ಬಸವನಬಾಗೇವಾಡಿ: ಕಿರಾಣಿ ಅಂಗಡಿ ಸುತ್ತ ಕಸ ಕಡ್ಡಿಯಲ್ಲಿ ಆಗಾಗ್ಗೆ ಕಾಣಿಸುತಿದ್ದ ಹಾವುಗಳನ್ನು ಹಿಡಿದು ದೂರದ ನಿರ್ಜನ ಪ್ರದೇಶದಲ್ಲಿ ಬಿಟ್ಟು ಬರುತಿದ್ದ ಅಂಗಡಿ ಮಾಲೀಕರ ಹಾವುಗಳ ಬಗೆಗಿನ ಕಾಳಜಿಯನ್ನು ಬಾಲ್ಯದಲ್ಲಿಯೇ ಕಂಡಿದ್ದ ಪಟ್ಟಣದ ಸಂಗನಗೌಡ ಮ್ಯಾಗೇರಿ ಅವರು ಹಾವುಗಳ ರಕ್ಷಣೆ ಮಾಡುವುದನ್ನು ಹವ್ಯಾಸವಾಗಿಸಿಕೊಂಡಿದ್ದಾರೆ.
ಕಿರಾಣಿ ಅಂಗಡಿ ಮಾಲೀಕರು ಕಟ್ಟಿಗೆ ತುಂಡಿನ ಸಹಾದಿಂದ ಕಣ್ಣಿಗೆ ಬಿದ್ದ ಹಾವನ್ನು ಪ್ಲಾಸ್ಟಿಕ್ ಡಬ್ಬಿಗೆ ಹಾಕಿ ಊರ ಹೊರಗಡೆಯ ನಿರ್ಜನ ಪ್ರದೇಶದಲ್ಲಿ ಬಿಟ್ಟು ಬರುತಿದ್ದರು. ಮಾಲೀಕ ಶಿವಶಂಕರ ಬೆವನೂರ ಅವರಿಗೆ ಹಾವುಗಳ ಬಗ್ಗೆ ಇದ್ದ ಕಾಳಜಿಯ ಪ್ರೇರಣೆಯಿಂದ ಸಂಗನಗೌಡ ಅವರು ಹಾವುಗಳ ರಕ್ಷಣೆಗೆ ಮುಂದಾಗಿದ್ದಾರೆ.
ವೃತ್ತಿಯಲ್ಲಿ ಆಟೋ ಚಾಲಕರಾಗಿರುವ ಸಂಗನಗೌಡರು ಪಟ್ಟಣ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳ ಮನೆಯಲ್ಲಿ ಮನೆ ಅಂಗಳದಲ್ಲಿ, ಮನೆ ಸುತ್ತ ಮುತ್ತ, ಶಾಲೆ ಆವರಣ ಸೇರಿದಂತೆ ವಿವಿಧೆಡೆ ಹಾವು ಪ್ರತ್ಯಕ್ಷವಾಗಿರುವ ಸುದ್ಧಿ ತಿಳಿಯುತ್ತಿದಂತೆ ತಮ್ಮ ಆಟೋದೊಂದಿಗೆ ಸ್ಥಳಕ್ಕೆ ತೆರಳಿ ಹಾವನ್ನು ಹಿಡಿದು ಅದನ್ನು ನಿರ್ಜಿನ ಪ್ರದೇಶಕ್ಕೆ ಬಿಟ್ಟು ಬರುತ್ತಾರೆ.
ಕಳೆದ ಐದು ವರ್ಷದಿಂದ ಹಾವು ಹಿಡಿದು ಅವುಗಳನ್ನು ರಕ್ಷಿಸುವ ಪ್ರವೃತ್ತಿ ಬೆಳೆಸಿಕೊಂಡಿರುವ ಸಂಗನಗೌಡ ಮ್ಯಾಗೇರಿ ಅವರು ಇದುವರೆಗೂ ವಿವಿಧ ಜಾತಿಯ ಸಾವಿರಕ್ಕೂ ಹೆಚ್ಚು ಹಾವುಗಳನ್ನು ರಕ್ಷಿಸಿದ್ದಾರೆ.
ಹಾವುಗಳ ರಕ್ಷಣೆಗೆ ತೆರಳಿದಾಗ ಅವುಗಳ ರಕ್ಷಣೆ ಮಾಡುವುದರೊಂದಿಗೆ ಹಾವು ಕಾಣಿಸಿಕೊಂಡಾಗ ಅದನ್ನು ಹೊಡೆಯಬೇಡಿ ಅವುಗಳು ನಮಗೆ ಹೆದರಿ ತಮ್ಮನ್ನು ರಕ್ಷಿಸಿಕೊಳ್ಳಲು ಚಡಪಡಿಸುತ್ತವೆ. ಅವುಗಳ ರಕ್ಷಣೆ ಮಾಡುವುದು ಹೇಗೆ ಎಂಬುದರ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಜಾಗೃತಿ ಮೂಡಿಸುವ ಕಾರ್ಯ ಮಾಡುತಿದ್ದಾರೆ.
ನಾಗರಹಾವು, ಕೊಳಕಮಂಡಲ ಸೇರಿದಂತೆ ಕೆಲ ಹಾವುಗಳೂ ಮಾತ್ರ ವಿಷಜಂತುಗಳಾಗಿರುತ್ತವೆ. ಕೆರಿ ಹಾವು ಸೇರಿದಂತೆ ಇನ್ನುಳಿದ ಹಾವುಗಳು ವಿಷಕಾರಕವಲ್ಲ. ಯಾರಿಗಾದರೂ ಹಾವು ಕಚ್ಚಿದರೆ ತಕ್ಷಣ ವೈದ್ಯರ ಬಳಿ ತೆರಳಿ ಚಿಕಿತ್ಸೆ ಪಡೆಯಬೇಕು. ಮನೆಯಲ್ಲಿ, ಸುತ್ತ ಮುತ್ತ ಹಾವು ಕಂಡುಬಂದರೆ ಭಯ ಪಡದೆ ನಮಗೆ ಹಾಗೂ ನಮ್ಮಂತಹ ಉರಗ ರಕ್ಷಕರಿಗೆ ಕರೆಮಾಡಿ ಮಾಹಿತಿ ನೀಡಿದರೆ ಹಾವು ಇರುವ ಸ್ಥಳಕ್ಕೆ ಬಂದು ಅದನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಡಲಾಗುವುದು ಎಂಬುದನ್ನು ಜನರಿಗೆ ತಿಳಿಹೇಳುವ ಕೆಲಸ ಮಾಡುತ್ತಿದ್ದಾರೆ.
ಜನರು ಹಾವು ಕಂಡ ತಕ್ಷಣ ಭಯಪಡದೇ ಅವುಗಳನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬೀಡುವ ಕಲೆ ಕರಗತ ಮಾಡಿಕೊಂಡಿರುವ ಸಂಗನಗೌಡ ಸೇರಿದಂತೆ ಇತರರಿಗೆ ಮಾಹಿತಿ ನೀಡಿ ಹಾವುಗಳ ರಕ್ಷಣೆಗೆ ಜನರು ಮುಂದಾಗಬೇಕು ಎಂದು ಪವಿತ್ರಾ ಪೊಟೋ ಸ್ಟುಡಿಯೋ ಮಾಲೀಕ ಶಿವರುದ್ರಯ್ಯ ಹಿರೇಮಠ ಅಭಿಪ್ರಾಯ ಪಟ್ಟರು.
ಮೈಸೂರಿನ ಉರಗ ತಜ್ಞ ಕುಮಾರ ಅವರನ್ನು ಪಟ್ಟಣಕ್ಕೆ ಕರೆಯಿಸಿ ಹಾವುಗಳನ್ನು ಹಿಡಿಯುವ ವಿಧಾನ ಸೇರಿದಂತೆ ಅವುಗಳ ಸಂರಕ್ಷಣೆ ಕುರಿತು ಅವರಿಂದ ಹೆಚ್ಚಿನ ಮಾಹಿತಿ ತಿಳಿದುಕೊಂಡಿದ್ದಾರೆ. ಇನ್ನು ಕೆಲ ಉರಗ ತಜ್ಞರನ್ನು ಸಂಪರ್ಕಿಸಿ ಮಾಹಿತಿ ಕಲೆಹಾಕಿದ್ದಾರೆ. ಸಂಗನಗೌಡ ಮ್ಯಾಗೇರಿ ಅವರ ಮೊ.ಸಂ:9110885360.
ಸಂಗನಗೌಡ ಸೇರಿದಂತೆ ಪಟ್ಟಣದಲ್ಲಿ ಅಂಗಡಿ ಮಾಲೀಕರಾದ ಶಿವಶಂಕರ ಬೆವನೂರ ಹಾಗೂ ಸೋಯಲ್ ಮಂಟೂರ ಅವರು ಉರಗಗಳ ರಕ್ಷಣೆ ಮಾಡುತ್ತಿದ್ದಾರೆ. ಶಿವಶಂಕರ ಅವರ ಮೊ.ಸಂ: 9535887944
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.