ಮುದ್ದೇಬಿಹಾಳ: ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಉರ್ದು ಭಾಷೆಯನ್ನು ಒಂದು ಭಾಷೆಯನ್ನಾಗಿ ಓದುವುದಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂಬ ಅಲ್ಪಸಂಖ್ಯಾತ ಸಮುದಾಯದ ಬೇಡಿಕೆಗೆ ರಾಜ್ಯ ಸರ್ಕಾರ ಸ್ಪಂದಿಸಿದ್ದು, ಈ ವರ್ಷದಿಂದಲೇ ಒಂದು ಭಾಷೆಯನ್ನಾಗಿ ಉರ್ದು ಕಲಿಸುವಂತೆ ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಅವಕಾಶ ಕಲ್ಪಿಸಿದೆ.
2024-25ನೇ ಶೈಕ್ಷಣಿಕ ಸಾಲಿನಿಂದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಹೊಸ ವಿಷಯ ಸಂಯೋಜನೆಯನ್ನು ಪ್ರಾರಂಭಿಸಲು ಅನುಮತಿ ನೀಡುವ ಕುರಿತು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಜೂ.18 ರಂದು ಪತ್ರ ಬರೆದಿದ್ದು, ಅದರಂತೆ ಆಯಾ ಜಿಲ್ಲೆಯ ಉಪ ನಿರ್ದೇಶಕರ ಶಿಫಾರಸಿನೊಂದಿಗೆ ಸಲ್ಲಿಸಿದ್ದ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಾಗೂ ಕಾಲೇಜಿನ ಶೈಕ್ಷಣಿಕ ಅಭಿವೃದ್ಧಿ ಪರಿಗಣಿಸಿ ಹೊಸ ಭಾಷೆ ಸಂಯೋಜನೆ ಆರಂಭಿಸಲು ಅನುಮತಿ ನೀಡಿ ಆದೇಶಿಸಿದೆ.
ಹೊಸ ವಿಷಯಗಳ ಬೋಧನೆ/ಹೊಸ ಭಾಷೆಗಳನ್ನು ಬೋಧಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಜಿಲ್ಲಾ ಉಪ ನಿರ್ದೇಶಕರು ಕಡಿಮೆ ಕಾರ್ಯಭಾರ ಹೊಂದಿರುವ ಉಪನ್ಯಾಸಕರನ್ನು ಈ ಕಾಲೇಜುಗಳಿಗೆ ಬೋಧನೆ ಮಾಡಲು ನಿಯಮಾನುಸಾರ ನಿಯೋಜಿಸಿ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ.
ಪ್ರಸಕ್ತ ವರ್ಷದಿಂದಲೇ ಉರ್ದು ಭಾಷೆಯನ್ನು ಒಂದು ಭಾಷೆಯನ್ನಾಗಿ ಆರಂಭಿಸಲು ಸರ್ಕಾರ ಸೂಚನೆ ನೀಡಿದ್ದು ಅದರಂತೆ ನಮ್ಮ ಕಾಲೇಜಿನಲ್ಲಿ ಈ ವರ್ಷದಿಂದ ಬೋಧನೆ ಪ್ರಾರಂಭಿಸಲಾಗುವುದು-ಎಸ್.ಎಸ್.ಅಂಗಡಿ ಪ್ರಾಚಾರ್ಯ ಆದರ್ಶ ಸರ್ಕಾರಿ ಪಪೂ ಕಾಲೇಜು ಮುದ್ದೇಬಿಹಾಳ
ಉರ್ದು ಒಂದು ಭಾಷೆಯನ್ನಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಕಲಿಸಲು ಕರ್ನಾಟಕ ಮುಸ್ಲಿಂ ಕೌನ್ಸಿಲ್‌ನಿಂದ ಏಳೆಂಟು ವರ್ಷಗಳಿಂದ ಹೋರಾಟ ನಡೆಸಲಾಗಿತ್ತು. ಅಲ್ಪಸಂಖ್ಯಾತ ಮಕ್ಕಳು ಇದರ ಪ್ರಯೋಜನ ಪಡೆದುಕೊಳ್ಳಬೇಕು.ಮಹೆಬೂಬ ಹಡಲಗೇರಿ ಸಾಮಾಜಿಕ ಕಾರ್ಯಕರ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.