕಾರಿ ಗ್ರಾಮೀಣ ಪ್ರೌಢಶಾಲೆಗಳಿಗೆ ಮೂಲಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸ್ಮಾರ್ಟ್ ಬೋರ್ಡ್ ಅಳವಡಿಸಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರಿಗೆ ತರಬೇತಿ ನೀಡಿದ ಶಿಪ್ಪಿಂಗ್ ಕಾರ್ಪೊರೇಷನ್ ಸಂಸ್ಥೆಯ ಅಧ್ಯಕ್ಷರು, ಎಲ್ಲ ನಿರ್ದೇಶಕರುಗಳಿಗೆ ನಾವು ಕೃತಜ್ಞರಾಗಿದ್ದೇವೆ’ ಎಂದು ಪೀರಾಪುರ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಆರ್.ಬಿ.ದಮ್ಮೂರಮಠ ತಿಳಿಸಿದರು.
‘ಆಧುನಿಕ ತಂತ್ರಜ್ಞಾನದ ಸ್ಮಾರ್ಟ್ ಕ್ಲಾಸ್‌ನಿಂದ ಗುಣಮಟ್ಟದ ಶಿಕ್ಷಣ ದೊರೆತು ಭವಿಷ್ಯದ ಭಾರತ ನಿರ್ಮಾಣದಲ್ಲಿ ಗ್ರಾಮೀಣ ಸರ್ಕಾರಿ ಶಾಲಾ ಮಕ್ಕಳ ಸಹಭಾಗಿತ್ವಕ್ಕೆ ಸಹಕಾರಿಯಾಗಲಿದೆ’ ಎಂದು ಲಿಂಗದಳ್ಳಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಅಪ್ಪಾಸಾಹೇಬಗೌಡ ಮೂಲಿಮನಿ ಹೇಳಿದರು.
ಶಿಕ್ಷಕರು ಸ್ಮಾರ್ಟ್ ಬೋರ್ಡ್ ಬಳಸಿ ಸಮರ್ಥವಾಗಿ ಕಲಿಸುವ ಮೂಲಕ ಮಕ್ಕಳು ಶೈಕ್ಷಣಿಕ ಪ್ರಗತಿ ಸಾಧಿಸಿದರೆ ನನ್ನ ಕನಸು ನನಸಾದಂತೆ- ಶ್ರೀಕಾಂತ ಪತ್ತಾರ, ಸ್ವತಂತ್ರ ನಿರ್ದೇಶಕರು ದಿ.ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.