ನಾಲತವಾಡ: ತಾಲ್ಲೂಕಿನ ಮುಂಗಾರು ಹಂಗಾಮಿನಲ್ಲಿನ ತೊಗರಿ ಬೆಳೆ ಸದ್ಯಕ್ಕೆ ಹೂವು ಮತ್ತು ಚಿಗುರು ಕಾಯಿ ಬರುತ್ತಿದ್ದು, ಜೊತೆಗೆ ಕೀಟಗಳ ಬಾಧೆಯು ಉಂಟಾಗಿದೆ. ಹೀಗಾಗಿ ರೈತರು ಕೀಟನಾಶಕ ಸಿಂಪರಣೆ ಕಾರ್ಯವನ್ನು ಭರದಿಂದ ಆರಂಭಿಸಿದ್ದಾರೆ. ನಾಲತವಾಡ ವಲಯದಲ್ಲಿ ಹೆಚ್ಚಿನ ತೊಗರಿ ಬಿತ್ತನೆ ಮಾಡಲಾಗಿದೆ.
ತೊಗರಿ ಬೆಳೆ ಕಳೆದ ಎಲ್ಲ ವರ್ಷಗಳಿಗಿಂತ ಹೆಚ್ಚು ಎತ್ತರವಾಗಿ ಬೆಳೆದು ನಿಂತು, ಹೊಲದಲ್ಲಿ ತಿರುಗಾಡುವುದೇ ಸವಾಲಾಗಿದೆ, ಕೀಟಗಳಿಂದ ಹೂವು ಮತ್ತು ಚಿಗುರುಗಾಯಿಗಳನ್ನು ರಕ್ಷಿಸಿಕೊಳ್ಳಲು ಕೀಟನಾಶಕ ಸಿಂಪರಣೆಯಂತೂ ಅನಿವಾರ್ಯವಾಗಿದೆ.
ಕಾರಣ ಈ ಹಿಂದಿನ ಹಲವು ವರ್ಷಗಳಿಂದ ರೈತರು ಕೀಟನಾಶಕ ಸಿಂಪಡಣೆಯನ್ನು ತಮ್ಮ ಬೆನ್ನಿಗೆ ರಾಸಾಯನಿಕ ಟ್ಯಾಂಕ್ ಕಟ್ಟಿಕೊಂಡು, ಗನ್ ಪಂಪ್ ಹಿಡಿದು ತಾವೇ ಸಿಂಪರಣೆ ಕಾರ್ಯ ಮಾಡುತ್ತಿದ್ದರು. ಸಿರಿವಂತರು ಟ್ರ್ಯಾಕ್ಟರ್ ಮೂಲಕ ಸಿಂಪರಣೆ ಮಾಡಿಸುತ್ತಿದ್ದರು. ಪ್ರಸಕ್ತ ವರ್ಷದಲ್ಲಿ ಆಳೆತ್ತರವಾಗಿ ಬೆಳೆದು ನಿಂತ ಪೈರಿಗೆ ಸದ್ಯದ ಮಟ್ಟಿಗೆ ಮಾನವನಿಂದ ಕ್ರಿಮಿನಾಶಕ ಸಿಂಪರಣೆ ಅಸಾಧ್ಯ. ಟ್ರಾಕ್ಟರ್ ಮೂಲಕ ಸಿಂಪರಣೆ ಮಾಡಿದರೆ ಚಿಗುರು ಕಾಯಿ, ಕಾಪು ಹೊತ್ತು ನಿಂತ ಆರೇಳು ಅಡಿ ಎತ್ತರದ ತೊಗರಿ ಪೈರು ಬಾಗುವ, ಮುರಿಯುವ, ಎಳೆಗಾಯಿ, ಹೂವು ಉದುರುವ ಸಾಧ್ಯತೆ ಇದೆ. ಹೀಗಾಗಿ ಎತ್ತಿನ ಗಾಡಿಗಳ ಮೊರೆ ಹೋಗುವುದು ರೈತರಿಗೆ ಅನಿವಾರ್ಯವಾಗಿದೆ. ಎಲ್ಲೆಡೆ ಯಂತ್ರಗಳ ದರ್ಬಾರ್ ಇದ್ದು, ವಿರಳವಾಗಿರುವ ಎತ್ತಿನ ಬಂಡಿಗಳಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ.
ಈ ವರ್ಷ ಬೇಳೆಗೆ ಸಕಾಲಕ್ಕೆ ಮಳೆ ಸುರಿಯುತ್ತಿದ್ದಂತೆ ಅವುಗಳ ಹಿಗ್ಗುವಿಕೆ ಕೂಡಾ ಇಮ್ಮಡಿಗೊಂಡಿದೆ. ಕೀಟ ಬಾಧೆಯಿಂದ ರಕ್ಷಿಸಿಕೊಳ್ಳಲು ಕನಿಷ್ಠವೆಂದರೂ ಐದಾರು ಬಾರಿ ಎಣ್ಣೆ ಹೊಡೆಯಬೇಕು ಒಂದು ಬಾರಿ ಎತ್ತಿನ ಬಂಡಿಯ ಮೂಲಕ ಕೀಟನಾಶಕ ಸಿಂಪರಣೆ ಮಾಡಲು ಗಾಡಿ ಬಾಡಿಗೆ ₹ 1800, ಸಿಂಪರಣೆ ಮಾಡುವ ವ್ಯಕ್ತಿಗೆ ₹ 400 ಪಗಾರ, ಸಿಂಪರಣೆ ಪಂಪ್ ಗೆ ₹400, ₹ 200 ಪೆಟ್ರೋಲ್ ರಂತೆ ಕೊಡಬೇಕಿದೆ. ಒಟ್ಟಿನಲ್ಲಿ ಒಂದು ಕೂರಿಗೆ ಹೊಲಕ್ಕೆ ಒಂದು ಸಲಕ್ಕೆ ರಾಸಾಯನಿಕ (ವಿಷ ಹಾಗೂ ಪೋಷಕಾಂಶಗಳ) ಹೊರತುಪಡಿಸಿ ಇಷ್ಟು ಖರ್ಚು ಮಾಡುವ ರೈತರಿಗೆ ಫಸಲು ಕೈಗೆ ಬಂದಾಗ ಉಳಿಯುವುದು ಏನು ಎಂಬ ಪ್ರಶ್ನೆ ಏಳುತ್ತದೆ.
ಮೋಟಾರ್ ವಾಹನವನ್ನು ನಿರ್ವಹಿಸುವುದಕ್ಕಿಂತ ಒಂದು ಜೋಡಿ ಆರೋಗ್ಯಕರ ಎತ್ತುಗಳ ನಿರ್ವಹಣೆ ಹೆಚ್ಚು ದುಬಾರಿಯಾಗಿದೆ.ಅಡಿವೆಪ್ಪ ಕೆಂಭಾವಿ, ಎತ್ತಿನ ಗಾಡಿ ಮಾಲೀಕ ರೈತ
ಕೂರಿಗೆಗೆ ಒಂದು ಸಲ ಕೀಟನಾಶಕಕ್ಕೆ ₹ 3000 ಸಿಂಪರಣೆ ಮಾಡುವವನಿಗೆ ₹ 700 ಖರ್ಚು ಮಾಡಿದರೆ ₹ 30 ಸಾವಿರ ಖರ್ಚಾಗುತ್ತದೆ ನಮ್ಮಲ್ಲಿ ಎತ್ತಿನ ಗಾಡಿ ಇದ್ದಿದ್ದರೆ ₹ 15 ಸಾವಿರ ನಾಲ್ಕು ಎಕರೆಗೆ ಉಳಿಯುತ್ತಿತ್ತು.ಮಲ್ಲಪ್ಪ.ಬ.ಕಸಬೇಗೌಡ್ರ, ಕೃಷಿಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.