ವಿಜಯಪುರ: ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಮೂಲಕ ನಗರದ ಟೈಕೊಂಡೊ ಸಂಸ್ಥೆಯ ವಿದ್ಯಾರ್ಥಿಗಳು ಗುಮ್ಮಟ ನಗರಿಯ ಕೀರ್ತಿ ಹೆಚ್ಚಿಸಿದ್ದಾರೆ.
ಮೇ ತಿಂಗಳಲ್ಲಿ ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್‌ಷಿಪ್‌ನಲ್ಲಿ ವಿವಿಧ ವಿಭಾಗಗಳಲ್ಲಿ 4 ಚಿನ್ನ, 6 ಬೆಳ್ಳಿ ಹಾಗೂ 4 ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ಜಿಲ್ಲೆಗೆ ಹಾಗೂ ಟೈಕೊಂಡೊ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.
ಅನುಪಮ ಬೆಳ್ಳುಬ್ಬಿ 8 ವರ್ಷದೊಳಗಿನ ವಿಭಾಗದ ಪೈಟಿಂಗ್ ಸ್ಪರ್ಧೆಯಲ್ಲಿ ಚಿನ್ನ, ಕಟಾ ಸ್ಪರ್ಧೆಯಲ್ಲಿ ಬೆಳ್ಳಿ, ಪಾಯಲ್ ರಾಠೋಡ 9 ರಿಂದ 10 ವರ್ಷದೊಳಗಿನ ವಿಭಾಗದ ಪೈಟಿಂಗ್‌ನಲ್ಲಿ ಚಿನ್ನ, ಕಟಾದಲ್ಲಿ ಬೆಳ್ಳಿ, ಸಿಫಾಲಿ ರಾಠೋಡ 14 ವರ್ಷದೊಳಗಿನ ವಿಭಾಗದ ಪೈಟಿಂಗ್‌ನಲ್ಲಿ ಚಿನ್ನ, ಕಟಾದಲ್ಲಿ ಬೆಳ್ಳಿ, ಸಂದೀಪ ಲಮಾಣಿ 17 ವರ್ಷದೊಳಗಿನ ವಿಭಾಗದ ಪೈಟಿಂಗ್‌ನಲ್ಲಿ ಚಿನ್ನ, ಕಟಾದಲ್ಲಿ ಕಂಚು, ಆನಂದ ರಾಠೋಡ 20 ವರ್ಷ ಮೇಲ್ಪಟ್ಟ ವಿಭಾಗದ ಪೈಟಿಂಗ್‌ನಲ್ಲಿ ಬೆಳ್ಳಿ, ಕಟಾದಲ್ಲಿ ಕಂಚು, ಅಂಜಲಿ ರಾಠೋಡ 10 ವರ್ಷದೊಳಗಿನ ವಿಭಾಗದ ಕಟಾದಲ್ಲಿ ಬೆಳ್ಳಿ, ಚಿನ್ನಾ ಲಮಾಣಿ 22 ವರ್ಷದೊಳಗಿನ ವಿಭಾಗದ ಕಟಾದಲ್ಲಿ ಕಂಚು,17 ವರ್ಷದ ವಿಭಾಗದ ಕಟಾದಲ್ಲಿ ಕಿರಣ ಪವಾರ ಬೆಳ್ಳಿ, ರೋಹಿತ ರಾಠೋಡ ಕಂಚಿನ ಪದಕ ಸಾಧಕ ಮಾಡಿದ್ದಾರೆ.
‘ಸಂಸ್ಥೆಯಿಂದ ಕ್ರೀಡಾಕೂಟ ಆಯೋಜಿಸಿ ಜಿಲ್ಲೆಯ ವಿವಿಧ ಶಾಲಾ–ಕಾಲೇಜು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ನಂತರ ವಿಜೇತ ಮಕ್ಕಳಿಗೆ ಉತ್ತಮ ತರಬೇತಿ ನೀಡಿ, ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾಕೂಟಗಳಿಗೆ ಕರೆದೊಯ್ಯುತ್ತೇವೆ. ದೊಣ್ಣೆ ವರಸೆ, ಶಾಟ್‌ಪಟ್‌ನಲ್ಲಿ ಹಲವು ರಾಷ್ಟ್ರ ಮಟ್ಟದ ಪ್ರಶಸ್ತಿಗಳು ಬಂದಿವೆ. ಡಿಸ್ಕಸ್ ಥ್ರೊ, ಕೊಕ್ಕೊ, ಕಬಡ್ಡಿಯಲ್ಲಿ ಜಿಲ್ಲಾ, ತಾಲ್ಲೂಕು ಮಟ್ಟದ ಕ್ರೀಡಾಕೂಟಗಳಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ’ ಎಂದು ಸಂಸ್ಥೆಯ ಕಾರ್ಯದರ್ಶಿ ವಿಜಯಕುಮಾರ ರಾಠೋಡ ‘ಪ್ರಜಾವಾಣಿ’ಗೆ ತಿಳಿಸಿದರು.
‘2012ರಲ್ಲಿ ಆರಂಭಗೊಂಡ ಸಂಸ್ಥೆಯಿಂದ ಇದುವರೆಗೆ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿದೆ. 2014ರ ಜನವರಿ 26 ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಸರ್ಕಾರಿ ಶಾಲೆಗಳ 700 ವಿದ್ಯಾರ್ಥಿನಿಯರಿಗೆ ಸ್ವಯಂ ರಕ್ಷಣೆ ತಂತ್ರಗಳ ಪ್ರದರ್ಶನ ಮಾಡಿದ್ದೇವೆ. ಸಂಸ್ಥೆಯಲ್ಲಿ ಹೆಣ್ಣುಮಕ್ಕಳಿಗೆ ಉಚಿತ, ಗಂಡು ಮಕ್ಕಳಿಗೆ ಕಡಿಮೆ ಶುಲ್ಕ ಪಡೆದುಕೊಳ್ಳುತ್ತೇವೆ. ಸರ್ಕಾರಿ ಶಾಲೆಗಳಲ್ಲಿಯೂ ಆಗಾಗ ಉಚಿತವಾಗಿ ಸ್ವಯಂ ರಕ್ಷಣೆಯ ತರಬೇತಿ ನೀಡುತ್ತೇವೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.