ADVERTISEMENT

ರಾಜ್ಯಮಟ್ಟದ ಓಟದಲ್ಲಿ ಪೂಜಾ ಮಿಂಚು

ಕ್ರೀಡಾ ಸಾಧನೆ ಮಾಡುತ್ತಿರುವ ಗ್ರಾಮೀಣ ಪ್ರತಿಭೆ

ಪ್ರಕಾಶ ಎನ್.ಮಸಬಿನಾಳ
Published 4 ಡಿಸೆಂಬರ್ 2019, 8:50 IST
Last Updated 4 ಡಿಸೆಂಬರ್ 2019, 8:50 IST
ಬಸವನಬಾಗೇವಾಡಿ ತಾಲ್ಲೂಕಿನ ಉಪ್ಪಲದಿನ್ನಿ ಎಲ್.ಟಿ ಸರ್ಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿನಿ ಪೂಜಾ ಲಮಾಣಿ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾಗಿ ಪ್ರಶಸ್ತಿ ಪಡೆದುಕೊಳ್ಳುತ್ತಿರುವುದು
ಬಸವನಬಾಗೇವಾಡಿ ತಾಲ್ಲೂಕಿನ ಉಪ್ಪಲದಿನ್ನಿ ಎಲ್.ಟಿ ಸರ್ಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿನಿ ಪೂಜಾ ಲಮಾಣಿ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾಗಿ ಪ್ರಶಸ್ತಿ ಪಡೆದುಕೊಳ್ಳುತ್ತಿರುವುದು   

ಬಸವನಬಾಗೇವಾಡಿ: ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಆಸಕ್ತಿಯಿಂದ ಭಾಗವಹಿಸುವ ಮೂಲಕ ಸಾಧನೆ ಪಥದತ್ತ ಸಾಗುತ್ತಿರುವ ತಾಲ್ಲೂಕಿನ ಉಪ್ಪಲದಿನ್ನಿ ಎಲ್.ಟಿ ಸರ್ಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಪೂಜಾ ಅಶೋಕ ಲಮಾಣಿ ಇತರರಿಗೆ ಪ್ರೇರಣೆಯಾಗಿದ್ದಾಳೆ.

ಐದನೆ ತರಗತಿಯಿಂದಲೇ ಕ್ರೀಡಾಸಕ್ತಿ ಬೆಳೆಸಿಕೊಂಡಿರುವ ಪೂಜಾ, ಮುಖ್ಯ ಶಿಕ್ಷಕ ಎಲ್.ಎನ್.ನದಾಫ್ ಹಾಗೂ ಶಿಕ್ಷಕರ ಮಾರ್ಗದರ್ಶನದಲ್ಲಿ ಉದ್ದ ಜಿಗಿತ, ಎತ್ತರ ಜಿಗಿತ, ಓಟ ಸೇರಿದಂತೆ ವಿವಿಧ ಆಟಗಳಲ್ಲಿ ಹೆಚ್ಚಿನ ಆಸಕ್ತಿ ವಹಿಸುತ್ತಿದ್ದಾಳೆ.

ಶಾಲೆಯಲ್ಲಿ ಆಟದ ಅವಧಿ ಸೇರಿದಂತೆ ಬಿಡುವಿನ ಸಮಯದಲ್ಲಿ ಶಿಕ್ಷಕರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿರುವ ಪೂಜಾ, ರಾಜು ಲಮಾಣಿ ಅವರ ಪ್ರೋತ್ಸಾಹದೊಂದಿಗೆ ತಾಂಡಾಕ್ಕೆ ಹೊಂದಿಕೊಂಡಿರುವ ರಸ್ತೆ ಬದಿಯಲ್ಲಿ ಪ್ರತಿನಿತ್ಯ ಬೆಳಿಗ್ಗೆ 3ಕಿ.ಮೀ ಗಿಂತ ಹೆಚ್ಚು ಓಡುವುದನ್ನು ರೂಢಿಸಿಕೊಂಡಿದ್ದಾಳೆ. ಅಲ್ಲದೇ ಉದ್ದ ಜಿಗಿತ, ಎತ್ತರ ಜಿಗಿತ ಸೇರಿದಂತೆ ವಿವಿಧ ವೈಯಕ್ತಿಕ ಆಟಗಳ ತರಬೇತಿ ಪಡೆದುಕೊಳ್ಳುತ್ತಿದ್ದಾಳೆ.

ADVERTISEMENT

ಪೂಜಾಳ ಕ್ರೀಡಾಸಕ್ತಿಗೆ ಎಸ್‌ಡಿಎಂಸಿ ಅಧ್ಯಕ್ಷ ರವಿ ಎಸ್.ಲಮಾಣಿ, ಸದಸ್ಯರು ಸೇರಿದಂತೆ ಇತರರು ಪ್ರೋತ್ಸಾಹ ನೀಡುತ್ತಿದ್ದಾರೆ. ಓದಿನೊಂದಿಗೆ ಕ್ರೀಡೆಯಲ್ಲೂ ಸಾಧನೆ ಮಾಡುವ ಮೂಲಕ ಮನೆ ಹಾಗೂ ತಾಂಡಾದ ಹೆಸರು ತರಬೇಕು ಎಂದು ಪಾಲಕರು ಹುರಿದುಂಬಿಸುತ್ತಿದ್ದಾರೆ.

ಪ್ರೋತ್ಸಾಹದ ಹುಮ್ಮಸ್ಸಿನೊಂದಿಗೆ ಕ್ರೀಡಾಸಕ್ತಿ ಹೆಚ್ಚಿಸಿಕೊಂಡಿರುವ ಪೂಜಾ, ಕಳೆದ ವರ್ಷ 600 ಮೀ. ಓಟದ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದರು. ಪ್ರಸಕ್ತ ವರ್ಷ 600 ಮೀ. ಓಟ ಹಾಗೂ ಉದ್ದ ಜಿಗಿತ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ.

‘ಶಿಕ್ಷಕರು, ಪಾಲಕರ ಪ್ರೋತ್ಸಾಹ ಸೇರಿದಂತೆ ಇತರರು ನನ್ನ ಕ್ರೀಡಾಸಕ್ತಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಮುಂದಿನ ವರ್ಷ ರಾಜ್ಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಬೇಕು ಎಂಬ ಹಂಬಲವಿದೆ. ಹಿರಿಯ ತರಬೇತುದಾರರಲ್ಲಿ ತರಬೇತಿ ಪಡೆಯಬೇಕು ಎಂಬ ಇಚ್ಛೆ ಇದೆ. ಅವಕಾಶಗಳು ಒದಗಿಬಂದರೆ ಸಾಧನೆ ಮಾಡಿ ತೋರಿಸುತ್ತೇನೆ’ ಎಂದು ಆತ್ಮವಿಶ್ವಾಸದಿಂದ ನುಡಿಯುತ್ತಾಳೆ ಪೂಜಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.