ವಿಜಯಪುರ: ಶೈಕ್ಷಣಿಕ ವರ್ಷ ಆರಂಭಗೊಂಡು ಎರಡೂವರೆ ತಿಂಗಳ ಜಿಲ್ಲೆಯ ವಿದ್ಯಾರ್ಥಿಗಳಿಗೆ ‘ಉಚಿತ ಸೈಕಲ್ ಭಾಗ್ಯ’ ದೊರಕಿದ್ದು, ಶೂ–ಸಾಕ್ಸ್, ಸಮವಸ್ತ್ರಕ್ಕಾಗಿ ಇನ್ನೂ ಕೆಲವು ದಿನ ಕಾಯಬೇಕಾಗಿದೆ.
ಪ್ರತಿಯೊಬ್ಬ ವಿದ್ಯಾರ್ಥಿಗೂ ಗುಣಮಟ್ಟದ ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದ ಹಾಗೂ ಮಕ್ಕಳನ್ನು ಸರ್ಕಾರಿ ಶಾಲೆಗಳತ್ತ ಸೆಳೆಯಲು ಸರ್ಕಾರ ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ. ಸಕಾಲಕ್ಕೆ ಈ ಯೋಜನೆಗಳು ವಿದ್ಯಾರ್ಥಿಗಳಿಗೆ ದೊರಕಿದರೆ ಸರ್ಕಾರದ ಆಶಯ ಈಡೇರುತ್ತದೆ.
ಆದರೆ, ಶೈಕ್ಷಣಿಕ ವರ್ಷ ಆರಂಭಗೊಂಡು ಎರಡೂವರೆ ತಿಂಗಳು ಕಳೆದರೂ ಜಿಲ್ಲೆಯ ವಿದ್ಯಾರ್ಥಿಗಳಿಗೆ ಸಮವಸ್ತ್ರ ಪೂರೈಕೆ ಮಾಡಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಹಳೆ ಬಟ್ಟೆಗಳನ್ನೇ ಧರಿಸಿಕೊಂಡು ಶಾಲೆಗೆ ಹೋಗುವಂತಾಗಿದೆ. ಶೂ, ಸಾಕ್ಸ್ ಸಹ ವಿತರಿಸಿಲ್ಲ. ಕೆಲ ದಿನಗಳ ಹಿಂದೆಯಷ್ಟೇ ಸೈಕಲ್‌ಗಳು ಬಂದಿದ್ದು,ಬೆರಳೆಣಿಕೆ ಕಡೆ ಮಾತ್ರ ವಿತರಿಸಲಾಗಿದೆ.
‘ಜಿಲ್ಲೆಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿರುವ 8ನೇ ತರಗತಿಯ ವಿದ್ಯಾರ್ಥಿಗಳಿಗೆ 33,850 ಸೈಕಲ್‌ಗಳು 15 ದಿನಗಳ ಹಿಂದೆಯೇ ಬಂದಿವೆ. ಬಿಡಿ ಭಾಗಗಳನ್ನು ಜೋಡಿಸುವ ಕೆಲಸ ಪ್ರಗತಿಯಲ್ಲಿದ್ದು, ಕೆಲಕಡೆ ವಿತರಿಸಲಾಗಿದೆ. ಶೂ ಮತ್ತು ಸಾಕ್ಸ್ ಖರೀದಿಸಲು ನಾಲ್ಕು ದಿನಗಳ ಹಿಂದೆ ಆಯಾ ಎಸ್‌ಡಿಎಂಸಿ ಅನುಮೋದಿತ ಸಮಿತಿ ಖಾತೆಗೆ ಹಣ ಬಿಡುಗಡೆಯಾಗಿದೆ. ಸಮವಸ್ತ್ರಗಳು ಇನ್ನೂ ಬಂದಿಲ್ಲ. ರಾಜ್ಯ ಸರ್ಕಾರ ನೇರವಾಗಿ ಟೆಂಡರ್ ಕರೆದು ಒಂದು ಜತೆ ನೀಡುತ್ತದೆ. ಮತ್ತೊಂದು ಜತೆ ಖರೀದಿಸಲು ಆಯಾ ಎಸ್‌ಡಿಎಂಸಿ ಸಮಿತಿಗೆ ಹಣ ಬಿಡುಗಡೆಗೊಳಿಸುತ್ತದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಪ್ರಸನ್ನಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಮಕ್ಕಳಿಗೆ ಗುಣಮಟ್ಟದ ಶೂ–ಸಾಕ್ಸ್ ಸಿಗಲಿ ಎಂಬ ಕಾರಣದಿಂದ ಕಡ್ಡಾಯವಾಗಿ ಎಸ್‌ಡಿಎಂಸಿ ಅನುಮೋದಿತ ಸಮಿತಿಯು ಲಿಬರ್ಟಿ, ಬಾಟಾ, ಲಿಕ್ಕರ್, ಲ್ಯಾನ್ಸರ್, ಪಾರಾಗಾನ್ ಕಂಪನಿಯದ್ದೇ ಖರೀದಿಸಿ ವಿತರಿಸಲು ಸರ್ಕಾರ ಸೂಚಿಸಿದೆ. ಅದರಂತೆ ಪ್ರತಿಯೊಂದು ಶಾಲೆಯ ವಿದ್ಯಾರ್ಥಿಗಳಿಗೆ ಆದಷ್ಟು ಶೀಘ್ರ ಒಂದು ಜತೆ ಶೂ, ಎರಡು ಜತೆ ಸಾಕ್ಸ್ ನೀಡಲು ಸೂಚಿಸಲಾಗಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.