ADVERTISEMENT

ಕ್ರೀಡಾ ನಿಯಮ ಮೀರಿದ ಶಾಲೆಗಳು ಕಪ್ಪುಪಟ್ಟಿಗೆ: ಶಿಕ್ಷಣಾಧಿಕಾರಿ ಬಿ.ಎಸ್. ಸಾವಳಗಿ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2024, 15:21 IST
Last Updated 20 ಸೆಪ್ಟೆಂಬರ್ 2024, 15:21 IST
ತಾಳಿಕೋಟೆಯ ತಾಲ್ಲೂಕಿನ ಮೈಲೇಶ್ವರ ಗ್ರಾಮದಲ್ಲಿ ನಡೆದ ಮುದ್ದೇಬಿಹಾಳ ತಾಲ್ಲೂಕಾ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ ಶುಕ್ರವಾರ ಉದ್ಘಾಟಿಸಿದರು
ತಾಳಿಕೋಟೆಯ ತಾಲ್ಲೂಕಿನ ಮೈಲೇಶ್ವರ ಗ್ರಾಮದಲ್ಲಿ ನಡೆದ ಮುದ್ದೇಬಿಹಾಳ ತಾಲ್ಲೂಕಾ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ ಶುಕ್ರವಾರ ಉದ್ಘಾಟಿಸಿದರು   

ತಾಳಿಕೋಟೆ: ‘ಕೆಲವು ಶಾಲೆಗಳು ವಯೋಮಿತಿ ಮೀರಿದ ಅನರ್ಹ ಮಕ್ಕಳನ್ನು ಸೇರಿಸಿಕೊಂಡು ಆಟವಾಡಿಸಿ ಕ್ರೀಡೆಗೆ ಮಸಿ ಬಳಿಯುವ ಕೆಲಸ ಮಾಡುತ್ತಿವೆ. ಅಂತಹ ಶಾಲೆಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್. ಸಾವಳಗಿ ಎಚ್ಚರಿಕೆ ನೀಡಿದರು.

ತಾಲ್ಲೂಕಿನ ಮೈಲೇಶ್ವರ ಗ್ರಾಮದ ಬ್ರಿಲಿಯಂಟ್ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯಲ್ಲಿ ಶುಕ್ರವಾರ ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿ ಕಾರ್ಯಾಲಯ ಬ್ರಿಲಿಯಂಟ್ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮೈಲೇಶ್ವರ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಮುದ್ದೇಬಿಹಾಳ ತಾಲ್ಲೂಕಾ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

‘ನಿರ್ಣಾಯಕರು ಸಮಚಿತ್ತದಿಂದ ನ್ಯಾಯ ನಿರ್ಣಯ ಮಾಡಿ ಅರ್ಹತೆಯುಳ್ಳ ಮಗು ಹಾಗೂ ತಂಡಕ್ಕೆ ಮುಂದಿನ ಹಂತದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಬೇಕು’ ಎಂದರು.

ADVERTISEMENT

‘ವಿದ್ಯಾರ್ಥಿಗಳು ಉಜ್ವಲ ಭವಿಷ್ಯಕ್ಕಾಗಿ ಪಾಠಗಳ ಅಧ್ಯಯನದೊಂದಿಗೆ ಉತ್ತಮ ಆರೋಗ್ಯ, ದೇಹದಾರ್ಢ್ಯ ಪಡೆಯಬೇಕು. ಇದಕ್ಕಾಗಿ ಆಟೋಟಗಳಲ್ಲಿ ಭಾಗವಹಿಸಬೇಕು’ ಎಂದು ಸಲಹೆ ನೀಡಿದರು.

ಬ್ರಿಲಿಯಂಟ್‌ ಶಿಕ್ಷಣ ಸಂಸ್ಥೆ ಅಧ್ಯಕ್ಷ ನಾನಾಗೌಡ ಬಿರಾದಾರ ಮಾತನಾಡಿದರು. ಕ್ಷೇತ್ರ ಸಮನ್ವಯಾಧಿಕಾರಿ ಯು.ಬಿ.ದರಿಕಾರ, ದೈಹಿಕ ಶಿಕ್ಷಣ ಪರಿವೀಕ್ಷಕ ಬಿ.ವೈ. ಕವಡಿ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಎಂ.ಎಂ. ಬೆಳಗಲ್ಲ, ಶಿಕ್ಷಣ ಸಂಯೋಜಕ ಎಸ್.ಎಸ್. ಹಿರೇಮಠ, ಬಿ.ಆರ್‌ಪಿ. ಕಾಶಿನಾಥ ಸಜ್ಜನ, ಸಿ.ಆರ್‌ಪಿ. ಆರ್.ಎಸ್.ಮೂರಮನ, ಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಶಂಕರ ಕಟ್ಟಿಮನಿ, ಕಸ್ತೂರಿಬಾಯಿ ಹೆಬ್ಬಾಳ, ಜಂಗಮಯ್ಯ ಹಿರೇಮಠ, ಶಂಕ್ರೆಮ್ಮ ರಂಜಣಗಿ, ಪಿಡಿಒ ಪ್ರಭುಗೌಡ ಚನ್ನೂರ ಪಾಲ್ಗೊಂಡಿದ್ದರು.

ವಿನಾಯಕ ಪಟಗಾರ ನಿರ್ವಹಿಸಿದರು. ಸವಿತಾ ಅನಂತರೆಡ್ಡಿ ಸ್ವಾಗತಿಸಿದರು. ಸಿದ್ದು ಕರಡಿ ವಂದಿಸಿದರು.

ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ

ಸಹಶಿಕ್ಷಕರಂತೆ ದೈಹಿಕ ಶಿಕ್ಷಣ ಶಿಕ್ಷಕರನ್ನೂ ಪರಿಗಣಿಸಿ ಎಲ್ಲ ಸೌಲಭ್ಯ ಒದಗಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿ ದೈಹಿಕ ಶಿಕ್ಷಣ ಶಿಕ್ಷಕರು ತೋಳಿಗೆ ಕಪ್ಪು ಪಟ್ಟಿ ಧರಿಸಿ ಕ್ರೀಡಾಕೂಟದಲ್ಲಿ ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.