ADVERTISEMENT

ತಿಕೋಟಾ: ಸೌರ ವಿದ್ಯುತ್‌ ಉತ್ಪಾದನೆ, ಬಿಜ್ಜರಗಿ ಸ್ವಾವಲಂಬನೆ

ಗ್ರಾಮ ಪಂಚಾಯ್ತಿ ಕಾರ್ಯಾಲಯದಲ್ಲಿ ಸೌರಶಕ್ತಿ ಬಳಕೆ

ಪರಮೇಶ್ವರ ಎಸ್.ಜಿ.
Published 2 ಜುಲೈ 2021, 19:30 IST
Last Updated 2 ಜುಲೈ 2021, 19:30 IST
ತಿಕೋಟಾ ತಾಲ್ಲೂಕಿನ ಬಿಜ್ಜರಗಿ ಗ್ರಾಮ ಪಂಚಾಯ್ತಿ ಕಟ್ಟಡದ ಮೇಲೆ ಸೌರ ಫಲಕ ಅಳವಡಿಸಿರುವುದು
ತಿಕೋಟಾ ತಾಲ್ಲೂಕಿನ ಬಿಜ್ಜರಗಿ ಗ್ರಾಮ ಪಂಚಾಯ್ತಿ ಕಟ್ಟಡದ ಮೇಲೆ ಸೌರ ಫಲಕ ಅಳವಡಿಸಿರುವುದು   

ತಿಕೋಟಾ: ತಾಲ್ಲೂಕಿನ ಬಿಜ್ಜರಗಿ ಗ್ರಾಮ ಪಂಚಾಯ್ತಿಯು ಸೌರ ವಿದ್ಯುತ್‌ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದೆ. ಪಂಚಾಯ್ತಿ ಆವರಣದಲ್ಲಿರುವ ಬೀದಿ ದೀಪ ಸೇರಿದಂತೆ ಕಚೇರಿ ಒಳಗೂ ಶೇ 100ರಷ್ಟು ಸೋಲಾರ್‌ ಬಳಕೆ ಮಾಡುವ ಮೂಲಕ ಇತರೆ ಗ್ರಾಮ ಪಂಚಾಯ್ತಿಗಳಿಗೆ ಮಾದರಿಯಾಗಿದೆ.

ಸೌರ ವಿದ್ಯುತ್‌ ಬಳಕೆಯಿಂದಾಗಿ ವಿದ್ಯುತ್ (ಹೆಸ್ಕಾಂ) ಬಳಕೆ ಕಡಿಮೆಯಾಗಿದೆ ಹಾಗೂ ಪ್ರತಿ ತಿಂಗಳು ಬರುತ್ತಿದ್ದ ವಿದ್ಯುತ್ ಶುಲ್ಕ ಸಂಪೂರ್ಣ ಕಡಿತವಾಗಿದೆ.

ಗ್ರಾಮ ಪಂಚಾಯ್ತಿ ಕಟ್ಟಡದ ಮೇಲೆ ಬೃಹತ್ ಗಾತ್ರದ 12 ಸೌರ ಫಲಕ ಅಳವಡಿಸಿ, ಇದರ ಮೂಲಕ ಉತ್ಪಾದನೆಯಾಗುವ ವಿದ್ಯುತ್‌ ಅನ್ನು ಬ್ಯಾಟರಿಗಳಲ್ಲಿ ಸಂಗ್ರಹಿಸಲಾಗುತ್ತಿದೆ.

ADVERTISEMENT

ಉತ್ಪಾದನೆಯಾದ ವಿದ್ಯುತ್ ಪಂಚಾಯ್ತಿಯಲ್ಲಿರುವ ಮೂರು ಕಂಪ್ಯೂಟರ್‌, ಎಲ್ಲ ಕೊಠಡಿಗಳ ಬಲ್ಬ್‌, ಫ್ಯಾನ್, ನೀರಿನ ಫಿಲ್ಟರ್, ಕಾಫಿ, ಟೀ ಮಷೀನ ಹಾಗೂ ಪಂಚಾಯ್ತಿ ಆವರಣದಲ್ಲಿರುವ ಕೊಳವೆಬಾವಿಯಿಂದ ನೀರೆತ್ತಲು ಸೌರಶಕ್ತಿಯನ್ನೇ ಬಳಸಿಕೊಳ್ಳಲಾಗಿದೆ. ದಿನದ 24 ಗಂಟೆಯೂ ಸೌರ ವಿದ್ಯುತ್ ಬಳಸಿಕೊಂಡು ಗ್ರಾಮ ಪಂಚಾಯ್ತಿಯ ಎಲ್ಲ ಕಾರ್ಯಗಳು ಸುಸಾಂಗವಾಗಿ ನಡೆಯುತ್ತಿವೆ.

ಸೌರಶಕ್ತಿ ಬಳಕೆಯಿಂದ ಪ್ರತಿ ತಿಂಗಳು ₹ 12 ಸಾವಿರಕ್ಕೂ ಅಧಿಕ ವಿದ್ಯುತ್‌ ಬಿಲ್ ಉಳಿತಾಯವಾಗುತ್ತಿದೆ. ಟಿಸಿ ಸುಟ್ಟಾಗ ನಿಯಮಿತವಾಗಿ ವಿದ್ಯುತ್ ಪೂರೈಕೆ ಆಗುತ್ತಿರಲಿಲ್ಲ, ಯಾವುದಾದರೂ ಸಮಸ್ಯೆಯಿಂದ ವಿದ್ಯುತ್ ಕೈ ಕೊಟ್ಟರೆ ನಮ್ಮ ಕಾರ್ಯಾಲಯದಲ್ಲಿನ ಕೆಲಸಗಳು ಹಾಗೇ ಉಳಿಯುತ್ತಿದ್ದವು. ಈಗ ಸೌರ ವಿದ್ಯುತ್‌ ಬಳಕೆಯಿಂದ ಯಾವ ತೊಂದರೆಯೂ ಇಲ್ಲ ಎಂದು ಪಿಡಿಓ ಜಯಲಕ್ಷ್ಮಿ ದಶವಂತ ‘ಪ್ರಜಾವಾಣಿ’ಗೆ ತಿಳಿಸಿದರು.

ಟಿಸಿ ಸುಟ್ಟಾಗ ಮೂರ್ನಾಲ್ಕು ದಿನ ವಿದ್ಯುತ್‌ ಹೋಗುತ್ತಿತ್ತು. ಆನ್‌ಲೈನ್‌ ಇಂಟರ್‌ನೆಟ್‌ ಕೆಲಸಗಳು ನಿಂತು ಹೋಗುತ್ತಿದ್ದವು. ಮಳೆ, ಗಾಳಿ, ಸಿಡಿಲು, ಮಿಂಚು ಇದ್ದಾಗ ಯಾವುದೇ ವಿದ್ಯುತ್ ಚಾಲಿತ ಕೆಲಸಗಳು ಆಗುತ್ತಿರಲಿಲ್ಲ ಈ ಸೌರ ವಿದ್ಯುತ್‌ ಪ್ರಾರಂಭವಾದಾಗಿನಿಂದ ಈ ಸಮಸ್ಯೆಗಳೂ ದೂರಾಗಿವೆ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷ ಸುಭಾಸಗೌಡ ಪಾಟೀಲ ತಿಳಿಸಿದರು.

ಸರ್ಕಾರದ ಯಾವುದಾದರೂ ವಿಡಿಯೋ ಕಾನ್ಫರೆನ್ಸ್, ಇತರೆ ತರಬೇತಿಗಳಿದ್ದಾಗ ನಿರಂತರವಾಗಿ ನೋಡಲು ಸಹಕಾರಿಯಾಗಿದೆ. ಇದರಿಂದ ವಿದ್ಯುತ್ ನಿಲುಗಡೆ ಆಗುತ್ತದೆ ಎಂಬ ಆತಂಕ ಇರುವದಿಲ್ಲ. ದಿನದ 24 ಗಂಟೆಯೂ ನಿರಂತರವಾಗಿ ವಿದ್ಯುತ್ ಇರುವುದರಿಂದ ಯಾವುದೇ ಕಾರ್ಯಗಳು ಅಪೂರ್ಣವಾಗುವುದಿಲ್ಲ.

ಬಿಜ್ಜರಗಿ ಗ್ರಾಮ ಪಂಚಾಯ್ತಿಯೂ ನರೇಗಾ ಯೊಜನೆಯಡಿ ವಿವಿಧ ಕಾಮಗಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ್ದಾರೆ. ಈ ಪಂಚಾಯ್ತಿ ಪಿಡಿಓ ಹಾಗೂ ಸದಸ್ಯರ ಹಾಗೂ ಗ್ರಾಮಸ್ಥರ ಸಹಕಾರ ಬಹಳ ಇದೆ. ಒಟ್ಟಿನಲ್ಲಿ ಎಲ್ಲರೂ ಸೇರಿ ಅಭಿವೃದ್ಧಿ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಕೆಲವೊಂದು ಪಂಚಾಯ್ತಿಗಳು ಸೋಲಾರ್‌ ಬಳಕೆ ಮಾಡಿವೆ. ಆದರೆ, ಸಂಪೂರ್ಣ ಸೋಲಾರ್‌ ಬಳಸಿ ಇಡೀ ಪಂಚಾಯ್ತಿಯ ಕಾರ್ಯಗಳು, ಕೊಳವೆಬಾವಿ ಸಹ ಸೋಲಾರ್‌ ಮೇಲೆ ಕಾರ್ಯನಿರ್ವಹಿಸುವುದು ಬಿಜ್ಜರಗಿ ಗ್ರಾಮ ಪಂಚಾಯ್ತಿ ಒಂದೇ ಎಂದು ಜಿಲ್ಲಾ ಪಂಚಾಯ್ತಿ ಸಿಇಓ ಗೋವಿಂದ ರೆಡ್ಡಿಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.