ಸಿಂದಗಿ: ಪಟ್ಟಣದ ನಾಲ್ಕೂ ದಿಕ್ಕುಗಳಲ್ಲಿ ರಸ್ತೆಗಳ ಪಕ್ಕದಲ್ಲಿ ಗಬ್ಬೆದ್ದು ನಾರುವ ಸ್ಥಿತಿ ನಿರ್ಮಾಣವಾಗಿದೆ. ಯಾವುದೇ ರಸ್ತೆಯಲ್ಲಿ ಕಾಲಿಟ್ಟರೂ ಮೂಗಿಗೆ ಬಟ್ಟೆ ಮುಚ್ಚಿಕೊಳ್ಳದಿದ್ದರೆ ನಡೆಯುವುದಿಲ್ಲ. ಅಷ್ಟೊಂದು ಕೊಳಗೇರಿ ಇದೆ.
ಇಲ್ಲಿಯ ಪುರಸಭೆ ಆಡಳಿತ ಏನು ಮಾಡುತ್ತಿದೆ ಎಂಬ ಪ್ರಶ್ನೆ ಜನರದ್ದು. ಪುರಸಭೆ ಕಾರ್ಯಾಲಯದಲ್ಲಿ 54 ಜನ ಪೂರ್ಣಾವಧಿ ಕಾರ್ಮಿಕರಿದ್ದಾರೆ. ಅಲ್ಲದೇ, ಸಮಾನ ಕೆಲಸಕ್ಕೆ ಸಮಾನ ಸಂಬಳ ಗುತ್ತಿಗೆ ಅಡಿಯಲ್ಲಿ ಇನ್ನೂ 18 ಕಾರ್ಮಿಕರನ್ನು ತುಂಬಿಕೊಳ್ಳಲು ಟೆಂಡರ್ ಪ್ರಕ್ರಿಯೆ ಮುಂದುವರಿದಿದೆ. 23 ವಾರ್ಡ್‌ಗಳಲ್ಲಿ ಕಸವನ್ನು ಸಾಗಿಸಲು ಕೇವಲ ಐದು ಟಂಟಂ ವಾಹನಗಳಿವೆ. ಇನ್ನೂ ಐದು ವಾಹನಗಳು ಕೆಟ್ಟುನಿಂತು ವರ್ಷಗಳೇ ಆಗಿವೆ. ಅವುಗಳು ಅವಧಿ ಮುಗಿದ ವಾಹನಗಳಾಗಿವೆ. ಹೀಗಾಗಿ ಗ್ಯಾರೇಜ್‌ನಿಂದ ತಂದು ಪುರಸಭೆ ನೀರು ಶುದ್ಧೀಕರಣ ಘಟಕದ ಆವರಣದಲ್ಲಿ ನಿಲ್ಲಿಸಲಾಗಿದೆ ಎನ್ನುತ್ತಾರೆ ಕಿರಿಯ ಆರೋಗ್ಯ ನಿರೀಕ್ಷಕ ನಬಿರಸೂಲ ಉಸ್ತಾದ.
ಪುರಸಭೆ ಕಸದ ವಾಹನಗಳು ತ್ಯಾಜ್ಯ ವಿಲೇವಾರಿ ಘಟಕಕ್ಕೆ ಹೋಗಿ ತ್ಯಾಜ್ಯ ಚೆಲ್ಲುವುದಿಲ್ಲ. ಎಲ್ಲ ರಸ್ತೆಗಳಲ್ಲಿಯೇ ತ್ಯಾಜ್ಯ, ಸತ್ತ ಪ್ರಾಣಿಗಳನ್ನು ಬಿಸಾಕಿ ಹೋಗುತ್ತಾರೆ. ದೂರದ ಬ್ಯಾಕೋಡ ರಸ್ತೆಯಲ್ಲಿನ ಪುರಸಭೆ ತ್ಯಾಜ್ಯ ವಸ್ತುಗಳ ವಿಲೇವಾರಿ ಘಟಕಕ್ಕೆ ಹೋಗುತ್ತಿಲ್ಲ. ನಾಲ್ಕೂ ದಿಕ್ಕುಗಳು ಕೊಳಗೇರಿಯಾಗಲು ಇದೇ ಪ್ರಮುಖ ಕಾರಣ ಎಂದು ಆರೋಪ ಎದುರಾಗಿದೆ. ಅಲ್ಲದೇ ವಾರ್ಡ್‌ಗಳಲ್ಲಿ ಮನೆಯ ಕಸ ಹಾಕಲು ವ್ಯವಸ್ಥೆಯೂ ಇಲ್ಲ.
ತ್ಯಾಜ್ಯ ವಸ್ತುಗಳನ್ನು ವಿಲೇವಾರಿ ಘಟಕದಲ್ಲಿ ಹಾಕಿ ಹಸಿ ಕಸ, ಒಣ ಕಸ ಬೇರ್ಪಡಿಸುವ ಕಾರ್ಯ ಇಂದಿಗೂ ಮಾಡಲಾಗಿಲ್ಲ. ಅಪಾರ ಪ್ರಮಾಣದಲ್ಲಿ ಸಂಗ್ರಹಗೊಂಡ ಘಟಕದಲ್ಲಿನ ತ್ಯಾಜ್ಯಕ್ಕೆ ಬೆಂಕಿ ಹಚ್ಚುವ ಕೆಲಸ ನಿತ್ಯವೂ ನಡೆಯುತ್ತದೆ. ಈ ಕುರಿತು ಲೋಕಾಯುಕ್ತ ಅಧಿಕಾರಿಗಳ ತಂಡ ಈ ಘಟಕದಲ್ಲಿ ತ್ಯಾಜ್ಯ ವಸ್ತುವಿಗೆ ಬೆಂಕಿ ಹಚ್ಚಿರುವುದನ್ನು ಕಂಡು ಗರಂ ಆಗಿ ಕಿರಿಯ ಆರೋಗ್ಯ ನಿರೀಕ್ಷಕರಿಗೆ ತೀವ್ರ ತರಾಟೆಗೆ ತೆಗೆದುಕೊಂಡಿದ್ದರು.
‘ಪಟ್ಟಣದಲ್ಲಿ ಸ್ವಚ್ಛತೆ ಎನ್ನುವುದು ಮರೀಚಿಕೆಯಾಗಿದೆ’ ಎಂದು ಲೋಕಾಯುಕ್ತ ಅಧಿಕಾರಿಗಳು ಪುರಸಭೆ ಕಾರ್ಯಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು.
ಸರ್ಕಾರಿ ಕಾಲೇಜುಗಳ ರಸ್ತೆಯಲ್ಲಿ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಕೆರೆಯ ಮುಖ್ಯದ್ವಾರದಲ್ಲಿ ಭಾರಿ ಪ್ರಮಾಣದ ತ್ಯಾಜ್ಯದ ರಾಶಿ, ಸತ್ತ ಹಂದಿಗಳು ಬಿದ್ದಿದ್ದು, ಜನ ಮೂಗು ಮುಚ್ಚಿಕೊಂಡು ಸಾಗುವುದು ಸಾಮಾನ್ಯವಾಗಿದೆ.
ಮಲಘಾಣ ರಸ್ತೆಯ ಸ್ಮಶಾನದ ಎದುರಿನ ರಸ್ತೆಯಲ್ಲಿ ರಾಶಿ ರಾಶಿ ಗಬ್ಬೆದ್ದು ನಾರುವ ಕಸದ ಗುಡ್ಡವೇ ಕಾಣಿಸುತ್ತದೆ. ಇಲ್ಲಿಯ ಹೊಲಸು ಪರಿಸ್ಥಿತಿ ಜಿಲ್ಲಾಧಿಕಾರಿ ಗಮನಕ್ಕೆ ಬಂದು, ಪುರಸಭೆ ಆಡಳಿತಕ್ಕೆ ಛೀಮಾರಿ ಹಾಕಿದ್ದರೂ ಈವರೆಗೂ ಕಸದ ರಾಶಿ ಹಾಗೆಯೇ ಉಳಿದುಕೊಂಡಿದೆ.
ಯಾರು ಏನಂದರು?
ಬಂದಾಳ ರಸ್ತೆಯಲ್ಲಿ ಜನ ವಾಯುವಿಹಾರಕ್ಕೆ ಹೋಗುತ್ತಾರೆ. ಈ ರಸ್ತೆಯುದ್ದಕ್ಕೂ ಕಸದ ರಾಶಿ ಕೊಳೆತು ಬಿದ್ದ ಸತ್ತ ಪ್ರಾಣಿಗಳು ಕಾಣುತ್ತವೆ. ರಸ್ತೆ ಪಕ್ಕವೇ ಬಹಿರ್ದೆಸೆಯೂ ಮಾಡುತ್ತಾರೆ. ಈ ನರಕಯಾತನೆ ಸಹಿಸಲಾಗದು - ಸುಶಾಂತ ಪೂಜಾರಿ ಮಾಜಿ ಅಧ್ಯಕ್ಷ ಪುರಸಭೆ
ಬಂದಾಳ ರಸ್ತೆಯ ಏಳು ಮಕ್ಕಳ ತಾಯಿ ದೇವಸ್ಥಾನದ ಬಳಿ ನನ್ನ ಅಂಗಡಿ ಎದುರೇ ಗಬ್ಬೆದ್ದು ನಾರುವ ತ್ಯಾಜ್ಯ ಸತ್ತ ಹಂದಿಗಳು ಬಿದ್ದಿವೆ. ಅಂಗಡಿಯಲ್ಲಿ ಕೂರಲು ಆಗದಷ್ಟು ಕೆಟ್ಟ ವಾಸನೆ - ಈರಣ್ಣ ಪ್ರಭು ಮೇತ್ರಿ ಅಂಗಡಿ ವ್ಯಾಪಾರಿ
ನನ್ನ ಮನೆಯ ಎದುರಿನ ರಸ್ತೆಯೆಲ್ಲ ಕೊಳೆಗೇರಿಯಾಗಿದೆ. ವಾಸನೆಯಿಂದ ಮನೆಯಲ್ಲಿ ಕೂರಲೂ ಆಗುತ್ತಿಲ್ಲ. ಪುರಸಭೆ ಕಣ್ಣು ತೆಗೆದು ಸಾರ್ವಜನಿಕರಿಗೆ ಆರೋಗ್ಯಕರ ವಾತಾವರಣ ನಿರ್ಮಾಣ ಮಾಡಬೇಕು - ಮೋಹನ ರಾಠೋಡ ಶಾಂತವೀರ ನಗರ ನಿವಾಸಿ ಸಿಂದಗಿ
ಕಸದ ಸಮಸ್ಯೆ ಇಷ್ಟು ವಿಪರೀತವಾಗಿರುವುದು ನನ್ನ ಗಮನಕ್ಕೆ ಬಂದಿರಲಿಲ್ಲ. ಕೂಡಲೇ ಕಾರ್ಯಪ್ರವೃತ್ತನಾಗುವೆ. ಸ್ವಚ್ಛಗೊಳಿಸಲಾಗುವುದು - ನಬಿರಸೂಲ್ ಉಸ್ತಾದ ಕಿರಿಯ ಆರೋಗ್ಯ ನಿರೀಕ್ಷಕ ಪುರಸಭೆ ಸಿಂದಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.